ನಕ್ಸಲೈಟ್ ಆಗ್ತಾಳಂತೆ ಪ್ರೇಮಂ ಹುಡುಗಿ ಸಾಯಿಪಲ್ಲವಿ!

[adning id="4492"]

ರ್ನಾಟಕದ ಪಾಲಿಗೆ ನಕ್ಸಲ್ ಹೋರಾಟದ ಕಥನ ಒಂದಷ್ಟು ರಕ್ತಸಿಕ್ತ ನೆನಪುಗಳನ್ನು ಉಳಿಸಿ ಬಿಟ್ಟಿದೆ. ಕೆಲ ಮಂದಿ ಸಿನಿಕ ಆಸಾಮಿಗಳ ನಕ್ಸಲ್ ಹೋರಾಟದಲ್ಲಿ ಕಾಡುಪಾಲಾದವರಿಗೆ, ಜೀವ ತೆತ್ತವರಿಗೆ, ವರ್ಷಾಂತರಗಳ ಹೋರಾಟದಿಂದ ಹೈರಾಣುಗೊಂಡು ತಟುಕು ಜೀವ ಉಳಿಸಿಕೊಂಡವರಿಗೆ ಕೆಂಪು ಉಗ್ರರೆಂಬ ಬೋರ್ಡು ತಗುಲಿಸಿ ಆರಾಮಾಗಿದ್ದಾರೆ. ಆದರೆ, ಅದರ ಸರಿ ತಪ್ಪುಗಳಾಚೆಗೆ ಆ ಹೋರಾಟಕ್ಕೆ ಧುಮುಕಿದವರ ಎದೆಯಲ್ಲಿದ್ದ ಕಿಚ್ಚು ಅಂಥಾ ಯಾವ ಲೇಬಲ್ಲುಗಳಿಗೂ ನಿಲುಕುವಂಥಾದ್ದಲ್ಲ. ಕ್ರಾಂತಿಯನ್ನು ಒಪ್ಪುತ್ತೀವೋ, ಬಿಡುತ್ತೀವೋ… ಆದರೆ ಯಾರದ್ದೋ ಸಂಕಟಕ್ಕೆ ಧ್ವನಿಯಾಗಿ, ಯಾವುದೋ ಮನ್ವಂತರದ ಕನಸು ಹೊತ್ತು ಕಾಡು ಸೇರಿದವರ ಮನೋಲೋಕ ಎಸಿ ರೂಮುಗಳಲ್ಲಿ ಕಾಲಲ್ಲಾಡಿಸುತ್ತಾ ಕೂತವರ ನಿಲುಕಿಗೆ ಸಿಗುವಂಥಾದ್ದೂ ಅಲ್ಲ!


ಇಂಥಾ ಅಸಂಗತ ವಿಚಾರಗಳನ್ನು ಒಡಲಲ್ಲಿಟ್ಟುಕೊಂಡಿರೋ ನಕ್ಸಲ್ ಹೋರಾಟ ಈವರೆಗೂ ಸಾಕಷ್ಟು ಬಾರಿ ಸಿನಿಮಾ ಸರಕಾಗಿದೆ. ಕೆಲ ಮಂದಿ ತೆಳು ಗ್ರಹಿಕೆಯಿಂದ ಕಥೆ ಕಟ್ಟಿದರೆ, ಮತ್ತೆ ಕೆಲವರು ನಾನಾ ಸಮಸ್ಯೆಗಳೊಂದಿಗೆ ಅದಕ್ಕೊಂದಿಷ್ಟು ವಾಸ್ತವದ ಲೇಪ ಹಚ್ಚಲು ಪ್ರಯತ್ನಿಸಿದ್ದಾರೆ. ಅದೇ ಸಾಲಿನಲ್ಲಿ ‘ವಿರಾಟ ಪರ್ವಂ ೧೯೯೨’ ಅಂತೊಂದು ಸಿನಿಮಾ ತೆಲುಗು ಭಾಷೆಯಲ್ಲಿ ತಯಾರಾಗುತ್ತಿದೆ. ಈ ಚಿತ್ರದಲ್ಲಿ ಪ್ರೇಮಂ ಖ್ಯಾತಿಯ ಸಾಯಿಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾಳೆ. ಅದು ಸಿಂಗರ್ ಆಗಿ ಫೇಮಸ್ ಆಗಿದ್ದ ಹುಡುಗಿಯೊಬ್ಬಳು ನಕ್ಸಲ್ ಆಗಿ ಬಂದೂಕೆತ್ತಿಕೊಳ್ಳೋ ಕಥೆಯನ್ನಾಧರಿಸಿದ ಚಿತ್ರ. ಈ ಪಾತ್ರವನ್ನು ನಿರ್ವಹಿಸುವ ಸಲುವಾಗಿ ಸಾಯಿಪಲ್ಲವಿ ಈಗ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾಳೆ.
ನಕ್ಸಲ್ ಪಾತ್ರವೆಂದರೆ ಕ್ರಾಂತಿ, ಬಾಂಬೆಸೆಯೋದು, ದಾಳಿ ನಡೆಸೋದು ಮಾತ್ರವೇ ಅಲ್ಲ. ಆ ಪಾತ್ರವನ್ನು ಆವಾಹಿಸಿಕೊಳ್ಳಬೇಕೆಂದರೆ ಅಂಥಾ ಮನಸ್ಥಿತಿಯನ್ನ ಜೀವಿಸಬೇಕಾಗುತ್ತದೆ. ಈ ಕಾರಣದಿಂದಲೇ ಸಾಯಿ ಪಲ್ಲವಿ ಮಾಜಿ ನಕ್ಸಲೈಟ್‌ಗಳಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾಳೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ನಕ್ಸಲ್ ಚಳವಳಿಯ ಹಿನ್ನೆಲೆಯಲ್ಲಿ ತೊಂಬತ್ತರ ದಶಕದ ರಾಜಕೀಯ ಚಿತ್ರಣದ ಕಥೆ ಹೊತ್ತು ಮೂಡಿ ಬರಲಿದೆಯಂತೆ. ಈ ಕಾರಣದಿಂದಲೇ ಈ ಸಿನಿಮಾ ಬಗ್ಗೆ ದಕ್ಷಿಣ ಭಾರತೀಯ ಚಿತ್ರರಂಗ ಕುತೂಹಲದ ಕಣ್ಣಿಟ್ಟಿದೆ.


ಹೇಳಿಕೇಳಿ ತೆಲುಗುನಾಡು ನಕ್ಸಲ್ ಚಳವಳಿಯ ದಾವಾನಲ. ಕೊಂಡಪಲ್ಲಿ ಸೀತಾರಾಮಯ್ಯ, ವರವರ ರಾವ್, ಗದ್ದರ್‌ರಂಥಾ ನಾಯಕರನ್ನು ಕಂಡ ಹೋರಾಟವದು. ಅದಕ್ಕೆ ಧುಮುಕಿ ಸತ್ತವರೆಷ್ಟೋ… ಸುಳಿವೇ ಇಲ್ಲದೆ ಮರೆಯಾದವರೆಷ್ಟೋ… ವೇಣು ಉಡುಗಲ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಚಿತ್ರ ಇಡೀ ಹೋರಾಟದ ಆಳ ಅಗಲಗಳನ್ನು ಅರಿತುಕೊಂಡೇ ಜೀವ ಪಡೆದ ಕಥೆಯನ್ನೊಳಗೊಂಡಿದೆಯಂತೆ. ವೇಣು ಫೀಲ್ಡ್ ವರ್ಕ್ ಮಾಡಿ, ವರ್ಷಾಂತರಗಳ ಕಾಲ ಈ ಬಗ್ಗೆ ಮಾಹಿತಿ ಕಲೆಹಾಕಿಯೇ ಈ ಸಿನಿ೮ಮಾಗೆ ತಯಾರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ವಿರಾಟ ಪರ್ವಂ ಮುಂದಿನ ವರ್ಷಾರಂಭದಲ್ಲಿಯೇ ತೆರೆ ಕಾಣಲಿದೆ.

[adning id="4492"]

LEAVE A REPLY

Please enter your comment!
Please enter your name here