ಕನ್ನಡ ರಾಜ್ಯೋತ್ಸವಕ್ಕೆ ರಂಗು ತುಂಬಲಿದ್ದಾಳೆ ರಂಗನಾಯಕಿ!

ನ್ನಡ ಚಿತ್ರರಂಗಕ್ಕೆ ಆಗಮಿಸಿ ಕೆಲವೇ ವರ್ಷಗಳಾಗಿದ್ದರೂ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವವರು ಅದಿತಿ ಪ್ರಭುದೇವ. ಕಿರುತೆರೆಯಲ್ಲಿ ನಾಗಕನ್ನಿಕೆ ಎಂಬ ಧಾರಾವಾಹಿಯ ಮೂಲಕ ಪ್ರಸಿದ್ಧಿ ಪಡೆದಿದ್ದ ಅದಿತಿ ಆ ನಂತರದಲ್ಲಿ ನಾಯಕಿಯಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದವರು. ಇಲ್ಲಿಯೂ ಕೂಡಾ ತಮ್ಮ ವಿಭಿನ್ನವಾದ ಅಭಿರುಚಿಯಿಂದ, ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಹುಶಃ ಈವರೆಗಿನ ಅವರ ಸಿನಿಮಾ ಯಾನದಲ್ಲಿಯೇ ಮೈಲಿಗಲ್ಲಿನಂತೆ ಮೂಡಿ ಬಂದಿರೋ ಚಿತ್ರ ರಂಗನಾಯಕಿ. ಇದೀಗ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿಸಿಕೊಂಡಿರುವ ರಂಗನಾಯಕಿ ಬಿಡುಗಡೆಯ ದಿನಾಂಕ ನಿಗಧಿಯಾಗಿದೆ!


ಈ ಹಿಂದೆ ಅಟೆಂಪ್ಟ್ ಟು ಮರ್ಡರ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಸ್.ವಿ ನಾರಾಯಣ್ ರಂಗನಾಯಕಿ ಚಿತ್ರವನ್ನೂ ನಿಮ,ಆಪಕರಾಗಿ ರೂಪಿಸಿದ್ದಾರೆ. ಈವರೆಗೂ ತೀರಾ ಸೂಕ್ಷ್ಮ ವಿಚಾರಗಳನ್ನೇ ಕಥಾ ವಸ್ತುವಾಗಿ ಆಯ್ಕೆ ಮಾಡಿಕೊಳ್ಳುತ್ತಾ ಗೆಲುವು ಕಂಡಿರುವ ದಯಾಳ್ ಪದ್ಮನಾಭನ್ ರಂಗನಾಯಕಿಯ ಮೂಲಕವೂ ಅದೆಷ್ಟೋ ನೊಂದ ಹೆಣ್ಣು ಮಕ್ಕಳ ಒಡಲ ಮರ್ಮರಕ್ಕೆ ಕನ್ನಡಿ ಹಿಡಿದಿದ್ದಾರೆ. ಇದುವರೆಗೆ ಹೊರ ಬಿದ್ದಿರೋ ಒಂದಷ್ಟು ಮಾಹಿತಿಗಳೇ ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರರಾಗುವಂತೆ ಮಾಡಿವೆ. ಅಂದಹಾಗೆ ರಂಗನಾಯಕಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದರೆ ನವೆಂಬರ್ ಒಂದರಂದು ತೆರೆಗಾಣಲಿದ್ದಾಳೆ.


ಬಿಡುಗಡೆಗೂ ಮುನ್ನವೇ ಈ ಚಿತ್ರ ಗಮನಾರ್ಹ ಸಾಧನೆಯನ್ನೇ ಮಾಡಿದೆ. ಗೋವಾದಲ್ಲಿ ನಡೆಯೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲೂ ರಂಗನಾಯಕಿ ಆಯ್ಕೆಯಾಗಿದೆ. ಈ ಸಾಲಿನಲ್ಲಿ ಈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರೋ ಏಕೈಕ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ. ರಂಗನಾಯಕಿ ಮೂಲಕ ದಯಾಳ್ ಮತ್ತೊಂದು ಆಯಾಮದ ಗೆಲುವು ದಕ್ಕಿಸಿಕೊಳ್ಳುವ ಸ್ಪಷ್ಟ ಸೂಚನೆಗಳೂ ಕೂಡಾ ಈ ಮೂಲಕ ಸಿಕ್ಕಂತಾಗಿವೆ. ಅತ್ಯಾಚಾರಕ್ಕೀಡಾದ ಸುದ್ದಿಗಳು ಆಗಾಗ ಮುಖ್ಯವಾಹಿನಿಯನ್ನು ತಲುಪಿಕೊಳ್ಳುತ್ತಿರುತ್ತವೆ. ಆದರೆ ಯಾರೋ ರಕ್ಕಸರ ವಿಕೃತಿಗೆ ಬಲಿಯಾದ ಹೆಣ್ಣು ಜೀವವೊಂದು ಆ ಆಘಾತವನ್ನು ಎದೆಯಲ್ಲಿಟ್ಟುಕೊಂಡೇ ಈ ಸಮಾಜವನ್ನು ಎದುರಿಸೋ ಸೂಕ್ಷ್ಮ ಕಥೆ ರಂಗನಾಯಕಿಯದ್ದು.

LEAVE A REPLY

Please enter your comment!
Please enter your name here