ಜಯಂತ್ ಕಾಯ್ಕಿಣಿ ಕಥೆಗೆ ಸಿನಿಮಾ ಫ್ರೇಮು ಹಾಕ್ತಾರಂತೆ ಕಾಸರವಳ್ಳಿ!

ಪ್ಪತ್ತರ ದಶಕದಲ್ಲಿಯೇ ‘ಘಟಶ್ರಾದ್ಧ’ದಂಥ ಸಿನಿಮಾ ಮಾಡಿ ಸಿದ್ಧಸೂತ್ರಗಳನ್ನು ಮೀರಿಕೊಂಡಿದ್ದವರು ನಿರ್ದೇಶಕ ಗಿರೀಶ್ ಕಾಸರವಳ್ಳಿ. ಯಾರನ್ನೇ ಆದರೂ ಕಲಕುತ್ತಲೇ ಸಮಾಜಕ್ಕೂ ಕನ್ನಡಿಯಾಗುವಂಥಾ ಸೂಕ್ಷ್ಮ ಕಥಾಹಂದರದ ಸಿನಿಮಾಗಳ ಮೂಲಕವೇ ಹೆಸರಾಗಿದ್ದ ಕಾಸರವಳ್ಳಿ ಅಖಂಡ ಏಳು ವರ್ಷಗಳ ಕಾಲ ಯಾವೊಂದು ಸಿನಿಮಾಗಳನ್ನೂ ನಿರ್ದೇಶನ ಮಾಡಿರಲಿಲ್ಲ. ಕ್ರಿಯಾಶೀಲ ಮನಸೊಂದು ಮೌನ ತಾಳಿತೆಂದರೆ ಅದರರ್ಥ ಖಾಲಿಯಾಗಿದೆ ಎಂದಲ್ಲ. ಅದು ಯಾವುದನ್ನೋ ತುಂಬಿಕೊಳ್ಳುವ ಪರ್ವಕಾಲವಷ್ಟೇ. ಈ ಮಾತಿಗೆ ತಕ್ಕುದಾಗಿಯೇ ಕಾಸರವಳ್ಳಿಯೀಗ ಮತ್ತೊಂದು ಸೂಕ್ಷ್ಮ ಕಥಾನಕದೊಂದಿಗೆ ಮರಳಲಿದ್ದಾರೆ. ಜಯಂತ್ ಕಾಯ್ಕಿಣಿಯವರ ಹಾಲಿನ ಮೀಸೆ ಎಂಬ ಸಣ್ಣ ಕಥೆಗೆ ದೃಷ್ಯ ರೂಪ ನೀಡೋ ತಯಾರಿಯೊಂದಿಗೆ ಮತ್ತೆ ಅವರು ಪ್ರೇಕ್ಷಕರ ಮುಂದೆ ಬಂದಿದ್ದಾರೆ.


ಭಾವಕೋಶದ ಸೂಕ್ಷ್ಮ ಕದಲಿಕೆಗಳನ್ನೂ ಕೂಡಾ ಅಕ್ಷರಗಳಲ್ಲಿ ಹಿಡಿದಿಡುವಷ್ಟು ಸಂವೇದನೆಯ ಮೂಲಕವೇ ಕನ್ನಡದ ಓದುಗರನ್ನು ಹಿಡಿದಿಟ್ಟುಕೊಂಡಿರುವವರು ಜಯಂತ್ ಕಾಯ್ಕಿಣಿ. ಚೆಂದದ ಹಾಡುಗಳ ಮೂಲಕ ಎಲ್ಲರನ್ನೂ ಆವರಿಸಿಕೊಂಡಿರೋ ಕಾಯ್ಕಿಣಿ ವರ್ಷಾಂತರಗಳ ಹಿಂದೆ ಬರೆದಿದ್ದ ಸಣ್ಣಕಥೆ ‘ಹಾಲಿನ ಮೀಸೆ’. ಇದು ಮುಂಬೈನ ನೆಲೆಯಲ್ಲಿ ಘಟಿಸೋ ಮಕ್ಕಳ ಕಥೆ. ಆದರೂ ಆ ಕೌಕಟ್ಟು ಮೀರಿ ಓದುರನ್ನು ಸೆಳೆದಿದ್ದ ಈ ಕಥೆ ಆ ಕಾರಣದಿಂದಲೇ ಗಿರೀಶ್ ಕಾಸರವಳ್ಳಿಯವರನ್ನು ಸೆಳೆದಿದೆ. ಈ ಕಥೆಗೆ ಸಿನಿಮಾ ಫ್ರೇಮು ಹಾಕಲು ಬೇಕಾಗೋ ಸಕಲ ತಯಾರಿಗಳನ್ನೂ ನಡೆಸಿಕೊಂಡಿರೋವರೀಗ ಈ ಸಿನಿಮಾಗೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಶೀರ್ಷಿಕೆಯನ್ನೂ ನಿಗಧಿಗೊಳಿಸಿದ್ದಾರೆ.


೧೯೭೭ರಲ್ಲಿ ತೆರೆ ಕಂಡಿದ್ದ ಘಟಶ್ರಾದ್ಧ ಚಿತ್ರದ ಬಳಿಕ ಆಕ್ರಮಣ, ಮೂರು ದಾರಿಗಳು, ತಬರನ ಕಥೆ ಸೇರಿದಂತೆ ೨೦೧೨ರಲ್ಲಿ ತೆರೆಗೆ ಬಂದಿದ್ದ ಕೂರ್ಮಾವತಾರದ ವರೆಗೆ ಗಿರೀಶ್ ಕಾಸರವಳ್ಳಿಯವರ ಸಿನಿಮಾ ಯಾನ ಸಾಗಿ ಬಂದಿದೆ. ಕೂರ್ಮಾವತಾರ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಡೇಯ ಚಿತ್ರ. ಕನ್ನಡದ ಹೆಮ್ಮೆಯ ಕಥೆಗಾರರಾದ ಕುಂ ವೀರಭದ್ರಪ್ಪನವರ ಕಥೆಯಾಧಾರಿತ ಚಿತ್ರ. ಇದಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಇಂಥಾ ಖ್ಯಾತಿ ಗಳಿಸಿಕೊಂಡಿದ್ದರೂ ಕೂರ್ಮಾವತಾರನ ನಂತರ ಕಾಸರವಳ್ಳಿ ಮತ್ಯಾವ ಚಿತ್ರವನ್ನೂ ನಿರ್ದೇಶನ ಮಾಡಿರಲಿಲ್ಲ. ಅವರ ಚಿತ್ರಗಳನ್ನು ಮೆಚ್ಚಿಕೊಳ್ಳುವ ಪ್ರೇಕ್ಷಕರು ಕಾಸರವಳ್ಳಿಯವರ ಮುಂದಿನ ನಡೆಯ ಬಗ್ಗೆ ದೃಷ್ಟಿ ನೆಟ್ಟು ಕಾಯುತ್ತಿರುವಾಗಲೇ ಅವರು ಮತ್ತೆ ಮರಳಿದ್ದಾರೆ.


ಈ ಬಾರಿ ಜಯಂತ್ ಕಾಯ್ಕಿಣಿಯವರ ಕಥೆಯೇ ಚಿತ್ರವಾಗುತ್ತಿರೋದರಿಂದ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಗಿರೀಶ್ ಕಾಸರವಳ್ಳಿಯವರ ಹೊಸಾ ಕನಸಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ಈಗ ತಾರಾಗಣದ ಆಯ್ಕೆ ಕಾರ್ಯ ನಡೆಯುತ್ತಿದೆ. ಅದನ್ನು ಬೇಗನೆ ಮುಗಿಸಿಕೊಂಡು ಈ ತಿಂಗಳ ಕಡೇಯ ಹೊತ್ತಿಗೆಲ್ಲ ಚಿತ್ರೀಕರಣಕ್ಕೆ ತೆರಳೋ ನಿರ್ಧಾರ ಕಾಸರವಳ್ಳಿಯವರದ್ದು. ಕಮರ್ಶಿಯಲ್ ಜಾಡಿನ ಚರ್ವಿತಚರ್ವಣ ಸಿನಿಮಾಗಳ ಭರಾಟೆಯ ನಡುವೆಯೇ ಕಾಸರವಳ್ಳಿ ಥರದ ನಿರ್ದೇಶಕರ ಭಿನ್ನ ಜಾಡಿನ ಸಿನಿಮಾಗಳು ಆಗಾಗ ಬರುತ್ತಿರಲಿ ಅಂತ ಬಯಸೋ ಪ್ರೇಕ್ಷಕರ ಸಂಖ್ಯೆ ಸಾಕಷ್ಟಿದೆ. ಅದನ್ನು ತಣಿಸುವ ಕಥೆಯೊಂದಿಗೆ ಕಾಸರವಳ್ಳಿ ಮತ್ತೆ ಆಗಮಿಸಿದ್ದಾರೆ.

LEAVE A REPLY

Please enter your comment!
Please enter your name here