ಬಿಗ್‌ಬಾಸ್: ಶೈನ್ ಶೆಟ್ಟಿ ಫುಟ್ಪಾತ್‌ನಲ್ಲಿ ದೋಸೆ ಮಾರುವಂತಾಗಿದ್ದೇಕೆ?

[adning id="4492"]

ಇದು ಲಕ್ಷ್ಮೀಬಾರಮ್ಮ ಸೀರಿಯಲ್ ಚಂದುವಿನ ಅಸಲೀ ಕಹಾನಿ!
ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದವರೆಲ್ಲ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದವರೆಂಬ ಭಾವನೆ ಅನೇಕರಲ್ಲಿದೆ. ಸೀರಿಯಲ್ಲುಗಳಲ್ಲಿ ರಾಯಲ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುವ ನಟ ನಟಿಯರ ಬದುಕು ವಾಸ್ತವದಲ್ಲಿಯೂ ರಾಯಲ್ ಆಗೇ ಇರುತ್ತದೆಂಬ ಭ್ರಮೆಯಂತೂ ಸರ್ವ ವ್ಯಾಪಿ. ಆದರೆ ಅಲ್ಲೂ ಹೊಟ್ಟೆಪಾಡಿನ ಸಂಕಟವಿರುತ್ತೆ. ಝಗಮಗದ ಆಚೆ ಬಂದು ನಿಂತು ದಿಕ್ಕೆಟ್ಟು ಕಣ್ಣೀರಿಡುವ ಅಸಂಖ್ಯಾತ ಜೀವಗಳೂ ಅಲ್ಲಿವೆ. ಏಕಾಏಕಿ ಅವಕಾಶಗಳ ಕೊರತೆ ಕಾಡಿದರಂತೂ ಬೇರೆ ಕೆಲಸ ಮಾಡಲು ಸೆಲೆಬ್ರಿಟಿಯೆಂಬ ಪಟ್ಟ ಬಿಡುವುದಿಲ್ಲ. ಸುಮ್ಮನ ಕುಳಿತರೆ ಮೂರು ಹೊತ್ತಿನ ಕೂಳಿಗೂ ತತ್ವಾರವೆಂಬಂಥಾ ಸ್ಥಿತಿಯಲ್ಲಿ ಅದೆಷ್ಟು ಮಂದಿ ಕಣ್ಣೀರುಗರೆದಿದ್ದಾರೋ… ಪ್ರಸ್ತುತ ಅದೆಷ್ಟು ಜನ ಮರುಗುತ್ತಿದ್ದಾರೋ… ಅದೆಲ್ಲವೂ ಬಣ್ಣದ ಜಗತ್ತಿನಲ್ಲಿ ಬರಿಗಣ್ಣಿಗೆ ಕಾಣಿಸದ ಸಂಗತಿಗಳು.


ಈವತ್ತಿಗೆ ಬಿಗ್ ಬಾಸ್ ಶೋ ಸ್ಪರ್ಧಿಯಾಗಿ ಲವಲವಿಕೆಯಿಂದ ಓಡಾಡುತ್ತಿರೋ ಕುಂದಾಪುರ ಮೂಲದ ಹುಡುಗ ಶೈನ್ ಶೆಟ್ಟಿಯ ಹಿನ್ನೆಲೆಯಲ್ಲಿಯೂ ಅಂಥಾದ್ದೇ ಕಣ್ಣೀರ ಕಥೆಯಿದೆ. ಬಿಗ್‌ಬಾಸ್ ಶೋಗೆ ಹೋಗುವ ಮುನ್ನ ಕಿಚ್ಚ ಸುದೀಪ್ ಸಮ್ಮುಖದಲ್ಲಿಯೇ ಶೈನ್ ಶೆಟ್ಟಿ ತಮ್ಮ ಕರುಣ ಕಥೆಯನ್ನು ಹೇಳಿಕೊಂಡಿದ್ದಾರೆ. ಆ ಕ್ಷಣದಲ್ಲಿ ಸುದೀಪ್ ಕಣ್ಣುಗಳಲ್ಲಿಯೂ ಈ ಹುಡುಗನ ಸಾಧಿಸೋ ಛಲದ ಬಗ್ಗೆ ಬೆರಗು ಮಿಂಚಿದ್ದು ಸುಳ್ಳಲ್ಲ. ಒಂದು ಕಾಲಕ್ಕೆ ಕಿರುತೆರೆಯ ಯಶಸ್ವೀ ಧಾರಾವಾಹಿ ಲಕ್ಷ್ಮಿ ಬಾರಮ್ಮದ ಚಂದು ಎಂಬ ಪಾತ್ರದಲ್ಲಿ ಮಿಂಚಿದ್ದವರು ಶೈನ್ ಶೆಟ್ಟಿ. ಒಂದೆರಡು ವರ್ಷ ಆ ಪಾತ್ರದಲ್ಲಿ ಪ್ರಸಿದ್ಧಿ ಪಡೆದು ಸಿನಿಮಾ ಕನಸಿನ ಬೆಂಬಿದ್ದಿದ್ದ ಇವರ ಬದುಕು ಬಿದ್ದಿದ್ದು ಅಕ್ಷರಶಃ ಬೀದಿಗೆ!


ಒಂದು ಸಣ್ಣ ನಿರ್ಧಾರ, ಯಾವುದೋ ಹುರುಪಿನಿಂದ ಎತ್ತಿಡೋ ಹೆಜ್ಜೆಗಳು ಕೆಲವೊಮ್ಮೆ ಇಡೀ ಬದುಕನ್ನೇ ಸಂಕಷ್ಟಕ್ಕೀಡು ಮಾಡಿ ಬಿಡುತ್ತವೆ. ಅದರಿಂದ ಬಂದೊದಗುವ ಸಂಕಷ್ಟಗಳು ಅದೆಂಥಾ ಆತ್ಮವಿಶ್ವಾಸ ಹೊಂದಿರುವವರನ್ನೂ ಅದುರುವಂತೆ ಮಾಡುತ್ತವೆ. ಶೈನ್ ಶೆಟ್ಟಿಯ ಬದುಕಲ್ಲಿ ನಡೆದಿದ್ದು ಕೂಡಾ ಅಂಥಾದ್ದೇ ದುರಂತ. ಈತ ಕಾಲೇಜು ಮುಗಿಸುತ್ತಲೇ ಒದಗಿ ಬಂದಿದ್ದು ಬಹು ದೊಡ್ಡ ಅವಕಾಶ. ಅದಾಗಲೇ ಚಂದನ್ ಎಂಬ ಜಂಭದ ಕೋಳಿಯಂಥವನು ಲಕ್ಷ್ಮಿ ಬಾರಮ್ಮ ಸೀರಿಯಲ್ಲಿನ ಚಂದು ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದ. ಆತ ಕಿರಿಕ್ಕು ಮಾಡಿಕೊಂಡು ಹೊರ ಬಂದವನೇ ಸಿನಿಮಾ ಅಂತೆಲ್ಲ ಅಡ್ಡಾಡಲಾರಂಭಿಸಿದ್ದ. ಹಾಗೆ ತೆರವಾದ ಚಂದು ಪಾತ್ರ ಒಲಿದು ಬಂದಿದ್ದದ್ದು ಶೈನ್ ಶೆಟ್ಟಿಗೆ.


ನಟನೆಯತ್ತ ಅತೀವ ಆಸಕ್ತಿ ಹೊಂದಿದ್ದ ಶೈನ್ ಶೆಟ್ಟಿ ಪಾಲಿಗದು ಬಂಪರ್ ಅವಕಾಶ. ಅದನ್ನು ಎರಡು ವರ್ಷಗಳಷ್ಟು ಕಾಲ ಆತ ಚೆಂದಗೆ ಬಳಸಿಕೊಂಡಿದ್ದರು. ಬೇರ‍್ಯಾವುದರತ್ತಲೂ ಮನಸು ಮಾಡದೇ ಇದ್ದಿದ್ದರೆ ಬೇರೇನಾಗುತ್ತಿರಲಿಲ್ಲವೋ ಗೊತ್ತಿಲ್ಲ. ಆದರೆ ಸಾಲಬಾಧೆಯಿಂದ ತತ್ತರಿಸಿ, ಬೇರೆ ದಿಕ್ಕು ಕಾಣದೆ ಫುಟ್ಪಾತಿನಲ್ಲಿ ದೋಸೆ ಮಾರುವ ಪರಿಸ್ಥಿತಿಯಂತೂ ಖಂಡಿತಾ ಬರುತ್ತಿರಲಿಲ್ಲ. ಹಾಗಂತ ಶೈನ್ ಶೆಟ್ಟಿ ಯಾವ ಶೋಕಿಯನ್ನೂ ಮಾಡಲಿಲ್ಲ. ಬದಲಾಗಿ ಎರಡು ವರ್ಷಗಳ ಅದೇ ಪಾತ್ರದ ಏಕತಾನತೆಯನ್ನು ತಪ್ಪಿಸಿಕೊಳ್ಳಲು ಸಿನಿಮಾ ಹೀರೋ ಆಗುವ ದೊಡ್ಡ ಕನಸು ಕಂಡರು. ಅದುವೇ ಜೀವನಪರ್ಯಂತ ಮುಟ್ಟಿ ನೋಡಿಕೊಳ್ಳವಂಥಾ ದೊಡ್ಡ ಮಟ್ಟದ ಏಟು ಕೊಡುತ್ತದೆಂದು ಬಹುಶಃ ಶೈನ್ ಶೆಟ್ಟಿ ಕನಸುಮನಸಿನಲ್ಲಿಯೂ ಅಂದುಕೊಂಡಿರಲಿಕ್ಕಿಲ್ಲ.


ಲಕ್ಷ್ಮೀ ಬಾರಮ್ಮ ಸೀರಿಯಲ್ಲಿನ ಚಂದು ಪಾತ್ರದಿಂದ ಏಕಾಏಕಿ ಹೊರ ಬಂದ ಶೈನ್, ಸಿನಿಮಾ ಒಂದರಲ್ಲಿ ಹೀರೋ ಆಗುವ ಹುಮ್ಮಸ್ಸಿನಲ್ಲಿದ್ದರು. ಇದೇ ಆವೇಗದಲ್ಲಿ ಅದಕ್ಕೆ ಕೂಡಿಟ್ಟಿದ್ದ ಒಂದಷ್ಟು ಕಾಸನ್ನೂ ಸುರಿದಿದ್ದರು. ಏನೇನೋ ಹರಸಾಹಸ ಪಟ್ಟು ಚಿತ್ರೀಕರಣ ಮುಗಿಸಿಕೊಂಡರೂ ಆ ಚಿತ್ರವೇಕೋ ಬಿಡುಗಡೆಯ ಭಾಗ್ಯ ಕಾಣಲೇ ಇಲ್ಲ. ಈ ಸಿನಿಮಾ ಬಿಡುಗಡೆಯಾಗೋದನ್ನೇ ಕಾದು ಕೂತಿದ್ದ ಶೈನ್ ಶೆಟ್ಟಿಗೆ ಅದಾಗಲೇ ಸಾಲ ಬಾಧೆ ಆರಂಭವಾಗಿತ್ತು. ಹಾಗಂತ ಬೇರ‍್ಯಾವ ಕೆಲಸ ಮಾಡೋ ದಾರಿಗಳೂ ಗೋಚರಿಸಲಿಲ್ಲ. ಅಂಥಾ ವಿಷಮ ಸನ್ನಿವೇಶದಲ್ಲಿ ಶೈನ್ ಶೆಟ್ಟಿ ಸ್ವಾಭಿಮಾನದಿಂದ ಬದುಕಲೋಸ್ಕರ ಸೆಲೆಬ್ರಿಟಿ ಎಂಬ ಕಿರೀಟವನ್ನೂ ಕಳಚಿಟ್ಟು ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲ ಸೋತ ಜೀವಗಳಿಗೂ ಮಾದರಿಯಂಥಾದ್ದು.


ಮಾಡಲು ಯಾವ ಕೆಲಸವೂ ಇಲ್ಲದೇ ಇದ್ದಾಗ ಆಟೋದಲ್ಲಿ ಮೊಬೈಲ್ ಕ್ಯಾಂಟೀನ್ ಮಾಡಿ ಒಂದಷ್ಟು ವೆರೈಟಿ ದೋಸೆ ಮಾಡಿ ಮಾರುವ ಐಡಿಯಾ ಶೈನ್ ಶೆಟ್ಟಿಗೆ ಹೊಳೆದಿತ್ತು. ಹಾಗಂತ ಓರ್ವ ಸೆಲೆಬ್ರಿಟಿಯಾಗಿ ಫುಟ್ಪಾತಲ್ಲಿ ದೋಸೆ ಮಾರಲು ಮುಂದಾಗೋದೇನು ಸಾಮಾನ್ಯದ ಸಂಗತಿಯಲ್ಲ. ಅದಕ್ಕೆ ಮಾನಸಿಕ ಸಿದ್ಧತೆ ಬೇಕಿತ್ತು. ಕಡೆಗೂ ತನ್ನ ಐಡೆಂಟಿಟಿಯನ್ನೇ ಕಳಚಿಟ್ಟ ಶೈನ್ ಬನಶಂಕರಿ ಸಮೀತ ಮೊಬೈಲ್ ಕ್ಯಾಂಟೀನಿನಲ್ಲಿ ದೋಸೆ ಮಾರುವ ಕಾಯಕ ಶುರುವಿಟ್ಟುಕೊಂಡಿದ್ದರು. ಹಾಗೆ ಬಂದ ಗ್ರಾಹಕರು ಥಟ್ಟನೆ ಗುರುತು ಹಿಡಿದು ‘ಹೇ ಇವರು ಲಕ್ಷ್ಮೀ ಬಾರಮ್ಮ ಸೀರಿಯಲ್ ಚಂದು ಥರಾನೇ ಇದಾರಲ್ವಾ’ ಅಂತ ಮಾತಾಡಿಕೊಂಡಾಗೆಲ್ಲ ಒಂಥರಾ ಹೆಮ್ಮೆ ಮತ್ತು ಕಣ್ಣಾಲಿಗಳು ತುಂಬಿ ಬಂದಂಥಾ ಅವ್ಯಕ್ತ ಭಾವ ಶೈನ್ ಶೆಟ್ಟಿಯ ಮೈ ಮನಸುಗಳನ್ನಾವರಿಸುತ್ತಿತ್ತು.


ಹಾಗೆ ಸಿನಿಮಾ ಕನಸಿನ ಬೆಂಬಿದ್ದು ಬದುಕು ಬೀದಿಯಲ್ಲಿದ್ದರೂ ಶೈನ್ ಶೆಟ್ಟಿ ಕನಸಿನ ಕಿರುಬೆರಳು ಹಿಡಿದೇ ಸಾಗಿ ಬಂದಿದ್ದರು. ಈ ಸೋಲು, ಅವಮಾನಗಳನ್ನೆಲ್ಲ ನೀಗಿಕೊಂಡು ಮತ್ತೆ ಮೈ ಕೊಡವಿ ಮೇಲೆದ್ದು ನಿಲ್ಲಬೇಕೆಂಬ ಕೆಂಡದಂಥಾ ಸಂಕಲ್ಪ ಅವರಾಳದಲ್ಲಿ ಸದಾ ನಿಗಿ ನಿಗಿಸುತ್ತಿತ್ತು. ಅದೇ ಕಾವಲ್ಲಿ ದೋಸೆ ಬೇಯಿಸಿ ಮಾರಿ ಬದುಕಿದ ಶೈನ್ ಶೆಟ್ಟಿಯ ಮುಖದಲ್ಲಿ ಹುಲುಸಾಗಿ ಬೆಳೆದ ಗಡ್ಡದ ಪ್ರತೀ ಎಸಳುಗಳಲ್ಲಿಯೂ ಅವಮಾನದ ಕಥೆಗಳಿವೆ. ಅದೆಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಂಡಿದ್ದರಿಂದಲೇ ಅವರಿಂದು ಬಿಗ್‌ಬಾಸ್ ಸ್ಪರ್ಧಿಯಾಗಿದ್ದಾರೆ. ಈ ಶೋ ಮುಗಿದ ನಂತರ ಮತ್ತೊಮ್ಮೆ ಶೈನ್ ಶೆಟ್ಟಿ ಮಹಾ ಗೆಲುವುಗಳೊಂದಿಗೆ ಸಂಭ್ರಮಿಸುವಂತಾಗಲಿ. ಕುಂದಾಪುರದ ಈ ಹುಡುಗ ಇದುವರೆಗೆ ಅನುಭವಿಸಿರುವ ಸೋಲು ಅವಮಾನಗಳೆಲ್ಲ ಸುಳ್ಳೆಂಬಂಥಾ ಭಾವ ಹುಟ್ಟಿಸೋ ಗೆಲುವಿನ ರೂವಾರಿಯಾಗಲೆಂದು ಹಾರೈಸೋಣ…

[adning id="4492"]

LEAVE A REPLY

Please enter your comment!
Please enter your name here