ಹರಿಕೃಷ್ಣರೊಂದಿಗಿನ ವೈಮನಸ್ಯದ ಬಗ್ಗೆ ಸ್ಪಷ್ಟೀಕರಣ ಕೊಟ್ಟ ಒಡೆಯ!

ಕಿತ್ತಾಟ ನಡೆದಿದೆ ಅನ್ನೋದೆಲ್ಲ ಕಟ್ಟುಕಥೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಅದರ ಬಗ್ಗೆ ಗಮನ ಹರಿಸುತ್ತಲೇ ದರ್ಶನ್ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಬರ್ಟ್ ಚಿತ್ರ ಆರಂಭವಾದಂದಿನಿಂದಲೂ ಉಳಿದೆಲ್ಲ ವಿಚಾರಗಳ ಜೊತೆಗೆ ಅದರ ಸಂಗೀತ ನಿರ್ದೇಶಕ ಯಾರಾಗುತ್ತಾರೆಂಬ ಬಗ್ಗೆ ಅಭಿಮಾನಿಗಳ ವಲಯದಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ಅದರಲ್ಲಿ ಅನೇಕರು ವಿ ಹರಿಕೃಷ್ಣ ಅವರ ಹೆಸರನ್ನೇ ಪಕ್ಕಾ ಅಂದುಕೊಂಡಿದ್ದರು. ಆದರೆ ಆ ನಂತರ ನಡೆದ ಪಲ್ಲಟಗಳಲ್ಲಿ ಅರ್ಜುನ್ ಜನ್ಯಾ ರಾಬರ್ಟ್ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆಂಬ ಸುದ್ದಿ ಹೊರ ಬಿದ್ದಿತ್ತು. ಇದರ ಬೆನ್ನಲ್ಲಿಯೇ ಕಂತೆ ಕಂತೆ ರೂಮರುಗಳೂ ಕೂಡಾ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಲು ಶುರುವಿಟ್ಟುಕೊಂಡಿತ್ತು.


ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ದರ್ಶನ್ ನಡುವಿನ ಸ್ನೇಹ ಹಳಸಿಕೊಂಡಿದೆ, ಆ ಕಾರಣದಿಂದಲೇ ರಾಬರ್ಟ್ ಸಂಗೀತ ನಿರ್ದೇಶಕರಾಗಿ ಅರ್ಜುನ್ ಜನ್ಯಾ ಆಯ್ಕೆಯಾಗಿದ್ದಾರೆಂಬ ಸುದ್ದಿಯೂ ಹರಿದಾಡಲಾರಂಭಿಸಿತ್ತು. ಇದೆಲ್ಲ ಕಿವಿಗೆ ಬಿದ್ದ ಕಾರಣದಿಂದಲೇ ದರ್ಶನ್ ಟ್ವಿಟರ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ರಾಬರ್ಟ್ ಮತ್ತು ಒಡೆಯ ಚಿತ್ರಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದರೂ ಕೂಡಾ ರೀರೆಕಾರ್ಡಿಂಗ್ ಕಿಂಗ್ ಹರಿಕೃಷ್ಣ ಅವರೇ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆಂಬ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ಈ ಮೂಲಕ ಸದರಿ ವಿಚಾರದ ಬಗ್ಗೆ ಹರಡಿಕೊಂಡಿದ್ದ ನಾನಾ ದಿಕ್ಕಿನ ರೂಮರುಗಳಿಗೂ ಅವರು ಫುಲ್‌ಸ್ಟಾಪ್ ಇಟ್ಟಿದ್ದಾರೆ.


ವಿ ಹರಿಕೃಷ್ಣ ದರ್ಶನ್ ಸಿನಿಮಾಗಳ ಆಸ್ಥಾನ ಸಂಗೀತ ನಿರ್ದೇಶಕನಂತಾಗಿದ್ದರು. ಕೆಲ ವರ್ಷಗಳಿಂದ ದರ್ಶನ್ ಅಭಿನಯದ ಯಾವುದೇ ಚಿತ್ರಗಳು ಬಂದರೂ ಅದಕ್ಕೆ ಹರಿಕೃಷ್ಣ ಸಂಗೀತ ಪಕ್ಕಾ ಎಂಬಂತಾಗಿ ಹೋಗಿತ್ತು. ಆದರೆ ಚಕ್ರವರ್ತಿ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡೋ ಮೂಲಕ ಆ ಪರಿಪಾಠಕ್ಕೆ ಬ್ರೇಕು ಬಿದ್ದಿತ್ತು. ಇದರ ಹಿಂಚುಮುಂಚಲ್ಲಿಯೇ ದರ್ಶನ್ ಮತ್ತು ಹರಿಕೃಷ್ಣ ನಡುವೆ ಸ್ನೇಹ ಸಂಬಂಧ ಕಡಿತಗೊಂಡಿದೆ ಎಂಬಂಥಾ ಸುದ್ದಿ ಹರಡಿಕೊಂಡಿತ್ತು. ಹರಿಕೃಷ್ಣರನ್ನು ಮನೆಗೆ ಕರೆಸಿಕೊಂಡಿದ್ದ ದರ್ಶನ್ ತಾರಾಮಾರ ಉಗಿದು ಹಾಕಿದ್ದಾರೆಂಬ ರೂಮರ್ ಕೂಡಾ ಹಬ್ಬಿಕೊಂಡಿತ್ತು. ಬೆಂಕಿಯಿಲ್ಲದೇ ಹೊಗೆಯಾಡೋದಿಲ್ಲ ಅನ್ನೋದನ್ನು ನಂಬುವುದಾದರೆ ಹೀಗೆ ಹರಡಿಕೊಂಡಿದ್ದ ಸುದ್ದಿಗಳ ಹಿಂದೆ ಕೊಂಚವಾದರೂ ಸತ್ಯಾಂಶವಿತ್ತೆಂಬುದನ್ನು ಅಲ್ಲಗಳೆಯಲಾಗುವುದಿಲ್ಲ.


ಆದರೆ ಯಜಮಾನ ಚಿತ್ರದ ಮೂಲಕ ಹರಿಕೃಷ್ಣ ಮತ್ತೆ ತಮ್ಮ ಮೂಲ ಆಸ್ಥಾನಕ್ಕೆ ಸಂಗೀತ ನಿರ್ದೇಶಕರಾಗಿ ಮರಳಿದ್ದರು. ಕುರುಕ್ಷೇತ್ರಕ್ಕೂ ಅವರೇ ಸಂಗೀತ ನಿರ್ದೇಶನ ಮಾಡಿದ್ದರು. ಈ ಹಾಡುಗಳೂ ಕೂಡಾ ಹಿಟ್ ಆಗಿದ್ದೀಗ ಇತಿಹಾಸ. ಈ ಕಾರಣದಿಂದಲೇ ರಾಬರ್ಟ್ ಮತ್ತು ಒಡೆಯ ಚಿತ್ರಗಳಿಗೂ ಹರಿಕೃಷ್ಣ ಅವರೇ ಸಂಗೀತ ನಿರ್ದೇಶನ ಮಾಡಲಿದ್ದಾರೆಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಆ ಎರಡೂ ಚಿತ್ರಗಳಿಗೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶಕರಾಗಿ ಬಂದಾಗ ಅಷ್ಟೇ ಸಹಜವಾಗಿ ರೂಮರ್‌ಗಳೂ ಹಬ್ಬಿಕೊಂಡಿದ್ದವು. ಇದೀಗ ಟ್ವೀಟ್ ಮಾಡಿ ಅಸಲೀ ವಿಚಾರ ಹಂಚಿಕೊಳ್ಳುವ ಮೂಲಕ ದರ್ಶನ್ ಅದಕ್ಕೆಲ್ಲ ತೆರೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here