ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾಳಂತೆ ಸಜನಿ ಶರ್ಮಿಳೆ!

ಪ್ರತೀ ಬಾರಿ ಬಿಗ್‌ಬಾಸ್ ಶೋ ನಡೆದು ಸಮಾಪ್ತಿಗೊಂಡಾಗಲೂ ಅದರ ಬಗ್ಗೆ ಅಸಹನೆ ಮಡುಗಟ್ಟಿಕೊಳ್ಳುತ್ತಾ ಬಂದಿದೆ. ಆದರೆ ಅದಾಗಿ ವರ್ಷ ಕಳೆಯುತ್ತಲೇ ಮತ್ತೆ ಬಿಗ್‌ಬಾಸ್ ಮನೆಯೊಳಗೆ ಯಾರು ತೂರಿಕೊಳ್ಳುತ್ತಾರೆಂಬ ರಣ ಕುತೂಹಲ ಅಸಹನೆಯ ಜಾಗವನ್ನು ಆಕ್ರಮಿಸಿಕೊಳ್ಳುತ್ತಲೂ ಬಂದಿದೆ. ಇದೀಗ ಮತ್ತೊಂದು ಆವೃತ್ತಿಯ ಬಿಗ್‌ಬಾಸ್ ಶೋಗೆ ತಯಾರಿ ಆರಂಭವಾಗಿದೆ. ಅದಾಗಲೇ ಈ ಬಾರಿ ಯಾರು ಈ ಶೋನ ಸ್ಪರ್ಧಿಗಳಾಗುತ್ತಾರೆಂಬ ಬಗ್ಗೆ ಥರ ಥರದ ಚರ್ಚೆಗಳು ಆರಂಭವಾಗಿವೆ. ಒಂದಷ್ಟು ನಟನಟಿಯರ ಹೆಸರುಗಳೂ ಈ ಸಾಲಿನಲ್ಲಿ ಹರಿದಾಡುತ್ತಿವೆ. ಅದರಲ್ಲಿ ಬಿಗ್‌ಬಾಸ್ ಪ್ರವೇಶ ನಿಜವಾಗೋ ನಟನಟಿಯರ ಸಾಲಿನಲ್ಲಿ ಶರ್ಮಿಳಾ ಮಾಂಡ್ರೆಯ ಹೆಸರು ಮುಂಚೂಣಿಯಲ್ಲಿದೆ.


ಶರ್ಮಿಳಾ ಮಾಂಡ್ರೆ ವರ್ಷಾಂತರಗಳ ವನವಾಸದ ನಂತರ ಮತ್ತೆ ನಟಿಯಾಗಿ ಮರಳೋ ಸನ್ನಾಹದಲ್ಲಿದ್ದಾರೆ. ಇಂಥಾ ಸುದೀರ್ಘ ಕಣ್ಮರೆಯ ಹಿಂದೆ ಅವಕಾಶಗಳ ಕೊರತೆಯದ್ದೇ ಕಿಸುರಿರೋದು ಸತ್ಯ. ಹೀಗೆ ಅವಕಾಶಕ್ಕೆ ತತ್ವಾರ ಹೊಂದಿರುವವರು ಬಿಗ್‌ಬಾಸ್ ಮನೆ ಪ್ರವೇಶ ಮಾಡಿ ಹೊರ ಬಂದರೆ ಅವಕಾಶಗಳೆಲ್ಲ ಒದ್ದುಕೊಂಡು ಬರುತ್ತವೆ ಎಂಬ ಭ್ರಮೆ ಬಣ್ಣದ ಲೋಕದಲ್ಲಿದೆ. ಆದ್ದರಿಂದಲೇ ಶರ್ಮಿಳಾ ಮಾಂಡ್ರೆ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ತೆರಳೋ ಸಾಧ್ಯತೆಗಳೇ ಹೆಚ್ಚಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.


ಅಷ್ಟಕ್ಕೂ ಸಜನಿ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಶರ್ಮಿಳಾ ಪ್ರತಿಭಾವಂತ ನಟಿ. ಆ ಚಿತ್ರದ ನಂತರವೂ ಚೆಂದದ ಅವಕಾಶಗಳೇ ಈಕೆಯನ್ನು ಅರಸಿ ಬಂದಿದ್ದವು. ಆದರೆ ಒಂದಷ್ಟು ನಟನಟಿಯರ ನಸೀಬು ಅದೇಕೋ ಇದ್ದಕ್ಕಿದ್ದಂತೆ ಕೆಟ್ಟು ನಿಂತು ಬಿಡುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಶರ್ಮಿಳಾ ಕಣ್ಮರೆಯಾದರಾ ಅಥವಾ ಅದರ ಹಿಂದೆ ಅವರ ವೈಯಕ್ತಿಕ ನಿರ್ಧಾರಗಳಿದ್ದವಾ ಗೊತ್ತಿಲ್ಲ. ಅಪರೂಪಕ್ಕೊಮ್ಮೆ ಸಿನಿಮಾಗಳಲ್ಲಿ ಮುಖ ತೋರಿಸುತ್ತಿದ್ದ ಶರ್ಮಿಳಾ ಇತ್ತೀಚಿನ ವರ್ಷಗಳಲ್ಲಿ ಅದನ್ನೂ ಅಪರೂಪವಾಗಿಸಿಕೊಂಡಿದ್ದರು. ಈಕೆ ಬಿಗ್‌ಬಾಸ್ ಮನೆ ಸೇರಿಕೊಳ್ಳುತ್ತಾರಾ? ಅದಾದ ನಂತರ ಮತ್ತೆ ನಾಯಕಿಯಾಗಿ ಬ್ಯುಸಿಯಾಗಲಿದ್ದಾರಾ ಎಂಬುದಕ್ಕೆ ಇಷ್ಟರಲ್ಲಿಯೇ ಉತ್ತರ ಸಿಗಲಿದೆ.

LEAVE A REPLY

Please enter your comment!
Please enter your name here