ದೀಪಾವಳಿಯ ಸಂಭ್ರಮಕ್ಕೆ ಖದರ್ ತುಂಬಲಿದೆ ಸಲಗ ಪೋಸ್ಟರ್!

ದುನಿಯಾ ವಿಜಯ್ ಮೊದಲ ಸಲ ನಿರ್ದೇಶನಕ್ಕೆ ಕೈಯಿಟ್ಟಿರೋ ಚಿತ್ರ ಸಲಗ. ಸೂರಿ ನಿರ್ದೇಶನದ ದುನಿಯಾದಿಂದ ಆರಂಭವಾಗಿ ಇದುವರೆಗೂ ಹಲವಾರು ಚಿತ್ರಗಳಲ್ಲಿ, ಥರ ಥರದ ಪಾತ್ರಗಳಲ್ಲಿ ನಾಯಕನಾಗಿ ಮಿಂಚುತ್ತಾ ಬಂದಿದ್ದ ವಿಜಯ್ ಪಾಲಿಗಿದು ಹೊಸಾ ಹೆಜ್ಜೆ. ಆದರೆ ಆರಂಭಿಕ ಹಂತದಿಂದ ಇಲ್ಲಿಯವರೆಗೂ ಸಲಗ ಹೊಸತನದೊಂದಿಗೇ ಘೀಳಿಡುತ್ತಾ ಸಾಗಿ ಬಂದಿದೆ. ಹಂತ ಹಂತವಾಗಿ ಫೋಟೋ, ಪೋಸ್ಟರ್‌ಗಳನ್ನು ಲಾಂಚ್ ಮಾಡುತ್ತಾ ಕುತೂಹಲ ಕಾಯ್ದಿಟ್ಟುಕೊಳ್ಳುತ್ತಿರೋ ವಿಜಯ್ ಬೆಳಕಿನ ಹಬ್ಬ ದೀಪಾವಳಿಗೊಂದು ಭರ್ಜರಿ ಗಿಫ್ಟ್ ಕೊಡಲು ತಯಾರಾಗಿದ್ದಾರೆ.


ಸರಿಯಾದ ಪ್ಲ್ಯಾನು ಮಾಡಿಕೊಂಡೇ ಅಖಾಡಕ್ಕಿಳಿದಿರುವ ವಿಜಯ್ ಸಲಗ ಪ್ರತೀ ಹಂತದಲ್ಲಿಯೂ ಸದ್ದು ಮಾಡುವಂತೆ ನೋಡಿಕೊಂಡು ಮುಂದುವರೆಯುತ್ತಿದ್ದಾರೆ. ಈಗಾಗಲೇ ಒಂದಷ್ಟು ಸ್ಟಿಲ್ಸ್‌ಗಳ ಮೂಲಕ ಒಟ್ಟಾರೆ ಕಥೆಯ ಖದರ್ ಅನ್ನು ಮಿರುಗಿಸುವಂಥಾ ಕಾರ್ಯವನ್ನು ಯಶಸ್ವಿಯಾಗಿಸಿರೋ ವಿಜಯ್ ಈಗ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೊಂದು ಶುಭ ಸುದ್ದಿ ಕೊಟ್ಟಿದ್ದಾರೆ. ದೀಪಾವಳಿಯಂದೇ ಸಲಗದ ಗತ್ತು ಗೈರತ್ತು ಜಾಹೀರಾಗಲಿದೆ ಅಂದಿರೋ ಅವರು, ಇದೇ ೨೯ರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಸಲಗದ ಮಾಸ್ ಪೋಸ್ಟರ್ ಒಂದನ್ನು ಲಾಂಚ್ ಮಾಡೋದಾಗಿ ಹೇಳಿಕೊಂಡಿದ್ದಾರೆ.


ವಿಜಯ್ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿಯೇ ಸಲಗ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ. ಈಗ ಬಾಕಿ ಉಳಿದುಕೊಂಡಿರೋದು ಹಾಡು ಮತ್ತು ಕೆಲ ಮುಖ್ಯವಾದ ಫೈಟ್ ಸೀನುಗಳು ಮಾತ್ರ. ಇದರಲ್ಲಿಯೂ ವಿಶೇಷತೆ ಇರಬೇಕೆಂದು ಬಯಸಿರೋ ವಿಜಿ ಮೈನವಿರೇಳಿಸುವಂಥಾ ಸಾಹಸ ಸನ್ನಿವೇಶಗಳಿಗೂ ನೀಲ ನಕ್ಷೆ ರೆಡಿ ಮಾಡಿಕೊಂಡಿದ್ದಾರೆ. ಅಂದಹಾಗೆ ಇದು ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರಗಳ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡಿರುವ ಚಿತ್ರ. ಶ್ರೀಕಾಂತ್ ಅವರ ನಿರ್ಮಾಣ, ವಿಜ ನಿರ್ದೇಶನ ಮತ್ತು ನಟನೆಯ ಮೂಲಕವೇ ಸಲಗ ಸೃಷ್ಟಿಸಿರೋ ಕ್ರೇಜ್ ಕಡಿಮೆಯದ್ದೇನಲ್ಲ. ಇದೀಗ ದೀಪಾವಳಿಯಂದು ಬಿಡುಗಡೆಯಾಗಲಿರೋ ಪೋಸ್ಟರ್‌ಗಾಗಿನ ಕಾತರಕ್ಕೆ ಚಾಲನೆ ಸಿಕ್ಕಿದೆ.

LEAVE A REPLY

Please enter your comment!
Please enter your name here