ಸವರ್ಣದೀರ್ಘ ಸಂಧಿ: ಗ್ಯಾಂಗ್‌ಸ್ಟರ್ ಹೀರೋ ವ್ಯಾಕರಣದಲ್ಲಿ ಪಂಟರ್!

ನ್ನಡ ಚಿತ್ರರಂಗದಲ್ಲೀಗ ಹೊಸ ಆಲೋಚನೆ, ಕ್ರಿಯೇಟಿವಿಟಿಯನ್ನೇ ಬಂಡವಾಳವಾಗಿಸಿಕೊಂಡಿರೋ ನವ ಪ್ರತಿಭೆಗಳ ಸದ್ದು ಜೋರಾಗಿದೆ. ಇಂಥಾ ಹೊಸಾ ಅಲೆಯ ಚಿತ್ರಗಳ ಮೊದಲು ಪ್ರೇಕ್ಷಕರನ್ನು ತಲುಪಿಕೊಳ್ಳುವದೇ ವಿಭಿನ್ನವಾ ಶೀರ್ಷಿಕೆಯ ಮೂಲಕ ಅಂಥಾ ವಿಶಿಷ್ಟ ಶೀರ್ಷಿಕೆಯ ಸಿನಿಮಾಗಳ ಸಾಲಿನಲ್ಲಿಯೇ ಅತ್ಯಂತ ಅಪರೂಪದ್ದಾಗಿ ದಾಖಲಾಗುವ ಚಿತ್ರ ‘ಸವರ್ಣದೀರ್ಘ ಸಂಧಿ’. ಈಗಾಗಲೇ ತುಳು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಯಶಸ್ವಿಯಾಗಿರುವ ವೀರೇಂದ್ರ ಶೆಟ್ಟಿ ಈ ಸಿನಿಮಾ ಮೂಲಕ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ.


ಸವರ್ಣದೀರ್ಘ ಸಂಧಿ ಎಂಬ ಶೀರ್ಷಿಕೆ ಒಂದೇ ಗುಕ್ಕಿಗೆ ಯಾರನ್ನಾದರೂ ಹಿಡಿದಿಡುವಷ್ಟು ಪರಿಣಾಮಕಾರಿಯಾದದ್ದು. ಈ ಸಿನಿಮಾ ಸುದ್ದಿ ಕೇಂದ್ರಕ್ಕೆ ಬಂದ ಕ್ಷಣದಿಂದಲೂ ಇದು ಯಾವ ಜಾನರಿನ ಚಿತ್ರ, ಇದರಲ್ಲಿನ ಕಥೆ ಯಾವ ಬಗೆಯದ್ದೆಂಬ ಕುತೂಹಲ ಎಲ್ಲರಲ್ಲಿಯೂ ಮೂಡಿಕೊಂಡಿತ್ತು. ಈ ಬಗ್ಗೆ ನಿರ್ದೇಶಕ ಕಂ ಹೀರೋ ವೀರೇಂದ್ರ ಶೆಟ್ಟಿ ಒಂದಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಹಾಗೆ ನಿರ್ದೇಶಕರು ಜಾಹೀರು ಮಾಡಿರುವ ಸಂಗತಿಗಳೇ ಸವರ್ಣದೀರ್ಘ ಸಂಧಿಯ ಬಗ್ಗೆ ಮತ್ತಷ್ಟು ಆಕರ್ಷಣೆ ಮೀಡಿಸುವಷ್ಟರ ಮಟ್ಟಿಗೆ ಶಕ್ತವಾಗಿವೆ.


ವೀರೇಂದ್ರ ಶೆಟ್ಟಿ ತುಳು ಚಿತ್ರರಂಗದಲ್ಲಿ ಮೊದಲ ಚಿತ್ರದ ಮಹಾ ಗೆಲುವಿನ ಮೂಲಕವೇ ಸ್ಟಾರ್ ನಿರ್ದೇಶಕರಾಗಿ ಹೆಸರುವಾಸಿಯಾಗಿರುವವರು. ಮೂಲತಃ ಪತ್ರಕರ್ತರಾಗಿ ಆ ವಲಯದಲ್ಲಿ ವರ್ಷಾಂತರಗಳ ಕಾಲ ಕಾರ್ಯ ನಿರ್ವಹಿಸಿದ್ದವರು, ಅಂಕಣಕಾರರಾಗಿಯೂ ಹೆಸರು ಮಾಡಿದ್ದವರು ವೀರೇಂದ್ರ ಶೆಟ್ಟಿ. ನಂತರದಲ್ಲಿ ತಮ್ಮ ಮೂಲ ಆಸಕ್ತಿಯ ಕ್ಷೇತ್ರವಾದ ಸಿನಿಮಾ ರಂಗದತ್ತ ಹೊರಳಿಕೊಂಡಿದ್ದ ಅವರು ಚಾಲಿ ಪೋಲಿಲು ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ತುಳು ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆಗಳನ್ನು ಮಾಡಿ ಬಿಟ್ಟಿತ್ತು. ಇಂಥಾ ದೊಡ್ಡ ಗೆಲುವಿನ ನಂತರದಲ್ಲಿ ವೀರೇಂದ್ರ ಶೆಟ್ಟಿಯವರ ಮನಸು ವಾಲಿಕೊಂಡಿದ್ದದ್ದು ಕನ್ನಡ ಚಿತ್ರರಂಗದತ್ತ. ಕನ್ನಡಕ್ಕೆ ಒಂದು ವಿಶೇಷವಾದ ಕಥೆಯೊಂದಿಗೇ ಎಂಟ್ರಿ ಕೊಟಬೇಕೆಂಬ ಇಂಗಿತ ಹೊಂದಿದ್ದ ವೀರೇಂದ್ರ ಶೆಟ್ಟಿ ಅದಕ್ಕೆ ತಕ್ಕುದಾದ ಸವರ್ಣದೀರ್ಘ ಸಂಧಿಯೊಂದಿಗೆ ಪಾದಾರ್ಪಣೆ ಮಾಡಿದ್ದಾರೆ.


ಸವರ್ಣದೀರ್ಘ ಸಂಧಿ ಗ್ಯಾಂಗ್‌ಸ್ಟರ್ ಒಬ್ಬನ ಕುರಿತಾದ ಸಿನಿಮಾ. ಹಾಗೆಂದಾಕ್ಷಣ ಇಲ್ಲಿ ಮಚ್ಚು ಲಾಂಗುಗಳ ಆರ್ಭಟ, ಹೊಡೆದಾಟ ಬಡಿದಾಟಗಳ ರಣಾರಂಪಗಳಿರುತ್ತವೆ ಅದು ಶುದ್ಧ ತಪ್ಪು. ಯಾಕೆಂದರೆ, ಇಲ್ಲಿನ ಗ್ಯಾಂಗ್ ಸ್ಟರ್ ನಾಯಕ ಪಕ್ಕಾ ಕಾಮಿಡಿ ಆಸಾಮಿ. ಗ್ಯಾಂಗ್ ಸ್ಟರ್‌ಗಳೆಂದರೆ ಭಾಷೆ, ವ್ಯಾಕರಣ ಮತ್ತು ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲದವರೆಂಬ ನಂಬಿಕೆ ಸಾವ್ರರ್ತಿಕವಾಗಿದೆ. ಆದರೆ ಇಲ್ಲಿನ ಗ್ಯಾಂಗ್‌ಸ್ಟರ್ ವ್ಯಾಕರಣವನ್ನು ಅರೆದು ಕುಡಿದ ಆಸಾಮಿ. ಆತನ ವ್ಯಾಕರಣ ಪಾಂಡಿತ್ಯದ ಮೂಲಕವೇ ನಗೆಯುಕ್ಕಿಸುವ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆಯಂತೆ. ಸಾಹಿತಿಗಳ ಬಗ್ಗೆ, ಸಾಹಿತ್ಯದ ಬಗ್ಗೆ ಪ್ರಸ್ತಾಪಿಸಿದರೂ ಅದಾಗ ತಾನೇ ಸುಕ್ಕಾ ಸುರಿದುಕೊಂಡವರಂತೆ ಮುಖ ಸಿಂಡರಿಸೋ ಅದೆಷ್ಟೋ ರಿಯಲ್ ಡಾನುಗಳು, ಪುಡಿ ರೌಡಿಗಳಿದ್ದಾರೆ. ಅಂಥಾದ್ದರಲ್ಲಿ ವ್ಯಾಕರಣ ಪಾರಂಗತನಾದ ಸವರ್ಣದೀರ್ಘ ಸಂಧಿಯ ಗ್ಯಾಂಗ್‌ಸ್ಟರ್ ಬಗ್ಗೆ ಕೌತುಕ ಕುಡಿಯೊಡೆಯದಿರಲು ಸಾಧ್ಯವೇ ಇಲ್ಲ!

LEAVE A REPLY

Please enter your comment!
Please enter your name here