ಎಲ್ಲಿದ್ದೆ ಇಲ್ಲಿತನಕ: ಪ್ರೇಕ್ಷಕರ ಪಾಲಿಗೆ ಕಾದಿದೆ ಸರ್‌ಪ್ರೈಸ್‌ಗಳ ಸರಮಾಲೆ!

[adning id="4492"]

ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಗಳಿಸಿಕೊಂಡಿರೋ ಸೃಜನ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ. ಈವರೆಗೆ ಸೃಜಾ ಒಂದಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಒಂದು ಮಟ್ಟಿಗೆ ಗೆಲುವನ್ನೂ ಕಂಡಿದ್ದಾರೆ. ಆದರೆ ಎಲ್ಲ ರೀತಿಯಿಂದಲೂ ಸೃಜಾ ಪಾಲಿಗೆ ಈ ಚಿತ್ರ ಸ್ಪೆಷಲ್ ಪ್ಯಾಕೇಜ್. ಅದಕ್ಕೆ ಈ ಚಿತ್ರ ಅವರ ಹೋಂ ಬ್ಯಾನರಿನಲ್ಲಿ ತಯಾರಾಗಿದೆ ಎಂಬುದರಿಂದ ಮೊದಲ್ಗೊಂಡು ನಾನಾ ಕಾರಣಗಳಿವೆ. ಹೀಗೆ ತಮ್ಮ ಪಾಲಿಗೆ ಸ್ಪೆಷಲ್ಲಾಗಿರೋ ಈ ಸಿನಿಮಾ ಪ್ರೇಕ್ಷಕರ ಪಾಲಿಗೂ ಸರ್‌ಪ್ರೈಸ್‌ಗಳ ಸುರಿಮಳೆಗರೆಯುವಂತೆ ಮೂಡಿ ಬಂದಿದೆ ಎಂಬ ಭರವಸೆ ಸೃಜನ್ ಅವರಲ್ಲಿದೆ.


ಎಲ್ಲಿದ್ದೆ ಇಲ್ಲಿತನಕ ತೇಜಸ್ವಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ. ಕಿರುತೆರೆಯಲ್ಲಿಯೇ ಟಿಆರ್‌ಪಿಯಲ್ಲಿ ದಾಖಲೆ ನಿರ್ಮಿಸಿ, ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದ್ದ ಮಜಾ ಟಾಕೀಸ್‌ನ ಕ್ರಿಯೇಟಿವ್ ನಿರ್ದೇಶಕರಾಗಿದ್ದವರು ತೇಜಸ್ವಿ. ಕನ್ನಡದ ಮಟ್ಟಿಗೆ ತೀರಾ ಹೊಸದಾದ ಸ್ವರೂಪದಲ್ಲಿ ಮೂಡಿ ಬಂದಿದ್ದ ಈ ಕಾರ್ಯಕ್ರಮದ ಹಿಂದೆ ಪ್ರತಿಭಾವಂತರದ್ದೊಂದು ತಂಡವೇ ಇದೆ. ಆ ಇಡೀ ತಂಡ ತೇಜಸ್ವಿಯ ಸಾರಥ್ಯದಲ್ಲಿ ವರ್ಷಾಂತರಗಳ ಕಾಲ ಸೃಜನ್‌ಗಾಗಿ ಒಂದು ಚೆಂದದ ಕಥೆ ರೂಪಿಸಲು ಪ್ರಯತ್ನಿಸಿತ್ತು. ಹಾಗೆ ಸಿದ್ಧಗೊಂಡಿದ್ದ ಅನೇಕ ಕಥೆಗಳೆಲ್ಲ ಗಾಢವಾದ ಚರ್ಚೆಗೆ ಸಿಕ್ಕಾಗ ಈ ತಂಡವೇ ಎಲ್ಲ ಕಥೆಗಳನ್ನು ಬದಿಗೆ ಸರಿಸಿ ಹೊಸತಾದ ಕಥೆ ಕಟ್ಟೋ ಪಣ ತೊಟ್ಟಾಗ ಹುಟ್ಟಿಕೊಂಡಿದ್ದು ‘ಎಲ್ಲಿದ್ದೆ ಇಲ್ಲಿತನಕ’ ಚಿತ್ರ.


ಇದುವರೆಗೂ ಹಾಡುಗಳು ಮತ್ತು ಟ್ರೇಲರ್ ಮೂಲಕ ಒಂದಷ್ಟು ಹೊಳಹುಗಳು ಪ್ರೇಕ್ಷಕರತ್ತ ದಾಟಿಕೊಂಡಿವೆ. ಅದರ ಪ್ರಕಾರವಾಗಿಯೇ ಈ ಸಿನಿಮಾ ಕಥೆ ಹೀಗಿರಬಹುದೆಂಬ ದಾಟಿಯ ಚರ್ಚೆಗಳೂ ನಡೆಯುತ್ತಿವೆ. ಆದರೆ ಯಾರೂ ಕೂಡಾ ಸುಲಭಕ್ಕೆ ಊಹಿಸಲಾಗದ ಕಥೆ ಈ ಚಿತ್ರದ್ದೆಂಬ ನಂಬಿಕೆ ಚಿತ್ರತಂಡದಲ್ಲಿದೆ. ವರ್ಷಾಂತರಗಳ ತಯಾರಿ ಮತ್ತು ಅದಕ್ಕೆ ತಕ್ಕುದಾಗಿಯೇ ಚಿತ್ರೀಕರಣವನ್ನೂ ನಡೆಸಿಕೊಂಡಿರೋ ಈ ಚಿತ್ರದಲ್ಲಿ ಹತ್ತಾರು ಸರ್‌ಪ್ರೈಸ್‌ಗಳು ಪ್ರೇಕ್ಷಕರಿಗಾಗಿ ಕಾದಿವೆ. ಸೃಜನ್ ಲೋಕೇಶ್ ಕೂಡಾ ಬೇರೆಯದ್ದೇ ಗೆಟಪ್ಪಿನಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಈ ವಾರ ಎಲ್ಲಿದ್ದ ಇಲ್ಲಿತನಕ ಚಿತ್ರದ ಮೇಲೆ ಹುಟ್ಟಿಕೊಂಡಿರೋ ಅಷ್ಟೂ ನಿರೀಕ್ಷೆಗಳು ತಣಿಯಲಿವೆ. ಕುಟುಂಬ ಸಮೇತರಾಗಿ ಕೂತು ನೋಡುವಂತೆ ಮೂಡಿ ಬಂದಿರೋ ಈ ಚಿತ್ರ ತೆರೆಗಾಣಲು ಕ್ಷಣಗಣನೆ ಆರಂಭವಾಗಿದೆ.

[adning id="4492"]

LEAVE A REPLY

Please enter your comment!
Please enter your name here