ಈ ಸಂಜೆಗಳಿಗೆ ಅದ್ಯಾವಾಗ ನಿನ್ನ ಕೆನ್ನೆ ರಂಗನ್ನು ಸಾಲ ಕೊಟ್ಟೆಯೋ ಕಾಣೆ!

[adning id="4492"]

ಜೀವಾ…
ಲ್ಲದಿರೋದನ್ನ ಇದೆಯೆಂದೇ ನಂಬಿ ಹುಡುಕೋ ಮನಸ್ಥಿತಿಗೆ ಮನಃಶಾಸ್ತ್ರಜ್ಞರ ಕೈಪಿಡಿಯಲ್ಲಿ ಮಜಬೂತಾದ ಹೆಸರುಗಳು ಸಿಕ್ಕಾವು. ಕೆಲವೊಮ್ಮೆ ನಿಜವಾಗಿಯೂ ನಂಗೆ ಅಂಥಾದ್ಯಾವುದೋ ಭೀಕರ ಕಾಯಿಲೆ ಅಮರಿಕೊಂಡಿರಬಹುದಾ ಅಂತ ಭಯವಾಗೋದಿದೆ. ಆದರೆ, ನಿನ್ನ ಧ್ಯಾನದ ಕಾಯಿಲೆಯನ್ನ ವ್ಯಾಮೋಹದಿಂದಲೇ ಅಪ್ಪಿಕೊಂಡಿರೋವಾಗ ಅದರ ಮುಂದೆ ಮತ್ಯಾವ ಸೀಕುಗಳು ಲೆಕ್ಕಕ್ಕಿಲ್ಲ ಬಿಡು. ಅಷ್ಟಕ್ಕೂ ನಿನ್ನ ಸೆಳೆತವೆಂಬುದು ನನ್ನುಸಿರಿನ ಕಡೇಯ ಜೀಕಾಟದಲ್ಲಿಯೇ ಕೊನೆಯಾಗಬಹುದಾದ ಮಧುರ ರೋಗ. ಅದರ ಆದಿಯೂ ನೀನೆ; ಅಂತ್ಯವೂ ನೀನೇ!

ಯಾವಾಗಲೂ ಮುಸುಡಿ ಊದಿಸಿಕೊಂಡು ಇದು ಮನುಷ್ಯನಾ ಪ್ರಾಣಿಯಾ ಅಂತ ಆಸುಪಾಸಿನವರಿಗೇ ಡೌಟು ಮೂಡುವಂತೆ ಬದುಕುತ್ತಿದ್ದ ಆಸಾಮಿ ನಾನು. ಸಿರಾಸಿರಾ ಸಿಡುಕು ನನ್ನ ಟ್ರೇಡ್‌ಮಾರ್ಕ್ ಎಂಬಂತಾಗಿ ಹೋಗಿತ್ತು. ಇಂಥಾ ಜನುಮದ ಮೈತುಂಬಾ ಅನಿರ್ವಚನೀಯ ಉತ್ಸಾಹ, ಅಪರಿಮಿತ ಜೀವನಪ್ರೀತಿ, ಸಾಧ್ಯವಿದ್ದರೆ ಮೊಗೆ ಮೊಗೆದು ಹಂಚುವಷ್ಟು ಖುಷಿಗಳ ಚಿಗುರು ಮೂಡಿಸಿದ ನಿನ್ನ ಮಾಯಾವಿ ಸೆಳೆತಕ್ಕೆ ಏನಂದರೂ ಕಡಿಮೆಯೇ. ಈಗ ನನ್ನ ಮುಂಜಾವಗಳಿಗೊಂದು ಅರ್ಥ ಬಂದಿದೆ. ತಮ್ಮ ಪಾಡಿಗೆ ತಾವು ಸರಿದು ಹೋಗೋ ಸಂಜೆಗಳಿಗೆ ಅದ್ಯಾವ ಮಾಯಕದಲ್ಲಿ ಆಹ್ಲಾದದ ರಂಗು ತುಂಬಿಕೊಂಡಿತೋ… ಅದನ್ನೇ ಎದೆಗಿಳಿಸಿಕೊಂಡರೆ ರಾತ್ರಿಯ ನೀರವ, ಏಕಾಂತಕ್ಕೂ ಆಹ್ಲಾದ ತುಂಬುತ್ತೆ. ಒಂದು ಜೀವ ಮತ್ತೊಂದು ಜೀವಕ್ಕೆ ಇಂಥಾದ್ದೊಂದು ಮುದ ತುಂಬೋದಕ್ಕಿಂಥಾ ಅಚ್ಚರಿಯ ಸಂಗತಿ ಈ ಜಗತ್ತಲ್ಲಿ ಬೇರ‍್ಯಾವುದೂ ನಂಗೆ ಕಾಣಿಸೋದಿಲ್ಲ.


ಭಗವಂತ ನನ್ನ ಮನಸಿಗೂ ಎದೆಗೂ ಅಳವಡಿಸಿರೋ ಫಿಲ್ಟರಿನಲ್ಲೇ ಏನೋ ಐಬಿದೆ ಅಂತೊಂದು ಗುಮಾನಿ ಆಗಾಗ ಕಾಡುತ್ತೆ. ಯಾಕಂದ್ರೆ ಅನ್ನಿಸಿದ್ದನ್ನ ಆ ಕ್ಷಣವೇ ಮಾತಾಗಿಸೋದರಲ್ಲಿ ನಾ ಪೂರ್ತಿ ವೀಕು. ಹಿಂದ್ಯಾವತ್ತೋ ಹೀಗೆ ಒಂದು ಲೆಟರ್ ನಿನ್ನ ಕೈಗಿಟ್ಟಾಗ ‘ಪಕ್ಕದಲ್ಲೇ ಇದ್ರೂ ಪತ್ರ ಬರ‍್ಕೊಡ್ತಿಯಲ್ಲೋ ಪಾಪಿ’ ಅಂತ ನೀನಂದಿದ್ದ ನೆನಪು. ಆದರೆ ಇದು ಸಂಕೋಚವಾ, ಭಯವಾ ಅಥವಾ ನನ್ನ ಆಸ್ತಿಯಂತಿತಿರೋ ಅಹಂಕಾರವಾ ಎಂಬುದು ಖುದ್ದು ನನಗೇ ಈವತ್ತಿಗೂ ಖಾತ್ರಿಯಾಗಿಲ್ಲ. ಈ ಪರಿ ಬದಲಾವಣೆ ತಂದಿರೋ ನೀನೆಂಬ ನೀನೇ ಇದೊಂದು ವಿಚಾರದಲ್ಲಿ ಶಾಶ್ವತವಾಗಿ ಸೋಲೊಪ್ಪಬೇಕಾದೀತೇನೋ.

ನೀನೆಂಬ ಮಾಯೆ ಯಾವ ರೀತಿ ಆವರಿಸಿಕೊಂಡಿದೆಯೆಂದರೆ ನೀನಿಲ್ಲದಿರೋವಾಗಲೂ ನೀನೇ ಭುಜಕ್ಕೊರಗಿ ಕೂತಂತೆ ಭಾಸವಾಗುತ್ತೆ. ಕೆಲ ಬಾರಿ ಹಾಗಂತ ನಾನಾಗೇ ಅಂದುಕೊಳ್ಳುತ್ತೇನೆ. ಯಾಕಂದ್ರೆ ಈ ಹುಟ್ಟು ಹುಂಬ ಜನುಮ ಭಯ ಬೀಳುವುದು ನೀನಿಲ್ಲದ ಶುಷ್ಕ ಕ್ಷಣಗಳಿಗೆ ಮಾತ್ರ. ಬಹುಶಃ ನನ್ನನ್ನು ಪರೀಕ್ಷೆ ಮಾಡಲೆಂದೇ ನೀ ಆಗಾಗ ದೂರ ಸರಿದು ಆಟಾಡಿಸುತ್ತೀಯೇನೋ. ಅಂಥಾ ಹೊತ್ತಲ್ಲಿ ಈ ಹಾಳಾದವನಿಗೆ ಯಾವ ಬೇಸರವೂ ಕಾಡೋದಿಲ್ಲ ಅಂತಲೇ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಅಂಥಾ ಅನಾಹುತ ಸಂಭವಿಸಬಾರದೆಂದೇ ನಾನಿದನ್ನೆಲ್ಲ ಬರೆಯುತ್ತಿದ್ದೇನೆ. ಯಾಕೆಂದರೆ, ನೀನಿಲ್ಲದ ಕ್ಷಣಗಳಲ್ಲೆಲ್ಲ ನಾ ಇಂಚಿಂಚಾಗಿ ಸಾಯುತ್ತೇನೆ!


ಬಹುಶಃ ಇಂಥಾದ್ದೊಂದು ಸತಾಯಿಸೋ ಪ್ರಾಜೆಕ್ಟಿನ ಭಾಗವಾಗಿಯೇ ನೀನೀಗ ಎಲ್ಲಿಯೋ ಲೀನವಾಗಿ ಹೋಗಿದ್ದಿರ ಬಹುದು. ಗೆಳತಿಯ ಮನೆಯೋ, ಐಸ್‌ಕ್ರೀಂ ಪಾರ್ಲರೋ ನಿನ್ನ ಹೆಜ್ಜೆ ಜಾಡಿಗೆ ಕಣ್ಣಾಗೋದು ಕಷ್ಟ. ಈ ಕ್ಷಣವೂ ನೀ ಎದೆಗೊರಗಿ ಕೂತಿದ್ದೀಯೆಂಬೋ ಭ್ರಮೆಯನ್ನೇ ನಿಜ ಅಂದುಕೊಂಡು ಗೋಧೂಳಿಯ ದಿವ್ಯ ಘಮದಲ್ಲಿ ಬೆರೆತು ನಿಂತಿದ್ದೇನೆ. ಇದೆಲ್ಲ ಹಾಳು ಬಿದ್ದು ಹೋಗಲಿ… ಈ ಸಂಜೆಗಳಿಗೆ ಅದ್ಯಾವಾಗ ನಿನ್ನ ಕೆನ್ನೆ ರಂಗನ್ನು ಸಾಲ ಕೊಟ್ಟೆಯೋ ಕಾಣೆ!
                                         – ನಿನ್ನವನು…

[adning id="4492"]

LEAVE A REPLY

Please enter your comment!
Please enter your name here