ಎಲ್ಲಿದ್ದೆ ಇಲ್ಲಿತನಕ: ಟ್ರೇಲರ್‌ನಲ್ಲಿ ಕಂಡಿದ್ದು ಮನೋರಂಜನಾತ್ಮಕ ದೃಷ್ಯಕಾವ್ಯ!

[adning id="4492"]

ಜಾ ಟಾಕೀಸ್ ಶೋ ಮೂಲಕವೇ ಕಿರುತೆರೆ ಪ್ರೇಕ್ಷಕರ ಮನಗೆದ್ದು ಟಾಕಿಂಗ್ ಸ್ಟಾರ್ ಎನ್ನಿಸಿಕೊಂಡಿರುವವರು ಸೃಜನ್ ಲೋಕೇಶ್. ಇವರು ನಟಿಸಿರೋ ಎಲ್ಲಿದ್ದೆ ಇಲ್ಲಿತನಕ ಎಂಬ ಚಿತ್ರವೀಗ ಚೆಂದದ ಹಾಡುಗಳ ಮೂಲಕ ಭರ್ಜರಿಯಾಗಿಯೇ ಟಾಕ್ ಕ್ರಿಯೇಟ್ ಮಾಡಿದೆ. ಈ ಹಾಡುಗಳ ಕಾವಿನ್ನೂ ಚಾಲ್ತಿಯಲ್ಲಿರುವಾಗಲೇ ಟ್ರೇಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಮೂಲಕ ಗೆಳೆಯನ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಹೀಗೆ ದರ್ಶನ್ ಪ್ರೀತಿಯಿಂದ ಬಿಡುಗಡೆಗೊಳಿಸಿರೋ ಈ ಟ್ರೇಲರ್‌ನಲ್ಲಿ ಪ್ರೀತಿ ತುಂಬಿದ ಮನೋರಂಜನಾತ್ಮಕ ದೃಷ್ಯಕಾವ್ಯವೊಂದು ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.


ಇದುವರೆಗೂ ದರ್ಶನ್ ತಮ್ಮ ಗೆಳೆಯ ಸೃಜನ್ ಲೋಕೇಶ್‌ರ ಸಿನಿಮಾ ಯಾನಕ್ಕೆ ಪ್ರತೀ ಹಂತದಲ್ಲಿಯೂ ಜೊತೆಯಾಗುತ್ತಾ ಬಂದಿದ್ದಾರೆ. ಇದೀಗ ಅವರು ಎಲ್ಲಿದ್ದೆ ಇಲ್ಲಿತನಕ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ಟ್ರೇಲರ್ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿರ್ದೇಶಕ ತೇಜಸ್ವಿ ಈ ಹಿಂದೆಯೇ ಸದರಿ ಸಿನಿಮಾ ಕಥೆ ಎಲ್ಲ ಅಂಶಗಳನ್ನೂ ಸೇರಿಸಿ ತಯಾರಿಸಿದ ರಸಪಾಕದಂಥಾದ್ದೆಂಬ ಮಾತುಗಳನ್ನು ಹೇಳಿದ್ದರು. ಅದಕ್ಕೆ ತಕ್ಕುದಾಗಿಯೇ ಈ ಟ್ರೇಲರ್ ಮೂಡಿ ಬಂದಿದೆ.


ಸೃಜನ್ ಇದ್ದಲ್ಲಿ ಮಾತಿನ ಮೋಡಿ, ನಗಿಸೋ ಮಾತುಗಾರಿಕೆ ಇದ್ದೇ ಇರುತ್ತದೆ ಎಂಬ ನಂಬಿಕೆ ಇದೆ. ಪ್ರೇಮಕಥೆಯೇ ಪ್ರದಾನವಾಗಿರೋ ಎಲ್ಲಿದ್ದೆ ಇಲ್ಲಿತನಕ ಕೂಡಾ ಅದಕ್ಕೆ ಮೋಸ ಮಾಡೋದಿಲ್ಲ ಎಂಬುದಕ್ಕೂ ಈ ಟ್ರೇಲರ್ ತುಂಬಾ ಸಾಕ್ಷಿಗಳು ಸಿಕ್ಕಿವೆ. ರೊಮ್ಯಾಂಟಿಕ್ ಪ್ರೇಮ ಕಥನ ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ ಸಾಗೋ ಕಥಾನಕದ ಸುಳಿವನ್ನು ಈ ಟ್ರೇಲರ್ ಬಿಟ್ಟುಕೊಟ್ಟಿದೆ. ಇದರಾಚೆಗೆ ಗಮನ ಸೆಳೆಯೋದು ಕಚಗುಳಿ ಇಡುವಂಥಾ ಹಾಸ್ಯಮಯ ಸನ್ನಿವೇಶಗಳು. ಇಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಲು ಕಲಾವಿದರ ದಂಡೇ ರೆಡಿಯಾಗಿದೆ.


ಸಾಧು ಕೋಕಿಲಾ, ಸಿಹಿಕಹಿ ಚಂದ್ರು, ತರಂಗ ವಿಶ್ವ ಮುಂತಾದವರ ಟೀಮು ನಗಿಸಲು ತಯಾರಾಗಿದೆ. ಈ ಪಾತ್ರಗಳ ಝಲಕ್‌ಗಳೂ ಕೂಡಾ ಈ ಟ್ರೇಲರಿನಲ್ಲಿ ಜಾಹೀರಾಗಿವೆ. ವರ್ಷಾಂತರಗಳ ಕಾಲ ಸುದೀರ್ಘವಾದ ಚರ್ಚೆಗಳೊಂದಿಗೇ ರೂಪುಗೊಂಡಿರೋ ಈ ಚಿತ್ರ ಸೃಜನ್ ಲೋಕೇಶ್ ಅವರ ಇದುವರೆಗಿನ ಸಿನಿಮಾ ಯಾನದಲ್ಲಿಯೇ ಬಲು ಡಿಫರೆಂಟಾಗಿದೆ ಅನ್ನೋದಕ್ಕೂ ಈ ಟ್ರೇಲರ್ ಸಾಕ್ಷಿಯಾಗಿ ನಿಲ್ಲುತ್ತದೆ. ಅದರಲ್ಲಿಯೂ ಎಲ್ಲಿದ್ದೆ ಇಲ್ಲಿತನಕದ ಅದ್ದೂರಿತನವೂ ಕೂಡಾ ಪ್ರಧಾನವಾಗಿ ನೋಡುಗರನ್ನು ಸೆಳೆದುಕೊಂಡಿದೆ. ಸೃಜನ್ ಲೋಕೇಶ್ ತಮ್ಮ ಹೋಂ ಬ್ಯಾನರಿನಲ್ಲಿ ಈ ಸಿನಿಮಾವನ್ನು ರಿಚ್ ಆಗಿಯೇ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಅಕ್ಟೋಬರ್ ೧೧ರಂದು ತೆರೆ ಕಾಣಲಿದೆ.

[adning id="4492"]

LEAVE A REPLY

Please enter your comment!
Please enter your name here