ಥಿಯೇಟ್ರಿಕಲ್ ಟ್ರೇಲರ್‌ನಲ್ಲಿ ಕಂಡಿದ್ದು ಮಹಾಗೆಲುವಿನ ಮುನ್ಸೂಚನೆಯ ‘ಭರಾಟೆ’!

ಹಿಂದೆ ಬಹದ್ದೂರ್ ಹಾಗೂ ಭರ್ಜರಿ ಎಂಬೆರಡು ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚೇತನ್ ಕುಮಾರ್ ಸೃಷ್ಟಿಸಿರೋ ಮೂರನೇ ಚಿತ್ರ ಭರಾಟೆ. ರಾಜಸ್ಥಾನದ ಮರುಭೂಮಿಯಲ್ಲಿ ಯಾವ ಘಳಿಗೆಯಲ್ಲಿ ಚಿತ್ರೀಕರಣ ಶುರುವಾಯಿತೋ ಆ ಹೊತ್ತಿನಿಂದಲೇ ಈ ಚಿತ್ರದ ಸೆನ್ಸೇಷನಲ್ ಭರಾಟೆ ಆರಂಭವಾಗಿ ಬಿಟ್ಟಿತ್ತು. ಆ ನಂತರದಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿದ್ದ ಈ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಇದೀಗ ಚಿತ್ರತಂಡ ಇದರ ಥಿಯೇಟ್ರಿಕಲ್ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಮಹಾ ಗೆಲುವಿನ ಮುನ್ಸೂಚನೆಯ ‘ಭರಾಟೆ’ ಸ್ಪಷ್ಟವಾಗಿಯೇ ಗೋಚರಿಸಿದೆ.


ಈಗಾಗಲೇ ಭರಾಟೆಯ ಟ್ರೇಲರ್, ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿ ಎಲ್ಲರಿಗೂ ಇಷ್ಟವಾಗಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಇದೇ ಹದಿನೆಂಟನೇ ತಾರೀಕಿನಂದು ಈ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಇನ್ನೇನು ಇದನ್ನು ಕಣ್ತುಂಬಿಕೊಳ್ಳಲು ಐದು ದಿನವಷ್ಟೇ ಬಾಕಿ ಉಳಿದಿದೆ. ಈ ಹಂತದಲ್ಲಿ ಮತ್ತಷ್ಟು ಕುತೂಹಲದ ಬಿಸಿಯೇರಿಸೋ ಉದ್ದೇಶದಿಂದಲೇ ಥಿಯೇಟ್ರಿಕಲ್ ಟ್ರೇಲರ್ ಲಾಂಚ್ ಮಾಡಲಾಗಿದೆ. ಶ್ರೀಮುರುಳಿಯ ಮಾಸ್ ಲುಕ್ಕು, ಎದುರಾಳಿಗಳ ಎದೆ ಹೊಕ್ಕಂಥಾ ಖಡಕ್ ಡೈಲಾಗುಗಳು ಮತ್ತು ಅದರಾಳದಲ್ಲಿಯೇ ಹೊಮ್ಮುವ ಕಥಾ ಸಾರ ಮತ್ತು ಕಣ್ಣು ಕುಕ್ಕುವ ಅದ್ದೂರಿ ಮೇಕಿಂಗ್… ಇವಿಷ್ಟು ಅಂಶಗಳೊಂದಿಗೇ ಈ ಟ್ರೇಲರ್ ಸೂಪರ್ ಹಿಟ್ ಆಗಿದೆ. ಬಿಡುಗಡೆಯಾಗಿ ನಿಮಿಷಗಳು ಕಳೆಯೋದರೊಳಗಾಗಿ ಯೂಟ್ಯೂಬ್‌ನಲ್ಲಿ ಇದಕ್ಕೆ ಸಿಕ್ಕ ವೀಕ್ಷಣೆ ಮತ್ತು ಕಮೆಂಟುಗಳೇ ಎಲ್ಲವನ್ನೂ ಹೇಳುವಂತಿವೆ.


ಭರಾಟೆ ಟ್ರೇಲರ್ ಬಿಡುಗಡೆಯಾಗಿ ಕೇವಲ ಮೂವತ್ತು ನಿಮಿಷ ಕಳೆದಿತ್ತಷ್ಟೆ. ಆ ಹೊತ್ತಿನಲ್ಲಿಯೇ ಅದಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಸಿಕ್ಕಿತ್ತು. ದಂಡಿ ದಂಡಿ ಕಮೆಂಟುಗಳೂ ಬರಲಾರಂಭಿಸಿದ್ದವು. ಇಂಥಾ ಅಭೂತಪೂರ್ವ ಬೆಂಬಲ ಕಂಡು ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡವೇ ಖುಷಿಗೊಂಡಿದೆ. ಇದೆಲ್ಲವೂ ಭರಾಟೆಯ ನಿಜವಾದ ಭರಾಟೆ ಎಂಥಾದ್ದಿದೆ ಎಂಬುದಕ್ಕೆ ತಾಜಾ ಉದಾಹರಣೆಯಂಥಾ ವಿದ್ಯಮಾನ. ಅಷ್ಟಕ್ಕೂ ಇದಕ್ಕೆ ಕಾರಣವಾಗಿರೋದು ಪ್ರತಿಯೊಂದರಲ್ಲಿಯೂ ಚಿತ್ರತಂಡ ಕಾಪಾಡಿಕೊಂಡು ಬಂದಿರೋ ವಿಭಿನ್ನ  ವೈವಿಧ್ಯ. ಲೊಕೇಷನ್ನುಗಳಿಂದ ಹಿಡಿದ ಕಾಸ್ಟ್ಯೂಮ್ ವರೆಗೆ ಎಲ್ಲದರಲ್ಲಿಯೂ ಭರಾಟೆ ಭಿನ್ನವಾಗಿಯೇ ಕಾಣಿಸುತ್ತಿದೆ


ಈ ಟ್ರೇಲರ್ ನೋಡಿದರೆ ನಿರ್ದೇಶಕ ಚೇತನ್ ಕುಮಾರ್‌ಗೆ ಹ್ಯಾಟ್ರಿಕ್ ಗೆಲುವು ಸಿಗೋ ಲಕ್ಷಣ ಢಾಳಾಗಿಯೇ ಕಾಣಿಸುತ್ತಿದೆ. ನಿರ್ಮಾಪಕ ಸುಪ್ರೀತ್ ಭರಾಟೆಯನ್ನು ಅದೆಷ್ಟು ಅದ್ದೂರಿಯಾಗಿ ರೂಪಿಸಿದ್ದಾರೆಂಬುದಕ್ಕು ಈ ಟ್ರೇಲರ್ ತುಂಬಾ ಸಾಕ್ಷಿಗಳು ಸಿಗುತ್ತವೆ. ಇನ್ನುಳಿದಂತೆ ನಾಯಕ ಶ್ರೀಮುರುಳಿಯಂತೂ ಇತ್ತೀಚಿನ ತಮ್ಮ ಮಾಸ್ ಇಮೇಜ್ ಮತ್ತಷ್ಟು ಮಿರುಗುವಂತೆ ಅಬ್ಬರಿಸಿದ್ದಾರೆ. ಅವರ ಖಡಕ್ ಡೈಲಾಗುಗಳಿಗೆ ಅಭಿಮಾನಿ ಬಳಗ ಮನಸೋತಿದೆ. ಒಟ್ಟಾರೆಯಾಗಿ ಥೇಟರಿಗೆ ತಲುಪಿಕೊಳ್ಳಲು ದಿನಗಳಷ್ಟೇ ಬಾಕಿ ಇರುವ ಈ ಹೊತ್ತಿನಲ್ಲಿ ಚಿತ್ರತಂಡ ಟ್ರೇಲರ್ ಮೂಲಕ ಮತ್ತಷ್ಟು ಕೌತುಕದ ಕಿಚ್ಚು ಹಚ್ಚುವಲ್ಲಿ ಯಶ ಕಂಡಿದೆ.

LEAVE A REPLY

Please enter your comment!
Please enter your name here