ರಾಣಾ ದಗ್ಗುಬಾಟಿಗೆ ನಾಯಕಿಯಾಗಲೊಲ್ಲೆ ಅಂದಳಂತೆ ಕೀರ್ತಿ ಸುರೇಶ್!

ತೆಲುಗಿನಲ್ಲಿ ತೆರೆಕಂಡಿದ್ದ ಮಹಾನಟಿ ಚಿತ್ರದಿಂದಲೇ ಕೀರ್ತಿಯ ಉತ್ತುಂಗವೇರಿದ ನಟಿ ಕೀರ್ತಿ ಸುರೇಶ್. ಇದೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಗಳಿಸಿಕೊಂಡಿರುವ ಕೀರ್ತಿ ಬಾಲಿವುಡ್‌ಗೂ ಪ್ರವೇಶ ಮಾಡಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿಯೂ ಈ ಪ್ರತಿಭಾವಂತ ನಟಿಯ ಪಾಲಿಗೆ ಅವಕಾಶವೆಂಬುದು ಸಾಲುಗಟ್ಟಿ ನಿಂತಿದೆ. ಆದರೆ ಈಕೆ ಆರಂಭದಲ್ಲಿ ಅವಕಾಶ ಸಿಕ್ಕ ತೆಲುಗಿನ ಚಿತ್ರಗಳನ್ನೇ ನಿರಾಕರಿಸುತ್ತಾ ಮುಂದುವರೆಯುತ್ತಿದ್ದಾರೆಂಬ ಆರೋಪವೊಂದು ಇತ್ತೀಚೆಗೆ ಕೇಳಿ ಬರಲಾರಂಭಿಸಿತ್ತು. ಅದೀಗ ರಾಣಾ ದಗ್ಗುಬಾಟಿಗೆ ನಾಯಕಿಯಾಗೋ ಆಫರ್ ಅನ್ನು ಕೀರ್ತಿ ಸಾರಾಸಗಟಾಗಿ ತಿರಸ್ಕರಿಸೋ ಮೂಲಕ ಮತ್ತಷ್ಟು ತೀವ್ರವಾಗಿದೆ.


ಈಗ್ಗೆ ಒಂದಷ್ಟು ವರ್ಷಗಳ ಹಿಂದೆ ಕೀರ್ತಿ ಸುರೇಶ್ ತೆಲುಗಿನಲ್ಲಿ ಅವಕಾಶಕ್ಕಾಗಿ ಅಂಡಲೆಯುವಂಥಾ ಪರಿಸ್ಥಿತಿಯಿತ್ತು. ಆವತ್ತಿಗೆ ಕೀರ್ತಿ ನಾನಾ ಪಡಿಪಾಟಲುಗಳನ್ನೂ ಪಟ್ಟಿದ್ದಳು. ಇದೆಲ್ಲದರಾಚೆಗೆ ನೇನು ಶೈಲಜಾ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಅವಕಾಶ ಗಿಟ್ಟಿಕೊಂಡಿದ್ದ ಕೀರ್ತಿ ಆ ಚಿತ್ರದ ಮೂಲಕವೇ ತೆಲುಗಿನಲ್ಲಿ ನಾಯಕಿಯಾಗಿ ಹೊರ ಹೊಮ್ಮಿದ್ದಳು. ಆ ನಂತರದಲ್ಲಿ ಮಹಾನಟಿ ಎಂಬ ಚಿತ್ರ ಕೀರ್ತಿಯನ್ನು ನಿಜಕ್ಕೂ ಮಹಾನಟಿಯನ್ನಾಗಿಸಿತ್ತು. ಆದರೀಗ ಆಕೆ ತೆಲುಗು ಚಿತ್ರಗಳನ್ನೂ ಕಡೆಗಣಿಸುತ್ತಿದ್ದಾರೆಂಬ ಅಸಹನೆ ತೆಲುಗು ಪ್ರೇಕ್ಷಕರಲ್ಲಿದೆ. ಇದಕ್ಕೆ ಕೀರ್ತಿ ಸದ್ಯ ಬಾಲಿವುಡ್‌ನತ್ತ ಕಣ್ಣಿಟ್ಟಿರೋದೇ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ.


ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರೋ ಕೀರ್ತಿ ಸುರೇಶ್ ಥರ ಥರದ ಪಾತ್ರಗಳ ಮೂಲಕವೇ ಮನೆ ಮಾತಾಗಿದ್ದಾರೆ. ಬಾಲಿವುಡ್‌ನಲ್ಲಿ ಎಲ್ಲ ನಟಿಯರನ್ನೂ ಹಿಂದಿಕ್ಕುವ ಛಾತಿ ಹೊಂದಿರೋ ಈಕೆ ಯಾಕೆ ಆ ಬಗ್ಗೆ ಮನಸು ಮಾಡಿಲ್ಲ ಅಂತೊಂದು ಪ್ರಶ್ನೆ ಕೀರ್ತಿಯ ಅಭಿಮಾನಿಗಳಲ್ಲಿಯೂ ಇತ್ತು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಕೀರ್ತಿ ನಟಿಸಿರೋ ಮಿಸ್ ಇಂಡಿಯಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅದರಲ್ಲಿ ಕೀರ್ತಿಯ ಸ್ಟೈಲಿಶ್ ಲುಕ್ಕಿನ ಝಲಕ್‌ಗಳು ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸಿವೆ. ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ನಬೆಲೆ ನಿಲ್ಲುವ ಭರವಸೆ ಹೊಂದಿರೋ ಕೀರ್ತಿ ಸದ್ಯ ಬೇರ‍್ಯಾವ ಚಿತ್ರಗಳತ್ತಲೂ ಮನಸು ಮಾಡುತ್ತಿಲ್ಲ.

LEAVE A REPLY

Please enter your comment!
Please enter your name here