ಕಣ್ಣೇಟಿನ ಸುಂದರಿಗೆ ಬರ್ತ್‌ಡೇ ವಿಶ್ ಮಾಡಿದ ವಿಷ್ಣುಪ್ರಿಯ!

ಸೋಶಿಯಲ್ ಮೀಡಿಯಾದ ವೈರಲ್ ಕೂಸುಗಳ ಸಾಲಿನಲ್ಲಿ ಇಡೀ ದೇಶಾದ್ಯಂತ ಕ್ರೇಜ್ ಸೃಷ್ಟಿದವರಲ್ಲಿ ಮೊದಲಿಗಳು ಪ್ರಿಯಾ ವಾರಿಯರ್. ಅದ್ಯಾವುದೋ ಮಲೆಯಾಳ ಚಿತ್ರದ ಕಣ್ಣು ಹೊಡೆಯೋ ದೃಷ್ಯವೊಂದರ ಮೂಲಕ ದಿನದೊಪ್ಪತ್ತಿನಲ್ಲಿಯೇ ಈಕೆ ಪಡೆದುಕೊಂಡಿದ್ದ ಪಬ್ಲಿಸಿಟಿ ಸಾಮಾನ್ಯವಾದದ್ದೇನಲ್ಲ. ಈಕೆಯ ಮೊದಲ ಚಿತ್ರ ಒರು ಅಡಾರ್ ಲವ್ ಬಂದಷ್ಟೇ ವೇಗವಾಗಿ ಎಗರಿಬಿದ್ದರೂ ಬಹುಭಾಷೆಗಳಲ್ಲಿ ಪ್ರಿಯಾಗಿರೋ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಇಂಥಾದ್ದೇ ಬೇಡಿಕೆ ಕನ್ನಡ ಚಿತ್ರರಂಗದಲ್ಲಿಯೂ ಇತ್ತು. ಈಕೆ ಅತ್ತ ಪ್ರಸಿದ್ಧಳಾಗುತ್ತಲೇ ಛಂಗನ್ನೆದ್ದು ಬಂದ ಕನ್ನಡದ ಎಳಸು ಆಸಾಮಿಯೊಬ್ಬ ಪ್ರಿಯಾ ತನ್ನ ಚಿತ್ರಕ್ಕೆ ನಾಯಕಿ ಅಂತ ಸುದ್ದಿ ಹಬ್ಬಿಸಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಒಂದಷ್ಟು ಮಂದಿ ಇದೇ ಫಾರ್ಮುಲಾ ಅನುಸರಿಸಿ ಇದೀಗ ನಿಜಕ್ಕೂ ಪ್ರಿಯಾ ಕನ್ನಡಕ್ಕೆ ಬಂದಿದ್ದಾಳೆ. ಆಕೆ ನಟಿಸುತ್ತಿರೋ ವಿಷ್ಣುಪ್ರಿಯ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾಳೆ.


ಈ ಹಿಂದೆ ಗುರುದೇಶಪಾಂಡೆ ನಿರ್ದೇಶನದಲ್ಲಿ ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದರಲ್ಲಾ? ಅವರೀಗ ವಿಷ್ಣುಪ್ರಿಯಾ ಅನ್ನೋ ಚಿತ್ರದಲ್ಲಿ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಈ ಸಿನಿಮಾದ ನಾಯಕಿಗಾಗಿ ಬಹು ಒಂದಷ್ಟು ಕಾಲದಿಂದ ಹುಡುಕಾಟ ನಡೆದಿತ್ತು. ಕೆಲ ದಿನಗಳಿಂದ ಪ್ರಿಯಾ ವಾರಿಯರ್ ಈ ಚಿತ್ರದಲ್ಲಿ ನಾಯಕಿಯಾಗಲಿದ್ದಾಳೆಂಬ ಸುದ್ದಿಯೂ ಹರಡಿಕೊಂಡಿತ್ತು. ಈಕೆ ಆಗಮಿಸೋ ಬಗ್ಗೆ ಸುಳ್ಳು ಸುದ್ದಿಗಳನ್ನು ಕೇಳಿ ಸುಸ್ತಾಗಿದ್ದ ಮಂದಿ ಇದೀ ಕೂಡಾ ಕಾಗೆ ಹಾರಿಸೋ ರೂಮರ್ ಅಂದುಕೊಂಡಿದ್ದರು. ಆದರೀಗ ವಿಷ್ಣುಪ್ರಿಯನಿಗೆ ಪ್ರಿಯಾ ವಾರಿಯರ್ ಜೋಡಿಯಾಗಿ ನಟಿಸುತ್ತಿದ್ದಾಳೆ. ಇದೀಗ ವಿಷ್ಣುಪ್ರಿಯಾ ಚಿತ್ರದ ಟೀಸರ್ ಒಂದು ಬಿಡುಗಡೆಯಾಗಿದೆ. ಆ ಮೂಲಕವೇ ಚಿತ್ರತಂಡ ಪ್ರಿಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.


ಅಂದಹಾಗೆ ಈ ಚಿತ್ರವನ್ನು ಕೆ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಪಡ್ಡೆಹುಲಿಗಾಗಿ ಶ್ರೇಯಸ್ ರೆಡಿಯಾಗಿದ್ದ ರೀತಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಚಿತ್ರ ಗೆಲುವನ್ನೂ ಕಂಡಿತ್ತು. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ನಟಿಸಿದ್ದರು. ನಾಗರಹಾವು ಚಿತ್ರದಲ್ಲಿನ ವಿಷ್ಣು ಗೆಟಪ್ಪಿನಲ್ಲಿ ಕಂಗೊಳಿಸಿದ್ದರು. ಖುದ್ದು ವಿಷ್ಣು ಅಭಿಮಾನಿಯಾಗಿರೋ ಕೆ ಮಂಜು ಇದೀಗ ಎರಡನೇ ಚಿತ್ರದಲ್ಲಿಯೂ ಮಗನನ್ನು ವಿಷ್ಣು ಅಭಿಮಾನಿಯಾಗಿಸಿರೋದಕ್ಕೆ ಟೈಟಲ್ಲೇ ಸಾಕ್ಷಿಯಂತಿದೆ. ಅಂತೂ ಶ್ರೇಯಸ್ ಎರಡನೇ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here