ರಿಷಬ್ ರುದ್ರಪ್ರಯಾಗದಲ್ಲಿ ಶ್ರದ್ಧಾ ಶ್ರೀನಾಥ್!

[adning id="4492"]

ರಿಷಬ್ ಶೆಟ್ಟಿ ಇದೀಗ ರುದ್ರಪ್ರಯಾಗ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಜಡೀಮಳೆಯಲ್ಲಿಯೇ ಉತ್ತರಕನ್ನಡದ ಕಾಡುಗಳಲ್ಲಿ ಅಲೆದು ಲೊಕೇಶನ್ ಹುಡುಕಾಟ ನಡೆಸಿದ್ದ ರಿಷಬ್ ಇದೀಗ ತಾರಾಗಣ ಭರ್ತಿ ಮಾಡೋ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ವಾರದ ಹಿಂದಷ್ಟೇ ಅನಂತ್ ನಾಗ್ ಮುಖ್ಯಪಾತ್ರದಲ್ಲಿ ನಟಿಸುತ್ತಿರೋ ಸುದ್ದಿ ಬಂದಿತ್ತು. ಆದರೆ ರುದ್ರಪ್ರಯಾಗಕ್ಕೆ ನಾಯಕಿ ಇರಲಿದ್ದಾರಾ? ಇದ್ದರೆ ಆ ಪಾತ್ರಕ್ಕೆ ಯಾವ ನಟಿ ಆಯ್ಕೆಯಾಗಲಿದ್ದಾರೆ ಅಂತೆಲ್ಲ ಹತ್ತಾರು ಪ್ರಶ್ನೆಗಳಿದ್ದವು. ಇದೀಗ ಅದಕ್ಕೆಲ್ಲ ಉತ್ತರವೆಂಬಂತೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ರುದ್ರಪ್ರಯಾಗಕ್ಕೆ ಪ್ರವೇಶಿಸಿದ್ದಾರೆ.


ರಿಷಬ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡುತ್ತಾರೆಂಬ ಸುದ್ದಿ ಕೇಳಿ ಬಂದಾಕ್ಷಣವೇ ಅವರೇ ನಾಯಕನಾಗಿಯೂ ನಟಿಸಬಹುದೇನೋ ಅಂದುಕೊಳ್ಳಲಾಗಿತ್ತು. ಆದರೀಗ ರುದ್ರಪ್ರಯಾಗದಲ್ಲಿ ನಾಯಕ ನಾಯಕಿಯೆಂಬ ಸಿದ್ಧಸೂತ್ರಗಳೇ ಇಲ್ಲವೆಂಬ ವಿಚಾರವನ್ನು ರಿಷಬ್ ಶೆಟ್ಟರೇ ಹೇಳಿಕೊಂಡಿದ್ದಾರೆ. ಇದು ಆರು ಪಾತ್ರಗಳ ಸುತ್ತಾ ನಡೆಯೋ ಕಥೆಯ ಚಿತ್ರ. ಆ ಆರು ಪಾತ್ರಗಳು ಚಿತ್ರದುದ್ದಕ್ಕೂ ಪ್ರಧಾನವಾಗಿರುತ್ತವೆ. ಅವೆಲ್ಲವೂ ಒಂದೊಂದು ತೆರನಾದ ಚಹರೆ ಹೊಂದಿರೋ ಪಾತ್ರಗಳು. ಅದರಲ್ಲೊಂದು ಪಾತ್ರವಾಗು ಶ್ರದ್ಧಾ ನಟಿಸಲಿದ್ದಾರೆ. ರಿಷಬ್ ಶೆಟ್ಟರೇ ಹೇಳೋ ಪ್ರಕಾರ ಶ್ರದ್ಧಾ ಈ ಹಿಂದೆ ಎಂದೂ ಇಂಥಾ ಪಾತ್ರಗಳಲ್ಲಿ ನಟಿಸಿಲ್ಲವಂತೆ.


ದಾಂಡೇಲಿಯ ಕಾಡುಗಳಲ್ಲಿ ಮಳೆಯ ನಡುವೆಯೇ ಲೊಕೇಶನ್ ಹುಡುಕಾಟ ನಡೆಸಿ ವಾಪಾಸಾಗಿದ್ದ ರಿಷಬ್ ಪಟ್ಟಾಗಿ ಕೂತು ಸ್ಕ್ರಿಫ್ಟ್ ವರ್ಕ್ ಮುಗಿಸಿಕೊಂಡಿದ್ದಾರೆ.  ಇದೀಗ ತಾರಾಗಣದತ್ತ ಗಮನ ಹರಿಸಿರೋ ಅವರು ಅನಂತ್ ನಾಗ್ ಮತ್ತು ಶ್ರದ್ಧಾ ಶ್ರೀನಾಥ್‌ರನ್ನು ಬರಮಾಡಿಕೊಂಡಿದ್ದಾರೆ. ಈ ಆರು ಪಾತ್ರಗಳಲ್ಲೇ ಮತ್ತೊಂದಷ್ಟು ಪಾತ್ರಗಳೂ ರುದ್ರಪ್ರಯಾಗದಲ್ಲಿರಲಿವೆ. ಅವುಗಳಿಗೂ ಅಷ್ಟೇ ಮುತುವರ್ಜಿಯಿಂದಲೇ ರಿಷಬ್ ಕಲಾವಿದರನ್ನು ಆಯ್ಕೆ ಮಾಡುತ್ತಿದ್ದಾರೆ. ಇದೆಲ್ಲದರೊಂದಿಗೆ ರಿಷಬ್ ಈ ಸಿನಿಮಾದಲ್ಲೊಂದು ಪಾತ್ರದಲ್ಲಿ ನಟಿಸಲಿದ್ದಾರಾ ಎಂಬುದಕ್ಕೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.

[adning id="4492"]

LEAVE A REPLY

Please enter your comment!
Please enter your name here