ರಂಗನಾಯಕಿಯ ಕಥೆ ಕೇಳಿ ಕಣ್ಣೀರಾಗಿದ್ದರಂತೆ ಅದಿತಿ!

ಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಇದೇ ನವೆಂಬರ್ ಒಂದರಂದು ರಾಜ್ಯಾದ್ಯಂತ ತೆರೆಗಾಣಲಿದೆ. ರಂಗನಾಯಕಿ ಎಂದರೆ ಥಟ್ಟನೆ ಕಣ್ಮುಂದೆ ಸುಳಿದಾಡೋದು ಎರಡೇ ಚಿತ್ರ; ಒಂದು ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲರದ್ದಾದರೆ ಮತ್ತೊಂದು ನಟಿ ಆರತಿಯವರದ್ದು. ಬಹುಶಃ ಈವತ್ತಿನ ದುನಿಯಾದಲ್ಲೇನಾದರೂ ಆ ರಂಗನಾಯಕಿ ತೆರೆಗಂಡಿದ್ದಿದ್ದರೆ ದೇಶಮಟ್ಟದಲ್ಲಿಯೇ ಸುದ್ದಿ ಮಾಡಿ ಬಿಡುತ್ತಿತ್ತೇನೋ. ಈವತ್ತಿಗೆ ರಂಗನಾಯಕಿಯ ಸೃಷ್ಟಿಕರ್ತ ಪುಣ್ಣ ಕಣಗಾಲ್ ನೆನಪು ಮಾತ್ರ. ಆದರೆ ದಯಾಳ್ ಪದ್ಮನಾಭನ್ ಪುಟ್ಟಣ್ಣರ ಹೆಸರಿಗೆ ಮತ್ತಷ್ಟು ಗೌರವ ತಂದು ಕೊಡುವಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ.


ಈ ಹೊಸಾ ರಂಗನಾಯಕಿ ಈ ಪರಿಯಾಗಿ ನಿರೀಕ್ಷೆಗಳ ರಂಗು ತುಂಬಿಕೊಳ್ಳುವುದಕ್ಕೆ ಪ್ರಧಾನ ಕಾರಣ ನಟಿ ಅದಿತಿ ಪ್ರಭುದೇವ. ಈಗಿನ ನಟಿಯರಲ್ಲಿ ಬಹುತೇಕರು ಕಮರ್ಶಿಯಲ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಮಿಂಚೋ ಆಸೆಯನ್ನಷ್ಟೇ ಬದುಕಿನ ಪರಮ ಗುರಿಯೆಂದು ಕೊಂಡಂತಿದ್ದಾರೆ. ಆದರೆ ಮಿರುಗಿದ್ದು ಮರೆಯಾಗುತ್ತದೆ ಎಂಬಂಥಾ ಸತ್ಯದ ಅರಿವಿರುವ ಪ್ರೌಢಿಮೆ ಹೊಂದಿರೋ ನಟಿಯರು ಮಾತ್ರವೇ ಚೌಕಟ್ಟು ಮೀರಿದ ಪಾತ್ರಗಳನ್ನೇ ಬಯಸುತ್ತಾ, ಅಂಥಾದ್ದರಲ್ಲಿಯೇ ನಟಿಸುತ್ತ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಛಾಪಿಸುತ್ತಾರೆ. ಇಂದಿಗೂ ಜನರ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಉಳಿದುಕೊಂಡ ನಟಿಯರೆಲ್ಲ ಭಿನ್ನ ಪಾತ್ರಗಳನ್ನು ಧೇನಿಸಿದವರೇ ಎಂಬುದು ಗಮನೀಯ ಸಂಗತಿ. ನವನಟಿ ಅದಿತಿ ಪ್ರಭುದೇವ ಕೂಡಾ ಅದೇ ಸಾಲಿಗೆ ಸೇರಿಕೊಳ್ಳುವವರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.


ಅದಿತಿ ಪ್ರಭುದೇವ ತಾನು ನಟಿಸೋ ಪಾತ್ರಗಳೆಲ್ಲವೂ ಭಿನ್ನವಾಗಿರಬೇಕು, ಆ ಮೂಲಕವೇ ಪ್ರೇಕ್ಷರ ಮನದಲ್ಲಿ ಉಳಿದುಕೊಳ್ಳಬೇಕೆಂಬ ತುಡಿತ ಹೊಂದಿರುವ ನಟಿ. ಆ ಆಕಾಂಕ್ಷೆಗೆ ತಕ್ಕುದಾದ ಕಥೆ ಪಾತ್ರಗಳೊಂದಿಗೆ ಅದಿತಿಯನ್ನು ಎದುರುಗೊಂಡವರು ನಿರ್ದೇಶಕ ದಯಾಳ್ ಪದ್ಮನಾಭನ್. ರಂಗನಾಯಕಿಯ ಕಥೆಯನ್ನು ವರ್ಷಗಟ್ಟಲೆ ಕಾಡಿಸಿಕೊಂಡು ಕಡೆಗೂ ಅದಕ್ಕೊಂದು ಅಂತಿಮ ರೂಪ ಕೊಟ್ಟ ದಯಾಳ್ ಪಾಲಿಗೆ ಈ ಪಾತ್ರವನ್ನು ಯಾರು ನಿರ್ವಹಿಸೋದೆಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಅದಕ್ಕೆ ಉತ್ತರವಾಗಿ ಕಂಡ ಏಕೈಕ ನಟಿ ಅದಿತಿ ಪ್ರಭುದೇವ. ಹೀಗೆ ರಂಗನಾಯಕಿಗೆ ನಾಯಕಿಯಾಗೋ ಆಫರ್ ಅನ್ನು ಅದಿತಿ ಮುಂದಿಟ್ಟ ಒಂದಿಡೀ ಕಥೆಯನ್ನು, ಅದರ ಪಾತ್ರವನ್ನು ಸಾವಧಾನದಿಂದಲೇ ಬಿಡಿಸಿ ಹೇಳಿದ್ದರು. ಕಥೆ ಮುಗಿಯುವಷ್ಟಲ್ಲಿ ಎದುರಿಗಿದ್ದ ಅದಿತಿ ಕಣ್ಣೀರಾಗಿ ಬಿಟ್ಟಿದ್ದರಂತೆ.


ಇದು ಈ ಕಥೆಯ ಭಾವತೀವ್ರತೆಗೆ ಒಂದು ಸಣ್ಣ ಉದಾಹರಣೆಯಷ್ಟೆ. ಇದರಲ್ಲಿನ ಪಾತ್ರ ಯಾವ ನಟಿಗೇ ಆದರೂ ಸವಾಲಿನಂಥಾದ್ದು. ಅತ್ಯಾಚಾರದಂಥಾ ರಕ್ಕಸ ಪ್ರವೃತ್ತಿ ಕಾನೂನು ಕಟ್ಟಳೆಗಳು ಬಿಗಿಗೊಂಡಿರುವಾಗಲೂ ಕ್ರೌರ್ಯ ಮೆರೆಯುತ್ತಲೇ ಇವೆ. ದೇಶದ ನಾನಾ ದಿಕ್ಕುಗಳಿಂದ ಇದಕ್ಕೆ ಬಲಿಯಾದ ಹೆಣ್ಣು ಜೀವಗಳ ಆಕ್ರಂದನ ಕೇಳಿ ಬರುತ್ತಲೇ ಇರುತ್ತದೆ. ಆದರೆ ನಮ್ಮೆಲ್ಲರ ಪಾಲಿಗೆ ಅದೊಂದು ಕಾಮನ್ ನ್ಯೂಸ್ ಎಂಬಂತಾಗಿ ಬಿಟ್ಟಿದೆ. ಆದರೆ ಅತ್ಯಾಚಾರಕ್ಕೀಡಾಗಿ ಅಸಹ್ಯವನ್ನೇ ಮೈಯೊಳಗೆ ಧರಿಸಿಕೊಂಡ ದಾರುಣ ಸ್ಥಿತಿಗಿಳಿದ ಹೆಣ್ಣುಮಗಳೊಬ್ಬಳ ತೊಳಲಾಟಗಳನ್ನು ನಮ್ಮದಾಗಿ ನೋಡುವ ಪುರಸೊತ್ತು ಯಾರೊಬ್ಬರಿಗೂ ಇಲ್ಲ. ದಯಾಳ್ ರಂಗನಾಯಕಿಯ ಮೂಲಕ ಅಂಥಾ ಒಳತೋಟಿಗಳಿಗೆ ಕಣ್ಣಾಗಿದ್ದಾರೆ. ಅದಿತಿ ಅತ್ಯಾಚಾರ ಸಂತ್ರಸ್ಥೆಯೊಬ್ಬಳ ಎದೆಯ ಬೇಗುದಿಗಳನ್ನೆಲ್ಲ ಆವಾಹಿಸಿಕೊಂಡಂತೆ ನಟಿಸಿದ್ದಾರಂತೆ. ಹೇಳಿಕೇಳಿ ಈ ಚಿತ್ರ ಗೋವಾ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ಗೆ ಇಂಡಿಯನ್ ಪನೋರಮ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಮೂಲಕವೇ ಅದಿತಿ ಪ್ರಭುದೇವ ಪಾಲಿಗೆ ಪ್ರಶಸ್ತಿಗಳ ಸುಗ್ಗಿ ಆರಂಭವಾಗೋ ಲಕ್ಷಣಗಳೂ ಕಾಣಿಸುತ್ತಿವೆ.

LEAVE A REPLY

Please enter your comment!
Please enter your name here