ನವೆಂಬರ್ ಒಂದಕ್ಕೆ ರಂಗಪ್ರವೇಶ ಮಾಡ್ತಾಳೆ ರಂಗನಾಯಕಿ!

[adning id="4492"]

ಯಾಳ್ ಪದ್ಮನಾಭನ್ ತ್ರಯಂಬಕಂ ನಂತರದಲ್ಲಿ ನಿರ್ದೇಶನ ಮಾಡಿರೋ ಚಿತ್ರ ರಂಗನಾಯಕಿ. ಸಾಮಾನ್ಯವಾಗಿ ಯಾರೂ ಸುಲಭಕ್ಕೆ ಕಣ್ಣಾಗದಂಥಾ, ಮುಟ್ಟಿದರೂ ಸಲೀಸಾಗಿ ಸಂಭಾಳಿಸೋದೇ ಸವಾಲೆಂಬಂಥಾ ಕಥಾ ವಸ್ತುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಸಿನಿಮಾ ಶುರುವಿನಿಂದ ಹಿಡಿದು ಬಿಡುಗಡೆಯ ದಿನದ ವರೆಗೆ ಪ್ರತಿಯೊಂದನ್ನು ಕೂಡಾ ಅವರು ಮೊದಲೇ ಪ್ಲಾನು ಮಾಡಿಕೊಂಡಿರುತ್ತಾರೆ. ಅಂಥಾದ್ದೇ ಅಚ್ಚುಕಟ್ಟಾದ ಕಾರ್ಯ ವೈಖರಿಯೊಂದಿಗೆ ಮೂಡಿ ಬಂದಿರುವ ಚಿತ್ರ ‘ರಂಗನಾಯಕಿ’!


ಈ ಹಿಂದೆ ಎಟಿಎಂ ಎಂಬ ಚಿತ್ರ ನಿರ್ಮಾಣ ಮಾಡಿದ್ದ ಎಸ್.ವಿ ನಾರಾಯಣ್ ತುಂಬು ಮಹತ್ವಾಕಾಂಕ್ಷೆಯಿಂದ ರಂಗನಾಯಕಿಯನ್ನು ಬಂಡವಾಳ ಹೂಡಿ ಪೊರೆದಿದ್ದಾರೆ. ಅಷ್ಟಕ್ಕೂ ಇದು ಮಾಮೂಲು ಧಾಟಿಯ ಕಥೆಯ ಚಿತ್ರವಲ್ಲ. ಮುಖ್ಯ ವಾಹಿನಿಯ ಪಾಲಿಗೆ ಮಾಮೂಲು ಸುದ್ದಿಯಂತೆ ಕಾಣಿಸೋ ಅತ್ಯಾಚಾರದಂಥಾ ಪೈಶಾಚಿಕತೆಗೆ ಗುರಿಯಾದ ಹೆಣ್ಣೊಬ್ಬಳು ಈ ಸಮಾಜವನ್ನು ಎದುರಿಸುವಂಥಾ ಸೂಕ್ಷ್ಮಾತಿ ಸೂಕ್ಷ ಕಥಾ ಹಂದರ ಈ ಚಿತ್ರದಲ್ಲಿದೆ. ಅದರ ತೀವ್ರತೆ ಏನೆಂಬುದು ಈಗಾಗಲೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕ ಪರಿಣಾಮಕಾರಿಯಾಗಿಯೇ ಪ್ರೇಕ್ಷಕರತ್ತ ದಾಟಿಕೊಂಡಿದೆ.


ಅದಿತಿ ಪ್ರಭುದೇವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ನಾಗಕನ್ನಿಕೆ ಎಂಬ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಅದಿತಿಯದ್ದು ಸಿನಿಮಾ ನಾಯಕಿಯಾಗಿಯೂ ವಿಭಿನ್ನ ಯಾನ. ತನಗೆ ಸಿಗೋ ಪಾತ್ರಗಳೆಲ್ಲವೂ ಸವಾಲಿನದ್ದೇ ಆಗಿರ ಬೇಕೆಂಬ ಮನಸ್ಥಿತಿಯ ಅದಿತಿ ಇಲ್ಲಿ ಅದಕ್ಕೆ ತಕ್ಕುದಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಗೋವಾ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿರುವ ಈ ಸಿನಿಮಾ ಬಗ್ಗೆ ವ್ಯಾಪಕ ನಿರೀಕ್ಷೆಗಳಿವೆ. ಕನ್ನಡದ ಮಟ್ಟಿಗೆ ತೀರಾ ವಿಶೇಷ ಕಥೆಯನ್ನೊಳಗೊಂಡಿರುವ ಈ ಚಿತ್ರ ನವೆಂಬರ್ ಒಂದರಂದು ತೆರೆಗಾಣಲಿದೆ.

[adning id="4492"]

LEAVE A REPLY

Please enter your comment!
Please enter your name here