ಭರಾಟೆ ಬಿರುಗಾಳಿ ಶುರುವಾಗಲು ಒಂಬತ್ತು ದಿನವಷ್ಟೇ ಬಾಕಿ!

ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಭರಾಟೆ ಚಿತ್ರ ಅಕ್ಷರಶಃ ಬಿರುಗಾಳಿಯಂತೆಯೇ ತೆರೆಗಪ್ಪಳಿಸಲು ತಯಾರಾಗಿದೆ. ಪಕ್ಕಾ ಮಾಸ್ ಶೈಲಿಯ, ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಚಿತ್ರಗಳಿಗೆ ಹೆಸರಾದವರು ಯುವ ನಿರ್ದೇಶಕ ಚೇತನ್. ಅವರ ಈ ವರೆಗಿನ ಸಿನಿಮಾ ಜರ್ನಿಯಲ್ಲಿಯೇ ಇದು ಹೈ ವೋಲ್ಟೇಜ್ ಮಾಸ್ ಸಿನಿಮಾ ಅನ್ನಲು ಯಾವ ಅಡ್ಡಿಯೂ ಇಲ್ಲ. ಈ ಮಾತನ್ನು ಇದುವರೆಗೆ ಜಾಹೀರಾಗಿರೋ ಶ್ರೀಮುರಳಿ ಲುಕ್ಕು, ಟೀಸರ್ ಮತ್ತು ಟ್ರೇಲರ್‌ಗಳ ಖದರ್ ನೋಡಿದ ಪ್ರತಿಯೊಬ್ಬರೂ ಅನುಮೋದಿಸುತ್ತಾರೆ. ಇದು ಭರಾಟೆಯ ಅಸಲೀ ಶಕ್ತಿ!


ನಿರ್ಮಾಪಕ ಸುಪ್ರೀತ್ ಪಾಲಿಗಿದು ಕನಸಿನ ಚಿತ್ರ. ಆದ್ದರಿಂದಲೇ ಆರಂಭದಿಂದ ಹಿಡಿದು ಕಡೇಯ ವರೆಗೂ ಅವರಿದನ್ನು ಅದ್ದೂರಿಯಾಗಿಯೇ ರೂಪಿಸಿದ್ದಾರೆ. ನಿರ್ದೇಶಕನ ಕನಸುಗಳನ್ನು ತನ್ನದೇ ಅಂದುಕೊಳ್ಳುವ, ಸಿನಿಮಾವನ್ನು ವ್ಯವಹಾರದಾಚೆಗೂ ಪ್ರೀತಿಸುವ ವ್ಯವಧಾನ ಹೊಂದಿರೋ ನಿರ್ಮಾಪಕರಿದ್ದಾಗ ಮಾತ್ರವೇ ದೃಷ್ಯ ವೈಭವ ಪ್ರೇಕ್ಷಕರೆದುರು ಅನಾವರಣಗೊಳ್ಳುತ್ತದೆ. ಸುಪ್ರೀತ್ ಕೂಡಾ ಅಂಥಾದ್ದೇ ಕಲಾ ಪ್ರೇಮದಿಂದ ಪ್ರತೀ ಫ್ರೇಮುಗಳೂ ಕೂಡಾ ದೃಷ್ಯ ಶ್ರೀಮಂತಿಕೆಯಿಂದ ಕಂಗೊಳಿಸುವಂತೆ ಈ ಚಿತ್ರವನ್ನು ರೂಪಿಸಿದ್ದಾರಂತೆ. ಈವತ್ತಿಗೆ ಭರಾಟೆಯ ಬಿರುಗಾಳಿಯಂತೆ ನುಗ್ಗಿ ಬರುತ್ತಿರೋದಕ್ಕೆ ಸುಪ್ರೀತ್ ಅವರ ಕನಸುಗಾರಿಕೆಯೂ ಪ್ರಧಾನ ಕಾರಣ.


ಉಗ್ರಂ ಚಿತ್ರದ ನಂತರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಮಾಸ್ ಇಮೇಜ್ ಪಡೆದುಕೊಂಡಿದ್ದಾರೆ. ಅವರು ಆ ಅವತಾರದಲ್ಲಿ ಕಾಣಿಸಿಕೊಂಡರಷ್ಟೇ ಅಭಿಮಾನಿ ಬಳಗ ಥ್ರಿಲ್ ಆಗುತ್ತದೆ. ಇದನ್ನು ಮನಗಂಡೇ ಚೇತನ್ ಭರ್ಜರಿ ಸಾಹಸಮಯವಾದ ಈ ಚಿತ್ರವನ್ನು ರೂಪಿಸಿದ್ದಾರೆ. ಇದು ಶ್ರೀಮುರಳಿ ಈ ಹಿಂದೆಂದೂ ಕಾಣಿಸಿಕೊಳ್ಳದಂಥಾ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳಿವೆ. ಇದರ ಜೊತೆ ಜೊತೆಗೇ ಮುದ್ದಾದ ಪ್ರೇಮ ಕಥೆಯೂ ಇಲ್ಲಿದೆ. ಶ್ರೀಲೀಲಾ ಮತ್ತು ಶ್ರೀ ಮುರುಳಿ ಜೋಡಿ ಅಂಥಾ ಪ್ರೇಮ ಸನ್ನಿವೇಶಗಳಲ್ಲಿ ಅಷ್ಟೇ ಮುದ್ದಾಗಿ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರ ತಂಡದಲ್ಲಿದೆ. ಒಟ್ಟಾರೆಯಾಗಿ ಶ್ರೀಮುರಳಿ ಪಾಲಿಗಿದು ವಿಶೇಷವಾದ ಚಿತ್ರ. ಇನ್ನೇನು ಒಂಬತ್ತು ದಿನದೊಪ್ಪತ್ತಿನಲ್ಲಿಯೇ ಭರಾಟೆಯ ಬಿರುಗಾಳಿ ತೆರೆಗಪ್ಪಳಿಸಲಿದೆ.

LEAVE A REPLY

Please enter your comment!
Please enter your name here