ಕರ್ವ ನವನೀತ್ ಚಿತ್ರಕ್ಕೆ ಗ್ರೀನ್‌ಸಿಗ್ನಲ್ ಕೊಟ್ಟರಂತೆ ಬುದ್ಧಿವಂತ!

ರ್ಷಗಳ ಹಿಂದೆ ಕರ್ವ ಎಂಬ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿದ್ದವರು ಯುವ ನಿರ್ದೇಶಕ ನವನೀತ್. ಇದೀಗ ನವನೀತ್ ನಿದೇಶನದ ಚಿತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಐ ಲವ್ ಯೂ ಚಿತ್ರದ ಗೆಲುವಿನ ನಂತರದಲ್ಲಿ ಸಾಲು ಸಾಲಾಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಸಾಗುತ್ತಿರೋ ಉಪ್ಪಿ ಇದೀಗ ಈ ಚಿತ್ರವನ್ನು ತುಂಬು ಭರವಸೆಯೊಂದಿಗೆ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಲಿದ್ದಾರೆ.


ಕರ್ವ ಮೂಲಕ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ನವನೀತ್. ಅವರು ಉಪೇಂದ್ರಗಾಗಿಯೇ ಭಿನ್ನ ಬಗೆಯ ಕಥೆಯನ್ನು ವರ್ಷಾಂತರಗಳಿಂದ ಶ್ರಮವಹಿಸಿ ಸಿದ್ಧಪಡಿಸಿದ್ದಾರಂತೆ. ಇದನ್ನು ಒಪ್ಪ ಓರಣ ಮಾಡಿಕೊಂಡು ನಿರ್ಮಾಪಕ ತರುಣ್ ಶಿವಪ್ಪ ಅವರಿಗೆ ಹೇಳಿದಾಗ ಅವರ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಯೇ ಬಂದಿತ್ತು. ಈ ಕಥೆಯ ಹೊಸತನಕ್ಕೆ ಮಾರುಹೋಗಿದ್ದ ತರುಣ್ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದರು. ಇದಾದಾಕ್ಷಣವೇ ಕಥೆ ಕೇಳಿದ ಉಪ್ಪಿ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದ್ದಾರೆ.


ಇದು ತರುಣ್ ಶಿವಪ್ಪ ನಿರ್ಮಾಣದಲ್ಲಿ ಮೂಡಿ ಬರಲಿರೋ ಐದನೇ ಚಿತ್ರ. ಇದನ್ನು ಅದ್ದೂರಿಯಾಗಿಯೇ ನಿರ್ಮಾಣ ಮಾಡಲು ಅವರು ತಯಾರಿ ನಟಡೆಸಿದ್ದಾರೆ. ಇದೀಗ ತರುಣ್ ಶಿವಪ್ಪ ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದು ಬಿಡುಗಡೆಯ ಹಂತ ತಲುಪುತ್ತಲೇ ಈ ಸಿನಿಮಾ ಟೇಕಾಫ್ ಆಗಲಿದೆ. ಇದೀಗ ಇದಕ್ಕಾಗಿ ಭರ್ಜರಿ ತಯಾರಿಗಳೂ ನಡೆಯುತ್ತಿವೆ. ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಅದೇ ದಿನ ಈ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಗೊಳಿಸಲು ತರುಣ್ ಶಿವಪ್ಪ ತೀರ್ಮಾನಿಸಿದ್ದಾರೆ.


ನಿರ್ದೇಶಕ ನವನೀತ್ ಅವರ ಪ್ರತಿಭೆ ಎಂಥಾದ್ದೆಂಬುದು ಕರ್ವ ಮೂಲಕವೇ ಸಾಬೀತಾಗಿದೆ. ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗಾಗಿಯೇ ಈ ಕಥೆಯನ್ನು ರೆಡಿ ಮಾಡಿರೋ ನವನೀತ್ ಬೇರೆಯದ್ದೇ ಜಾನರ್ ಅನ್ನು ಆರಿಸಿಕೊಂಡಿದ್ದಾರೆ. ಈ ಸಿನಿಮಾ ಪಕ್ಕಾ ಮನೋರಂಜನಾತ್ಮಕವಾಗಿರಲಿದೆ. ಇದನ್ನು ಮನಗಂಡೇ ತರುಣ್ ಶಿವಪ್ಪ ನಿರ್ಮಾಣ ಮಾಡಲು ಒಪ್ಪಿಕೊಂಡರೆ, ಉಪ್ಪಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂವರ ಕಾಂಬಿನೇಷನ್ನಿನಲ್ಲಿ ಮೂಡಿ ಬರಲಿರೋ ಈ ಚಿತ್ರ ಪ್ರಾರಂಭಿಕ ಹೆಜ್ಜೆಯಲ್ಲಿಯೇ ಕುತೂಹಲಕ್ಕೆ ಮೂಡಿಸಿದೆ.

LEAVE A REPLY

Please enter your comment!
Please enter your name here