ರೂಪಾ ರಾವ್ ಸೃಷ್ಟಿಸಿದ ಗಂಟುಮೂಟೆಯ ತುಂಬಾ ಬೆರಗುಗಳಿವೆ!

[adning id="4492"]

ಸ್ಟಾರ್ ಸಿನಿಮಾಗಳ ಅಬ್ಬರಾಟದ ನಡುವೆಯೇ ಆಗಾಗ ತಂಗಾಳಿ ತೀಡಿದಂತೆ ಹೊಸಬರ ಚಿತ್ರಗಳು ತೆರೆಗಾಣುತ್ತಿದ್ದರೆ ಅದರ ಮುದವೇ ಬೇರೆ. ಯಾವುದೇ ಚಿತ್ರರಂಗಗಳ ಪಾಲಿಗೆ ಹೊಸಾ ಆಲೋಚನೆಗಳು, ಕ್ರಿಯಾಶೀಲ ಆಲೋಚನೆಗಳು ಹರಿದು ಬರೋದೇ ಇಂಥ ಹೊಸ ಪ್ರಯತ್ನಗಳಿಂದ. ಈ ಬಾರಿ ಆ ಹೊಸತನದ ಗಾಳಿ ತುಸು ಜೋರಾಗಿಯೇ ಬೀಸುವ ಲಕ್ಷಣಗಳೊಂದಿಗೆ ಈ ವಾರ ತೆರೆಗಾಣುತ್ತಿರುವ ಚಿತ್ರ ಗಂಟುಮೂಟೆ. ಈಗಾಗಲೇ ಹೊರ ಬಂದಿರೀ ಟ್ರೇಲರ್ ಮತ್ತಿತರ ಒಂದಷ್ಟು ವಿಚಾರಗಳ ಆಧಾರದಲ್ಲಿ ಹೇಳೋದಾದರೆ ಈ ಗಂಟುಮೂಟೆಯ ತುಂಬ ಎಲ್ಲರೂ ಥ್ರಿಲ್ ಆಗುವಂಥ ಬೆರಗುಗಳಿವೆ.


ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ರೂಪಾ ರಾವ್. ಮಹಿಳಾ ನಿರ್ದೇಶಕಿಯರು ಇಂಥಾದ್ದೇ ವೆರೈಟಿಯ ಚಿತ್ರಗಳನ್ನು, ಕಥಾ ವಸ್ತುಗಳನ್ನು ಆರಿಸಿಕೊಳ್ಳಬೇಕೆಂಬುದರ ಬಗ್ಗೆ ಅಗೋಚರವಾದ ಕೆಲ ಗೆರೆಗಳಿದ್ದಾವೆ. ಆದರೆ ರೂಪಾ ರಾವ್ ಅದನ್ನು ಆರಂಭಿಕ ಹೆಜ್ಜೆಯಲ್ಲಿಯೇ ದಾಟಿಕೊಂಡಿದ್ದಾರೆ. ಹದಿಹರೆಯದ ಮನಸುಗಳಲ್ಲಿ ಸ್ಫರಿಸುವ ಪ್ರೇಮ, ಕಾಮ, ಭ್ರಮೆ ಮತ್ತು ವಾಸ್ತವ ದರ್ಶನ ಮಾಡಿಸುವಂಥಾ ಗಂಟುಮೂಟೆ ಈಗಾಗಲೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನ ಕಂಡಿದೆ. ಪ್ರಶಸ್ತಿಯ ಜೊತೆಗೆ ಭರಪೂರ ಮೆಚ್ಚುಗೆಯನ್ನೂ ಪಡೆದುಕೊಂಡಿದೆ.


ಹೀಗೆಂದ ಮಾತ್ರಕ್ಕೆ ಇದು ಕಲಾತ್ಮಕ ಚಿತ್ರ ಅಂದುಕೊಳ್ಳಬೇಕಿಲ್ಲ. ರೂಪಾ ರಾವ್ ಇದನ್ನು ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿಯೇ ನಿರ್ದೇಶನ ಮಾಡಿದ್ದಾರಂತೆ. ಇಲ್ಲಿರೋದು ವಿಶಿಷ್ಟವಾದ ಕಥೆ. ಇದರ ಸ್ಕ್ರೀನ್ ಪ್ಲೇ ಅಂತೂ ತುಂಬಾನೇ ಭಿನ್ನವಾಗಿದೆಯಂತೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಸ್ಕ್ರೀನ್ ಪ್ಲೇ ಎಂಬ ಪ್ರಶಸ್ತಿ ಪಡೆದುಕೊಂಡಿದೆಯೆಂದರೆ ಅದೆಷ್ಟು ಚೆಂದಗಿದೆ ಅನ್ನೋದು ಯಾರಿಗಾದರೂ ಅರ್ಥವಾಗುತ್ತದೆ. ಇದನ್ನು ನೋಡಿದ ಕನ್ನಡದ ಖ್ಯಾತ ನಿರ್ದೇಶಕರೇ ಸ್ಕ್ರೀನ್ ಪ್ಲೇ ಕುಸುರಿಯನ್ನು ಕೊಂಡಾಡಿದ್ದಾರೆ. ಇಂಥಾ ಕಥೆಯನ್ನು ಈ ಹಿಂದೆಂದೂ ಕಂಡಿಲ್ಲ ಅಂತ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಗಂಟು ಮೂಟೆಯ ತುಂಬಾ ಬೆರಗುಗಳಿದ್ದಾವೆಂಬುದನ್ನು ಸಾಕ್ಷೀಕರಿಸಲು ಇದಕ್ಕಿಂತ ಬೇರೇನೂ ಬೇಕಿಲ್ಲ. ಅದೆಲ್ಲವೂ ಈ ವಾರ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here