ಮತ್ತೆ ಹೊಸಬರಿಗೆ ಮಣೆ ಹಾಕಿದ ಪ್ರಿಯಾಂಕಾ ಉಪೇಂದ್ರ!

ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಅಡಿಯಿರಿಸಿ ಕರ್ನಾಟಕದ ಸೊಸೆಯಾಗಿ, ಕನ್ನಡತಿಯಾಗಿಯೇ ನೆಲೆಗೊಂಡಿರುವವರು ಪ್ರಿಯಾಂಕಾ ಉಪೇಂದ್ರ. ಉಪೇಂದ್ರರನ್ನು ಮದುವೆಯಾದ ನಂತರ ಸುದೀರ್ಘಾವಧಿಯಲ್ಲಿ ಬ್ರೇಕ್ ತೆಗೆದುಕೊಂಡಿದ್ದ ಪ್ರಿಯಾಂಕಾ ಮಮ್ಮಿ ಎಂಬ ಹಾರರ್ ಚಿತ್ರದ ಮೂಲಕ ಭರ್ಜರಿಯಾಗಿಯೇ ರೀ ಎಂಟ್ರಿ ಕೊಟ್ಟಿದ್ದರು. ಆ ಮೂಲಕ ಗೆಲುವು ದಕ್ಕಿಸಿಕೊಂಡಿದ್ದ ಅವರು ಮತ್ತೆ ದೇವಕಿ ಎಂಬ ಹಾರರ್ ಸಿನಿಮಾ ಮೂಲಕ ಮತ್ತೆ ಗೆಲುವು ಕಂಡಿದ್ದರು. ಆ ನಂತರದಲ್ಲಿ ಅವರು ಮತ್ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆಂಬ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.


ಗಮನೀಯ ಅಂಶವೆಂದರೆ, ಮಮ್ಮಿ ಮತ್ತು ದೇವಕಿ ಚಿತ್ರಗಳೆರಡರಲ್ಲಿಯೂ ಪ್ರಿಯಾಂಕಾ ಹೊಸಾ ನಿರ್ದೇಶಕರಿಗೆ ಅವಕಾಶ ನೀಡಿದ್ದರು. ಲೋಹಿತ್ ಎಂಬ ಪ್ರತಿಭಾವಂತ ಹುಡುಗನನ್ನು ಈ ಮೂಲಕವೇ ನಿರ್ದೇಶಕನಾಗಿ ಪರಿಚಯ ಮಾಡಿಸಿದ್ದರು. ಹೀಗೆ ಲೋಹಿತ್ ನಿರ್ದೇಶನದಲ್ಲಿ ಎರಡು ಸಿನಿಮಾಗಳ ಮೂಲಕ ಗೆಲುವಿನ ಯಾತ್ರೆ ಮುಂದುವರೆಸಿದ್ದ ಪ್ರಿಯಾಂಕಾ ಮುಂದೆ ಆ ಬಳಿಕವೂ ಒಂದಷ್ಟು ಅವಕಾಶಗಳಿದ್ದವು. ಅವರು ಒಂದರ ಹಿಂದೊಂದರಂತೆ ಹಾರರ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರಿಂದ ಬಹುತೇಕ ಹಾರರ್ ಕಥೆಗಳೇ ಅವರಿಗಾಗಿ ಕಾದು ಕೂತಿದ್ದವು. ಆದರೆ ಆ ಏಕತಾನತೆಯಿಂದ ತಪ್ಪಿಸಿಕೊಳ್ಳಲು ಹಾತೊರೆಯುತ್ತಿದ್ದ ಪ್ರಿಯಾಂಕಾ ಕಡೆಗೂ ಒಂದೊಳ್ಳೆ ಕಥೆಯನ್ನು ಒಪ್ಪಿಕೊಂಡಿದ್ದಾರೆ.


ವಿಶೇಷವೆಂದರೆ ಈ ಚಿತ್ರ ಕೂಡಾ ನವ ನಿರ್ದೇಶಕನ ಸಾರಥ್ಯದಲ್ಲಿಯೇ ಮೂಡಿ ಬರಲಿದೆ. ಆನಪ್ರಿಯ ನಿರ್ದೇಶಕ ಪಿ ವಾಸು ಅವರ ಸಹೋದರನ ಪುತ್ರ ಗೌತಮ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಗೌತಮ್ ಈ ಹಿಂದೆ ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ. ಇದೀಗ ಈ ಸಿನಿಮಾ ಮೂಲಕ ಆತ ಕನ್ನಡಕ್ಕೆ ಆಗಮಿಸುತ್ತಿದ್ದಾನೆ. ಪಿ ವಾಸು ಸಹೋದರ ವಿಮಲ್ ಈ ಸಿನಿಮಾಗೆ ಕಥೆ ಚಿತ್ರಕಥೆ ಸಂಭಾಷಣೆ ಬರೆದಿದ್ದಾರಂತೆ. ಇದರ ಜೊತೆಗೇ ಪ್ರಿಯಾಂಕಾ ಗುರುಮೂರ್ತಿ ಎಂಬವರ ನಿರ್ದೇಶನದ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಈ ಗುರು ಮೂರ್ತಿ ಪಾಲಿಗೂ ಇದು ಮೊದಲ ಚಿತ್ರ. ಅಂತೂ ಪ್ರಿಯಾಂಕಾ ಉಪೇಂದ್ರ ನವ ಪ್ರತಿಭೆಗಳ ಚಿತ್ರಕ್ಕೇ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾ ಸಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here