ಎಲ್ಲಿದ್ದೆ ಇಲ್ಲಿತನಕ: ಪ್ರೇಮದ ಕಡಲಲ್ಲಿ ತೇಲಿ ಬಂದ ನಗೆಯ ಹಾಯಿದೋಣಿ!

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಮ್ಮ ಬಿರುದಿಗೆ ತಕ್ಕಹಾಗೆ ಭರ್ಜರಿ ಮಾತು ಮತ್ತು ಕಾಮಿಡಿ ಟೈಮಿಂಗಿಗೆ ಹೆಸರಾಗಿರುವವರು. ಮಜಾ ಟಾಕೀಸ್ ಎಂಬ ಶೋ ಮೂಲಕ ಮನೆ ಮಾತಾಗಿರೋ ಅವರ ಪಾಲಿಗಿದು ಹೊಸಾ ದಿಕ್ಕಿನತ್ತ ಹೊರಳಿಕೊಳ್ಳುವ ಪರ್ವ ಕಾಲ. ವರ್ಷಾಂತರಗಳಿಂದಲೂ ಒಂದು ವಾರವೂ ಬಿಸುಪು ಕಳೆದುಕೊಳ್ಳದಂತೆ ಮಜಾ ಟಾಕೀಸ್ ಶೋವನ್ನು ನಡೆಸಿಕೊಟ್ಟ ಖ್ಯಾತಿಯೂ ಅವರಿಗಿದೆ. ಅಂಥಾದ್ದೇ ಬಿಗುವಿನೊಂದಿಗೆ, ಭರಪೂರ ಮನೋರಂಜನೆಯೊಂದಿಗೆ ಅವರು ನಾಯಕನಾಗಿ ನಟಿಸಿರೋ ಎಲ್ಲಿದ್ದೆ ಇಲ್ಲಿತನಕ ಚಿತ್ರವೂ ಮೂಡಿ ಬಂದಿದೆ. ಅದು ಈ ವಾರವೇ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.


ತೇಜಸ್ವಿ ನಿರ್ದೇಶನ ಮಾಡಿರುವ ಈ ಚಿತ್ರ ಯಾವ ಜಾನರಿನದ್ದು? ಇದರ ಕಥೆ ಯಾವ ಸ್ವರೂಪದ್ದೆಂಬಂಥಾ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇದೆ. ಆದರೆ ಚಿತ್ರ ತಂಡ ಅದಕ್ಕೆ ಮತ್ತಷ್ಟು ಆವೇಗ ಸಿಗುವಂಥಾ ವಿಚಾರಗಳನ್ನೇ ಜಾಹೀರು ಮಾಡುತ್ತಾ ಕಥೆಯ ಅಂತರಾಳವನ್ನು ಜತನದಿಂದ ಕಾಪಿಟ್ಟುಕೊಂಡಿದೆ. ಇಲ್ಲಿತನಕ ಬಿಡುಗಡೆಯಾಗಿರೋ ಹಾಡುಗಳು ಮತ್ತು ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೈಲರ್ ಮೂಲಕ ಈ ಸಿನಿಮಾದತ್ತ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗಿದ್ದಾರೆ. ಅದಕ್ಕೆ ತಕ್ಕುದಾಗಿಯೇ ಪ್ರೀತಿ ಪ್ರೇಮ, ಮಾಸ್, ಕಾಮಿಡಿ ಅಂಶಗಳನ್ನು ಬೆರೆಸು ಕುಟುಂಬ ಸಮೇತರಾಗಿ ಕೂತು ನೋಡಿ ಎಂಜಾಯ್ ಮಾಡುವಂತೆ ಈ ಸಿನಿಮಾ ಮೂಡಿ ಬಂದಿದೆ ಅನ್ನೋದು ಚಿತ್ರ ತಂಡದ ಭರವಸೆ.


ಇಲ್ಲಿ ಪ್ರೀತಿಯ ಅಂಶಗಳೂ ಕೂಡಾ ಪ್ರೇಕ್ಷಕರನ್ನು ಕಾಡುವಂತೆ ಮೂಡಿ ಬಂದಿವೆಯಂತೆ. ಅಂಥಾ ಪ್ರೇಮದ ಕಡಲಲ್ಲಿ ಕಾಮಿಡಿ ಕಿಂಗ್‌ಗಳ ತಾರಾಗಣದ ಮೂಲಕ ನಗೆಯ ಹಾಯಿದೋಣಿ ತೇಲಿ ಬಂದು ಪ್ರೇಕ್ಷಕರನ್ನು ಪ್ರಪುಲ್ಲಗೊಳಿಸಲಿವೆ. ಇಲ್ಲಿ ಸೃಜನ್ ಅವರ ಮೂಲ ಇಮೇಜ್ ಮತ್ತು ಅವರಿಗಿರೋ ಪ್ರೇಕ್ಷಕ ವರ್ಗವನ್ನು ಗಮನದಲ್ಲಿಟ್ಟುಕೊಂಡೇ ಮನೋರಂಜನೆಯನ್ನಿಲ್ಲಿ ಪ್ರಧಾನವಾಗಿ ಬಳಸಿಕೊಳ್ಳಲಾಗಿದೆ. ಸಾಧು ಕೋಕಿಲಾ, ಸಿಹಿಕಹಿ ಚಂದ್ರು ಮತ್ತು ತರಂಗ ವಿಶ್ವ ಮುಂತಾದವರ ತಾರಾಗಣ ಭರಪೂರ ನಗೆ ಹೊಮ್ಮಿಸಲು ತಯಾರಾಗಿದೆ. ತೇಜಸ್ವಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಲ್ಲಿ ಹರಿಪ್ರಿಯಾ ಸೃಜನ್ ಜೋಡಿಯಾಗಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here