ವೀರಂ ಮೂಲಕ ವಿಷ್ಣು ಅಭಿಮಾನಿಯಾದ ಪ್ರಜ್ವಲ್ ದೇವರಾಜ್!

ಪ್ರಜ್ವಲ್ ದೇವರಾಜ್ ಪಾಲಿಗೀಗ ಗೆಲುವಿನ ಪರ್ವಕಾಲ ಕಣ್ತೆರೆದಂತಿದೆ. ಅವರ ಕೈಲಿರೋ ಸಿನಿಮಾಗಳ ಸರಮಾಲೆ ಈ ಮಾತಿಗೆ ಸ್ಪಷ್ಟ ಸಾಕ್ಷಿ. ಎರಡು ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಂಡು ಮತ್ತೆರಡು ಚಿತ್ರಗಳಿಗಾಗಿ ಅಣಿಯಾಗುತ್ತಿರೋ ಪ್ರಜ್ವಲ್ ಈಗ ಮತ್ತೊಂದನ್ನು ಒಪ್ಪಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ಮತ್ತು ಶೀರ್ಷಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದಂದೇ ಅನೌನ್ಸ್ ಆಗಿರೋ ‘ವೀರಂ’ನಲ್ಲಿ ಪ್ರಜ್ವಲ್ ವಿಷ್ಣು ಅಭಿಮಾನಿಯಾಗಿ ನಟಿಸಲಿದ್ದಾರೆ.


ವೀರಂ ಎಂಬ ಶೀರ್ಷಿಕೆಯೇ ಆಕ್ಷನ್ ಶೈಲಿಯ ಕಥೆಯ ಹೊಳಹು ನೀಡುವಂತಿದೆ. ಇದರ ಫಸ್ಟ್ ಲುಕ್‌ನಲ್ಲಿ ಪ್ರಜ್ವಲ್ ಕೈನಲ್ಲಿ ವಿಷ್ಣುವರ್ಧನ್ ಅವರ ಹಚ್ಚೆಯಿದೆ. ಇದನ್ನು ಕಂಡು ಸಮಸ್ತ ವಿಷ್ಣು ಅಭಿಮಾನಿಗಳೂ ಖುಷಿಗೊಂಡಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದಂದೇ ಅನಾವರಣಗೊಂಡಿರೋ ವೀರಂ ಚಿತ್ರಕ್ಕೆ ವಿಷ್ಣು ಅಭಿಮಾನಿಗಳೆಲ್ಲ ಶುಭ ಕೋರಿದ್ದಾರೆ. ಪ್ರಜ್ವಲ್ ದೇವರಾಜ್‌ರ ಪ್ರತೀ ಚಿತ್ರಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ದರ್ಶನ್ ಸಾಥ್ ಕೊಡುತ್ತಾ ಬಂದಿದ್ದಾರೆ. ವೀರಂ ಟೈಟಲ್ ಲಾಂಚ್ ಮಾಡೋ ಮೂಲಕ ಬೆಂಬಲಿಸಿರುವ ದರ್ಶನ್ ಪ್ರಜ್ವಲ್‌ಗೆ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.


ಅಂದಹಾಗೆ ವೀರಂ ಪ್ರಜ್ವಲ್ ದೇವರಾಜ್ ಅಭಿನಯಿಸಿರೋ ಮೂವತೈದನೇ ಚಿತ್ರ. ಸ್ವತಃ ವಿಷ್ಣು ಅಭಿಮಾನಿಯಾಗಿರೋ ಖದರ್ ಕುಮಾರ್ ವೀರಂ ಅನ್ನು ನಿರ್ದೇಶನ ಮಾಡಲಿದ್ದಾರೆ. ಡಾಟರ್ ಆಫ್ ಪಾರ್ವತಮ್ಮ ಎಂಬ ಹಿಟ್ ಸಿನಿಮಾ ನಿರ್ಮಿಸಿದ್ದ ದೀಶಾ ಎಂಟರ್‌ಟೈನರ‍್ಸ್ ಸಂಸ್ಥೆ ವೀರಂ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ. ಪ್ರಜ್ವಲ್ ಇದೀಗ ಇನ್ಸ್‌ಪೆಕ್ಟರ್ ವಿಕ್ರಂ ಮತ್ತು ಅರ್ಜುನ್ ಗೌಡ ಚಿತ್ರಗಳ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಮತ್ತೆರಡು ಚಿತ್ರಗಳಿಗಾಗಿ ರೆಡಿಯಾಗಿದ್ದಾರೆ. ಅಷ್ಟರಲ್ಲಿಯೇ ವೀರಂ ಸೆಟ್ಟೇರಿದೆ. ಅಂತೂ ಈ ಮೂಲಕ ಮದುವೆಯ ನಂತರದಲ್ಲಿ ಡೈನಾಮಿಕ್ ಪ್ರಿನ್ಸ್ ಅದೃಷ್ಟ ಖುಲಾಯಿಸಿಕೊಂಡಿರೋದು ಸ್ಪಷ್ಟವಾಗಿದೆ!

LEAVE A REPLY

Please enter your comment!
Please enter your name here