ಗಂಟುಮೂಟೆಯೊಳಗೆ ನಮ್ಮೆಲ್ಲರ ನೆನಪುಗಳ ಸರಕಿದೆ!

[adning id="4492"]

ಳೇ ನೆನಪುಗಳ ಕಟಾಂಜನಕ್ಕೆ ಆಗಾಗ ಕೈ ಹಾಕಿ ಕಲೆಸುತ್ತಾ ನಮಗಿಷ್ಟವಾದ ಸರಕುಗಳನ್ನು ನೇವರಿಸಿ ಸಂಭ್ರಮಿಸೋದು ಮನುಷ್ಯ ಸಹಜ ಲಕ್ಷಣ. ಕೆಲ ಸಿನಿಮಾಗಳು ಅಪ್ರಯತ್ನ ಪೂರ್ವಕವಾಗಿಯೇ ಇಂಥಾ ನೆನಪುಗಳನ್ನೆಲ್ಲ ಉದ್ದೀಪಿಸುತ್ತವೆ. ಮನಸೊಳಗೆ ನಾವು ಮರೆತು ಬಿಟ್ಟಿದ್ದ ನೆನಪುಗಳ ಮರ್ಮರವನ್ನು ತಂದು ತುಂಬಿಸಿದಂತೆ ಬಿಟ್ಟೂ ಬಿಡದಂತೆ ಕಾಡಿಸುತ್ತವೆ. ಹಾಗೆ ಯಾವುದೋ ದೃಷ್ಯಗಳು ನೋಡುಗರ ಪಾಲಿಗೆ ತಮ್ಮದೇ ಅನ್ನಿಸುವಂತೆ ಮೂಡಿ ಬರೋದಿದೆಯಲ್ಲಾ? ಅದು ಗೆಲುವಿನ ಪರಿಣಾಮಕಾರಿ ಫಾರ್ಮುಲಾ. ಈ ಹಿನ್ನೆಲೆಯಲ್ಲಿ ರೂಪಾ ರಾವ್ ನಿರ್ದೇಶನದ ‘ಗಂಟುಮೂಟೆ’ ಗೆಲ್ಲವ ಸರಕುಗಳನ್ನು ಯಥೇಚ್ಛವಾಗಿಯೇ ಒಡಲಲ್ಲಿಟ್ಟುಕೊಂಡು ಈ ವಾರ ತೆರೆಗಾಣುತ್ತಿದೆ.


ಇದು ರೂಪಾ ರಾವ್ ನಿರ್ದೇಶನದ ಮೊದಲ ಚಿತ್ರ. ಮಹಿಳಾ ನಿರ್ದೇಶಕಿಯರು ಮುಟ್ಟಬಹುದಾದ ಕಥೆಯೆಂಬ ಚೌಕಟ್ಟು ಮೀರಿಕೊಂಡು, ಮಡಿವಂತಿಕೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಅವರಿಲ್ಲಿ ಮಜವಾದ ಕಥೆಯೊಂದನ್ನು ಮುಟ್ಟಿದ್ದಾರೆ. ಇದು ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥೆಯಾಧಾರಿತ ಚಿತ್ರವೆಂಬ ವಿಚಾರ ಈಗಾಗಲೇ ಟ್ರೇಲರ್ ಮೂಲಕ ಬಯಲಾಗಿದೆ. ಈ ಟ್ರೇಲರ್ ಮೂಲಕವೇ ಆಗಷ್ಟೆ ಹದಿಹರೆಯದ ಹೊಸ್ತಿಲು ತಲುಪಿಕೊಳ್ಳುತ್ತಿರೋ ಯುವ ಮನಸುಗಳ ಪ್ರೀತಿ, ಪ್ರೇಮ, ಸ್ವೇಚ್ಛೆಗಳ ಸುಳಿವುಗಳೂ ಕೂಡಾ ಸಿಕ್ಕಿವೆ. ಇಲ್ಲಿ ಬೇರೆಯದ್ದೇ ಥರದ ಮಧುರ ಪ್ರೇಮ ಕಥೆ ಇರೋದೂ ಕೂಡಾ ಅಷ್ಟೇ ಸ್ಪಷ್ಟವಾಗಿಯೇ ಜಾಹೀರಾಗಿದೆ.


ಸಾಮಾನ್ಯವಾಗಿ ಇಂಥಾ ಪ್ರೇಮಕಥೆಗಳನ್ನು ಹುಡುಗರ ದೃಷ್ಟಿಯಲ್ಲಿ ನಿರೂಪಣೆ ಮಾಡೋದು ಮಾಮೂಲು. ಆದರೆ ಇಂಥಾ ಪ್ರೀತಿ ಪ್ರೇಮಗಳಿಗೆ ಪಕ್ಕಾಡ ಹುಡುಗಿಯೊಬ್ಬಳ ತುಮುಲ, ತಳಮಳ ಮತ್ತು ಪುಳಕಗಳು ಎಂಥವಿರಬಹುದೆಂಬುದು ಹುಡುಗೀರಿಗಷ್ಟೇ ಸೀಮಿತವಾಗಿತ್ತು. ಇಲ್ಲಿ ಅದಕ್ಕೆ ಕನ್ನಡಿ ಹಿಡಿಯಲಾಗಿದೆ. ಹೈಸ್ಕೂಲು ದಿನಗಳನ್ನು ದಾಟಿ ಬಂದು ಬಹುದೂರ ಸಾಗಿರುವ ಬಹುತೇಕರೆದೆಯೊಳಗೂ ಒಂದೊಂದು ಪ್ರೇಮ ಕಥೆಗಳಿರುತ್ತವೆ. ಒಂದಷ್ಟು ದೂರ ಸಾಗಿ ಬಂದ ನಂತರ ಅವೆಲ್ಲವೂ ಮಾಸಲಾದ ಮಧುರ ಚಿತ್ರಗಳಾಗಿಯಷ್ಟೇ ಉಳಿದುಕೊಳ್ಳುತ್ತವೆ. ಅಂಥಾ ಚಿತ್ರಗಳ ಧೂಳು ಕೊಡವಿ, ಒಪ್ಪ ಓರಣ ಮಾಡಿ ನಮ್ಮ ಕಣ್ಣುಗಳಲ್ಲಿಯೇ ಬೆರಗು ಹುಟ್ಟುವಂತೆ ಮಾಡುವ ಸರಕುಗಳು ಗಂಟುಮೂಟೆಗೊಳಗಿವೆ.

[adning id="4492"]

LEAVE A REPLY

Please enter your comment!
Please enter your name here