ನಿಮ್ಮೆಲ್ಲರ ದಸರಾ ಸಂಭ್ರಮ ‘ಕಿಸ್’ನೊಂದಿಗೆ ಮತ್ತಷ್ಟು ಕಳೆಗಟ್ಟಲಿ!

ಅಂಬಾರಿಯಿಂದ ಆರಂಭವಾಗಿ ಇಲ್ಲೀವರೆಗೂ ನಿರ್ದೆಶಕ ಎ.ಪಿ ಅರ್ಜುನ್ ಅವರದ್ದು ವಿಭಿನ್ನವಾದ ಪ್ರೇಮ ಕಥಾನಕಗಳ ಪಯಣ ಅನೂಚಾನವಾಗಿಯೇ ಸಾಗಿ ಬಂದಿದೆ. ಆ ಸಾಲಿನಲ್ಲಿ ವಾರದ ಹಿಂದಷ್ಟೇ ತೆರೆಗಂಡು ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಕಿಸ್ ಚಿತ್ರವೊಂದು ಮೈಲಿಗಲ್ಲಿದ್ದಂತೆ. ಯಾಕೆಂದರೆ ಈ ಸಿನಿಮಾ ತಯಾರಾದ ರೀತಿ, ಅದರ ಕಥೆ, ತಾಜಾತನ ಮತ್ತು ಅದಕ್ಕೆ ಸಿಗುತ್ತಿರೋ ದಂಡಿ ದಂಡಿ ಪ್ರೀತಿ… ಇದು ಕೇವಲ ಪ್ರೇಕ್ಷಕರ ಪಾಲಿಗೆ ಮಾತ್ರವೇ ಅಪರೂಪದ ಚಿತ್ರವಲ್ಲ ಬದಲಾಗಿ ಖುದ್ದು ನಿರ್ದೇಶಕ ಎ.ಪಿ ಅರ್ಜುನ್ ಸಿನಿಮಾ ಜರ್ನಿಯಲ್ಲಿಯೂ ಸ್ಪೆಷಲ್ ಮೂವಿ.


ವಿರಾಟ್ ಮತ್ತು ಶ್ರೀಲೀಲಾ ಎಂಬ ಹೊಸಾ ಹುಡುಗ ಹುಡುಗಿ ನಟಿಸಿರೋ ಕಿಸ್ ಕರಾಮತ್ತಿಗೆ ಪ್ರೇಕ್ಷಕರೆಲ್ಲ ತಲೆದೂಗಿದ್ದಾರೆ. ಸಿನಿಮಾ ಗ್ರಾಮರ್ ಅನ್ನು ಸ್ಪಷ್ಟವಾಗಿಯೇ ಅರಗಿಸಿಕೊಂಡಿರೋ ಅರ್ಜುನ್ ಈ ಚಿತ್ರವನ್ನು ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇಷ್ಟವಾಗುವಂತೆಯೇ ಕಟ್ಟಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎಲ್ಲ ವರ್ಗದ ಪ್ರೇಕ್ಷಕರೊಂದಿಗೆ ಸಾಮಾನ್ಯ ಪ್ರೇಕ್ಷಕರೂ ಥಿಯೇಟರಿಗೆ ಆಗಮಿಸುವಂತಾದರೆ ಯಾವ ಚಿತ್ರವೇ ಆದರೂ ಗೆಲುವು ಕಾಣುತ್ತದೆ. ಈ ಪ್ರಕ್ರಿಯೆ ಕಿಸ್ ಬಿಡುಗಡೆಯಾಗಿ ಎರಡನೇ ದಿನದಿಂದಲೇ ಶುರುವಾಗಿತ್ತು. ಆದ್ದರಿಂದಲೇ ಚಿತ್ರಮಂದಿರಗಳು ತುಂಬಿವೆ. ಕಲೆಕ್ಷನ್ ವಿಚಾರದಲ್ಲಿಯೂ ಕಿಸ್ ಖುಷಿಯಾಗಿಯೇ ನಸು ನಗುವಂತಾಗಿದೆ.


ಪ್ರೀತಿಯೆಂಬುದು ಸಿನಿಮಾ ಪಾಲಿಗೆ ತೇಯ್ದಷ್ಟೂ ಸುವಾಸನೆ ಬೀರುವ, ಮಥಿಸಿದಷ್ಟೂ ಹೊಸಾ ಸಾಧ್ಯತೆಗಳನ್ನು ಹುಟ್ಟು ಹಾಕುವ ಮಾಯೆಯಂಥಾದ್ದು. ಈ ಕಾರಣದಿಂದಲೇ ಪ್ರೀತಿ ಅದೆಷ್ಟು ಕಥೆಗಳಿಗೆ ಸರಕಾದರೂ ಕೂಡಾ ತಾಜಾತನ ಉಳಿಸಿಕೊಂಡು ಬಂದಿದೆ. ಅದರಲ್ಲಿಯೂ ಪ್ರೇಮವನ್ನು ಹೊಸಾ ಬಗೆಯಲ್ಲಿ ಪರಿಭಾವಿಸುವ, ಕಥೆಯಾಗಿಸುವ ಕಸುವು ಹೊಂದಿರೋ ಎ.ಪಿ ಅರ್ಜುನ್‌ರಂಥಾ ಯುವ ನಿರ್ದೇಶಕರ ಪಾಲಿಗಂತೂ ಪ್ರೀತಿಯ ಸಬ್ಜೆಕ್ಟು ಯಾವ ಕಾಲಕ್ಕೂ ಹಳತಾಗಲು ಸಾಧ್ಯವೇ ಇಲ್ಲ. ಇದು ಕಿಸ್ ಚಿತ್ರವನ್ನು ಅವರು ರೂಪಿಸಿದ ರೀತಿಯಲ್ಲಿಯೇ ಋಜುವಾತಾಗಿದೆ. ಆರಂಭದ ದಿನದಿಂದಲೇ ‘ಕಿಸ್ ಸಖತ್ತಾಗಿದೆ’ ಎಂಬಂಥಾ ಅಭಿಪ್ರಾಯ ಜನರಿಂದ ಜನರಿಗೆ ಹಬ್ಬಿಕೊಂಡು ಈ ಸಿನಿಮಾ ಭರ್ಜರಿ ಪ್ರದರ್ಶನದೊಂದಿಗೆ ಮುಂದುವೆರೆಯುತ್ತಿದೆ. ಇದು ಕುಟುಂಬ ಸಮೇತರಾಗಿ ನೋಡುವಂಥಾ, ಯಾವ ಮುಜುಗರವೂ ಇಲ್ಲದೇ ಆಹ್ಲಾದ ತುಂಬುವಂಥಾ ಚೇತೋಹಾರಿ ಚಿತ್ರ. ನಿಮ್ಮೆಲ್ಲರ ದಸರಾ ಸಂಭ್ರಮ ಕಿಸ್‌ನೊಂದಿಗೆ ಮತ್ತಷ್ಟು ಕಳೆಗಟ್ಟಲಿ!

LEAVE A REPLY

Please enter your comment!
Please enter your name here