ಸ್ಟಾರ್ ಕನ್ನಡಿಗನಿಗೆ ಜೊತೆಯಾದ ಸ್ಟಾರ್ ನಟ ಯಾರು?

[adning id="4492"]

ನ್ನಡ ಚಿತ್ರರಂಗವೀಗ ಹೊಸಾ ಅಲೆಯ, ಹೊಸತನದ ಚಿತ್ರಗಳಿಂದ ಕಳೆಗಟ್ಟಿಕೊಂಡಿದೆ. ಅದರಲ್ಲಿಯೂ ಇತ್ತೀಚೆಗೆ ಆಗಮಿಸುತ್ತಿರುವ ಹೊಸಬರ ತಂಡಗಳು ಅಸಾಧ್ಯ ಎಂಬಂಥಾ ಸಾಹಸಗಳನ್ನೂ ಸಾಧ್ಯವಾಗಿಸುತ್ತಿವೆ. ಸಾಮಾನ್ಯವಾಗಿ ಕೈ ತುಂಬಾ ಕಾಸಿರುವವರೇ ಸಿನಿಮಾ ನಿರ್ಮಾಣ ಮಾಡಲು ಹಿಂದೇಟು ಹಾಕುವಂಥಾ ವಾತಾವರಣ ಸದಾ ಚಾಲ್ತಿಯಲ್ಲಿರುತ್ತದೆ. ಉದ್ಯಮಿಗಳು, ಹಣವಂತರು ಮಾತ್ರವೇ ಸಿನಿಮಾ ನಿರ್ಮಾಣ ಮಾಡಲು ಸಾಧ್ಯವೆಂಬುದು ವಾಸ್ತವಕ್ಕೆ ತೀರಾ ಹತ್ತಿರವಾದ ನಂಬಿಕೆ. ಆದರೆ ಕನಸೊಂದು ಗಟ್ಟಿಯಾಗಿ, ಎಡರು ತೊಡರುಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಮುಂದುವರೆಯೋ ಛಾತಿ ಇದ್ದರೆ ಸಾಮಾನ್ಯರೂ ಸಿನಿಮಾ ವೊಂದನ್ನು ನಿರ್ಮಾಣ ಮಾಡಲು ಸಾಧ್ಯ ಎಂಬದನ್ನು ಸ್ಟಾರ್ ಕನ್ನಡಿಗ ಚಿತ್ರತಂಡ ಸಾಧಿಸಿ ತೋರಿಸಿದೆ.


ವಿ ಆರ್ ಮಂಜುನಾಥ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರೋ ಈ ಚಿತ್ರವನ್ನು ಆಟೋ ಮತ್ತು ಕ್ಯಾಬ್ ಡ್ರೈವರುಗಳೊಂದಷ್ಟು ಮಂದಿ ಸೇರಿ ನಿರ್ಮಾಣ ಮಾಡಿದ್ದಾರೆ. ಆಟೋ ಡ್ರೈವರ್‌ಗಳೆಂದ ಮೇಲೆ ಅವರಲ್ಲಿ ಕನ್ನಡಾಭಿಮಾನವೆಂಬುದು ಸಹಜವಾಗಿಯೇ ಮೈಗೂಡಿಕೊಂಡಿರುತ್ತದೆ. ಅದಕ್ಕೆ ತಕ್ಕುದಾದ ಶೀರ್ಷಿಕೆಯನ್ನೋ ಈ ಚಿತ್ರ ಹೊಂದಿದೆ. ಸ್ಟಾರ್ ಕನ್ನಡಿಗ ಎಂಬ ಹೆಸರೇ ಸೂಚಿಸುವಂಥೆ ಈ ಚಿತ್ರದ ತುಂಬೆಲ್ಲ ಕನ್ನಡಾಭಿಮಾನ ಪ್ರವಹಿಸುತ್ತದೆ. ಇದರಾಚೆಗೆ ಪ್ರೇಮದ ನವಿರು ಭಾವ, ಸಂತೋಷ, ನೋವು, ನಿರಾಸೆಗಳೊಂದಿಗೆ ಒಂದಿಡೀ ಬದುಕನ್ನು ನೋಡುಗರ ಬೊಗಸೆಗಿಡುವಂತೆ ಮಂಜುನಾಥ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರೇ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ಶಾಲಿನಿ ಭಟ್ ಅವರಿಗಿಲ್ಲಿ ನಾಯಕಿಯಾಗಿ ಜೊತೆಯಾಗಿದ್ದಾರೆ.


ಸ್ಟಾರ್ ಕನ್ನಡಿಗ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಅದರ ಮೂಲಕವೇ ಒಂದಷ್ಟು ಕಥೆಯ ಹೊಳಹುಗಳೂ ಸಿಕ್ಕಿವೆ. ಚಿತ್ರತಂಡ ಕೂಡಾ ಈ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಆದರೆ ಈ ಮೂಲಕವೇ ಒಂದು ಸರ್‌ಪ್ರೈಸ್ ಅನ್ನೂ ಕೂಡಾ ಪ್ರೇಕ್ಷಕರಿಗಾಗಿ ಕೊಟ್ಟಿದೆ. ಅದು ಈ ಸಿನಿಮಾದಲ್ಲಿರೋ ಡಿಫರೆಂಟಾದ ಕ್ಯಾರೆಕ್ಟರಿಗೆ ಸಂಬಂಧಿಸಿದ ವಿಚಾರ. ಇದರ ಪೋಸ್ಟರುಗಳಲ್ಲಿ ಮುಖವಿಲ್ಲದ ದೇಹದ್ದೊಂದು ಫೋಟೋ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅದು ಇದರಲ್ಲಿರೋ ಪಾತ್ರವೊಂದರ ಸೂಚಕವೆಂಬಂತೆ ಬಳಕೆಯಾಗುತ್ತಿದೆ. ಆ ಪಾತ್ರವನ್ನು ಸ್ಟಾರ್ ನಟರೊಬ್ಬರು ನಿರ್ವಹಿಸಿದ್ದಾರಾ? ಅದುವೇ ಈ ಸಿನಿಮಾದ ಜೀವಾಳದಂಥಾ ಪಾತ್ರವಾ ಎಂಬಂಥಾ ಪ್ರಶ್ನೆಗಳು ಎಲ್ಲರಲ್ಲಿಯೂ ಇವೆ. ಅದಕ್ಕೆ ಉತ್ತರ ನವೆಂಬರ್ ಒಂದರಂದು ಮಾತ್ರವೇ ಸಿಗಬೇಕಿದೆ.


ಬದುಕು ಎತ್ತ ಹೊಯ್ದಾಡಿಸಿದರೂ, ಎಂತೆಂಥಾ ಅವಮಾನಗಳೆದುರಾದರೂ ತಮ್ಮೊಳಗೆ ನಿಗಿ ನಿಗಿಸುತ್ತಿದ್ದ ಸಿನಿಮಾ ಕನಸು ಮುಕ್ಕಾಗದಂತೆ ನೋಡಿಕೊಂಡು ಬಂದವರು ವಿ ಆರ್ ಮಂಜುನಾಥ್. ಬಹುಶಃ ಅಂಥಾದ್ದೊಂದು ಧೀಶಕ್ತಿ ಅವರಲ್ಲಿಲ್ಲದೇ ಹೋಗಿದ್ದರೆ ನಡು ದಾರಿಯಲ್ಲಿಯೇ ಅವರ ದಿಕ್ಕು ಬದಲಾಗಿ ಬಿಡಬಹುದಿತ್ತು. ಯಾರದ್ದೋ ಶ್ರಮಕ್ಕೆ, ಪ್ರತಿಭೆಗೆ ಅಪ್ಪ ಅನ್ನಿಸಿಕೊಳ್ಳೋ ಅಡ್ನಾಡಿಗಳೇ ತುಂಬಿರೋ ಪ್ರಸ್ತುತ ಸಂದರ್ಭದಲ್ಲಿ ತಮ್ಮದೇ ಕೂಸಿನಂಥಾ ಕನಸುಗಳನ್ನು ಜತನದಿಂದ ಕಾಪಾಡುವವರ ಸಂಖ್ಯೆ ಕಡಿಮೆ. ಮಂಜುನಾಥ್ ಯಾರ ಮರ್ಜಿಗೂ ಬೀಳದೆ, ಯಾವ ಸವಾಲುಗಳಿಗೂ ಅಂಜದೆ ಸ್ವಂತ ಕಸುವಿನ ಬೆಂಬಲದಿಂದಲೇ ಈ ಸಿನಿಮಾವನ್ನು ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿ, ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ. ತನ್ನ ಶೀರ್ಷಿಕೆ ಸಾರ್ಥಕಗೊಳ್ಳುವಂತೆ ಈ ಚಿತ್ರ ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

[adning id="4492"]

LEAVE A REPLY

Please enter your comment!
Please enter your name here