ಸಮಾಜದ ಕ್ರೌರ್ಯಕ್ಕೆ ಕನ್ನಡಿಯಾಗುವ ರಂಗನಾಯಕಿ!

[adning id="4492"]

ಒಂದೇ ಗುಕ್ಕಿಗೆ ಮೈಮನಸುಗಳನ್ನೆಲ್ಲ ಪ್ರಫುಲ್ಲವಾಗಿಸುವ, ನರನಾಡಿಗಳಿಗೂ ಯಾವುದೋ ಅವ್ಯಕ್ತ ತಲ್ಲಣಗಳನ್ನು ತಂದು ತುಂಬುವ ಕವಿತೆಗಳ ಪ್ರಭಾವವಿದೆಯಲ್ಲಾ? ಅದನ್ನು ಸಿನಿಮಾವೊಂದರ ದೃಷ್ಯಗಳಲ್ಲಿ ಹಿಡಿದಿಡೋದು ಬಲು ಕಷ್ಟದ ಕೆಲಸ. ಆದರೆ ನಿರ್ದೇಶಕ ದಯಾಳ್ ಪದ್ಮನಾಭನ್ ಪಾಲಿಗೆ ಅದು ಕರತಲಾಮಲಕ. ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ಅಂಥಾದ್ದೊಂದು ಕಲೆಗಾರಿಕೆ ತೋರಿಸಿದ್ದ ದಯಾಳ್, ನಿರ್ಭಯಾ ಪ್ರಕರಣದ ಬೇಸಿನಲ್ಲೊಂದು ಕಥೆ ಸೃಷ್ಟಿಸಿದ್ದಾರೆಂದಾಕ್ಷಣವೇ ಕುತೂಹಲ ಹುಟ್ಟಿಕೊಂಡಿತ್ತು. ಇಂಥಾ ನಿರೀಕ್ಷೆಗಳ ಜೊತೆಗೇ ಈ ಚಿತ್ರವೀಗ ತೆರೆ ಕಂಡಿವೆ. ಸಮಾಜದ ಕ್ರೌರ್ಯಕ್ಕೆ ಕನ್ನಡಿಯಾಗುತ್ತಲೇ ನೋಡುಗರೆಲ್ಲರ ಭಾವಕೋಶವನ್ನು ಕಲಕುತ್ತಾ ಈ ಚಿತ್ರ ಎಲ್ಲರಿಗೂ ಆಪ್ತವಾಗಿದೆ.


ಆಕೆ ತಬ್ಬಲಿತನವನ್ನು ಬೆನ್ನಿಗಿಟ್ಟುಕೊಂಡೇ ಹುಟ್ಟಿದರೂ ಅದನ್ನೂ ಕೂಡಾ ಸೂಜಿಗಲ್ಲಿನಂಥಾ ಲವಲವಿಕೆಯಾಗಿ ಮಾರ್ಪಾಟು ಮಾಡಿಕೊಂಡು ಚೆಂದದ ಹೆಣ್ಣುಮಗಳು. ಈ ಪಾತ್ರಕ್ಕೆ ಪ್ರತಿಭಾವಂತಯ ನಟಿ ಅದಿತಿ ಪ್ರಭುದೇವ ಜೀವ ತುಂಬಿರೋ ರೀತಿಯೇ ಇಡೀ ಸಿನಿಮಾದ ನಿಜವಾದ ಶಕ್ತಿ. ಹೀಗೆ ತಬ್ಬಲಿಯನ ತುಂಬಿಕೊಂಡವರು ತಮ್ಮ ಸುತ್ತಾ ಸುಳಿದಾಡೋ ಜೀವಗಳನ್ನು ಬಂಧುಗಳಂತೆಯೇ ನೋಡುತ್ತಾರೆ. ಈ ಪಾತ್ರ ಕೂಡಾ ಅಂಥಾದ್ದೇ ಭಾವವನ್ನ ಹೊಂದಿರುವಂಥಾದ್ದು. ಒಂದು ಅಪಾರ್ಟ್‌ಮೆಂಟಿನಲ್ಲಿ ಬದುಕೋ ಈಕೆ, ಆರಂಭದಿಂದಲೂ ಸಂಗೀತದ ಧ್ಯಾನ ಅಚಿಟಿಸಿಕೊಂಡಿರುತ್ತಾಳೆ. ಅದು ಬರಬರುತ್ತಾ ಅನಾಥ ಪ್ರಜ್ಞೆಯನ್ನು ಮೀರಿಕೊಳ್ಳುವ ಮಾರ್ಗವಾಗಿಯೂ ಬದಲಾಗಿರುತ್ತದೆ.


ಹೀಗೆ ಜೊತೆಯಾದ ಸಂಗೀತವನ್ನು ಇತರರಿಗೂ ಕಲಿಸುವ ಆಕೆಯದ್ದು ಪುಟ್ಟ ಪ್ರಪಂಚ. ಆಕೆಗೂ ಕೂಡಾ ಪ್ರೀತಿಯೆಂಬುದು ಹುಡುಗನೊಬ್ಬನ ರೂಪದಲ್ಲಿ ಹತ್ತಿರಾಗಿ ಮದುವೆಯ ಹಂತಕ್ಕೂ ತಲುಪಿಕೊಂಡಿರುತ್ತದೆ. ಹೀಗಿರುವಾಗಲೇ ಆಕೆಯ ಮೇಲೆ ಅತ್ಯಾಚಾರವೆಂಬೋ ಆಘಾತ ಬಂದೊದಗುತ್ತದೆ. ಆ ರೂಪದಲ್ಲಿಯೇ ಇಡೀ ಸಮಾಜದ ಮುಖ, ಮುಖವಾಡಗಳು ಆಕೆಯ ಮುಂದೆ ಅನಾವರಣಗಿಒಳ್ಳುತ್ತಾ ಸಾಗುತ್ತದೆ. ಅತ್ಯಾರವೆಂಬುದು ಎಲ್ಲದರ ಅಂತ್ಯ ಎಂಬ ಭಾವನೆ ಸಮಾಜದಲ್ಲಿದೆ. ಆದರೆ ದಯಾಳ್ ಇಲ್ಲಿ ಸೂಚ್ಯವೆಂಬಂತೆ ಆ ಘಟನೆಯ ನಂತರದಲ್ಲಿಯೇ ನಿಜವಾದ ಕಥೆ ಆರಂಭವಾಗುವಂತೆ ನೋಡಿಕೊಂಡಿದ್ದಾರೆ.


ಆ ನಂತರದ ಘಟನಾವಳಿಗಳು, ರಂಗನಾಯಕಿ ಇಡೀ ಸಮಾಜವನ್ನು ಎದುರಿಸೋ ರೀತಿಗಳೆಲ್ಲವನ್ನು ದಯಾಳ್ ಮನಸಿಗೆ ನಾಟುವಂತೆ ಕಟ್ಟಿ ಕೊಟ್ಟಿದ್ದಾರೆ. ಇಲ್ಲಿ ಅದಿತಿ ಪ್ರಭುದೇವ ಅವರ ನಟನೆ ಯಾರನ್ನೇ ಆದರೂ ಚಕಿತಗೊಳಿಸುತ್ತೆ. ಆಕೆಯ ಗೆಳತಿಯಾಗಿ ಲಾಸ್ಯ ನಾಗರಾಜ್ ಗಮನ ಸೆಳೆಯುತ್ತಾರೆ. ಶ್ರೀನಿ, ತ್ರಿವಿಕ್ರಂ, ಸುಚೇಂದ್ರಪ್ರಸಾದ್, ಚಂದ್ರಚೂಡ್ ಮುಂತಾದವರೂ ಕೂಡಾ ತಮ್ಮ ಪಾತ್ರಗಳಿಗೆ ಗಣನೀಯವಾಗಿಯೇ ನ್ಯಾಯ ಸಲ್ಲಿಸಿದ್ದಾರೆ. ನಿರ್ದೇಶಕ ದಯಾಳ್ ಈ ಮೂಲಕ ತಾನು ಎಂಥಾ ಕಸುಬುದಾರಿಕೆ ಹೊಂದಿರುವ ನಿರ್ದೇಶಕ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಈ ಮೂಲಕವೇ ನಿರ್ಮಾಪಕ ಎಸ್ ವಿ ನಾರಾಯಣ್ ಅವರ ಶ್ರಮವೂ ಸಾರ್ಥಕ್ಯ ಕಂಡಿದೆ. ಒಟ್ಟಾರೆಯಾಗಿ ಇದೊಂದು ಅಪರೂಪದ ಚಿತ್ರ. ಇದನ್ನು ಎಲ್ಲ ವರ್ಗದ ಪ್ರೇಕ್ಷಕರೂ ಕುಟುಂಬ ಸಮೇತರಾಗಿ ನೋಡುವಂತೆ ದಯಾಳ್ ಪದ್ಮನಾಭನ್ ಕಟ್ಟಿ ಕೊಟ್ಟಿದ್ದಾರೆ.

ರೇಟಿಂಗ್:4/5

[adning id="4492"]

LEAVE A REPLY

Please enter your comment!
Please enter your name here