ಸಲ್ಮಾನ್‌ಗೂ ಪೈಲ್ವಾನ್ ನೋಡೋ ಕಾತರ!

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಮೂರು ಸಾವಿರ ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತದೆಂದಿದ್ದ ಈ ಚಿತ್ರವೀಗ ಅದಕ್ಕಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಅಣಿಗೊಂಡಿದೆ. ಕನ್ನಡದಲ್ಲಿ ಈ ಹೊತ್ತಿಗೆ ಎಂಥಾ ಕ್ರೇಜ್ ಸೃಷ್ಟಿಯಾಗಿದೆಯೋ ಅಂಥಾದ್ದೇ ಕ್ರೇಜ್ ಅನ್ನು ದೇಶಾದ್ಯಂತ ಹೊಂದಿರೋ ಪೈಲ್ವಾನ್ ಬಗ್ಗೆ ಬೇರೆ ಬೇರೆ ಭಾಷೆಗಳ ಸ್ಟಾರ್‌ಗಳು ಕೂಡಾ ಕಾತರ ಹೊಂದಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡಾ ಬೇಗನೆ ಈ ಚಿತ್ರವನ್ನು ಕಣ್ಮುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.


ಸಲ್ಮಾನ್ ಖಾನ್ ಕಿಚ್ಚ ಸುದೀಪ್‌ಗೆ ಆಪ್ತ ವಲಯದಲ್ಲಿರುವವರು. ಸಲ್ಮಾನ್ ನಟನೆಯ ದಬಾಂಗ್ ೩ ಚಿತ್ರದಲ್ಲಿ ಕಿಚ್ಚ ಮುಖ್ಯ ವಿಲನ್ ಆಗಿ ನಟಿಸುತ್ತಿದ್ದಾರೆಂಬುದು ಗೊತ್ತೇ ಇದೆ. ಈ ಹಿಂದೆ ಪೈಲ್ವಾನ್ ಟ್ರೇಲರ್, ಪೋಸ್ಟರ್‌ಗಳಿಗೆಲ್ಲ ಸಲ್ನಾನ್ ಥ್ರಿಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದರು. ಒಂದರ್ಥದಲ್ಲಿ ಆರಂಭ ಕಾಲದಿಂದಲೂ ಪೈಲ್ವಾನನ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಸಲ್ಮಾನ್ ಬೇಗನೆ ಈ ಸಿನಿಮಾವನ್ನು ತನಗೆ ತೋರಿಸುವಂತೆ ಕಿಚ್ಚನಿಗೆ ಕೇಳಿಕೊಂಡಿದ್ದಾರಂತೆ. ಇದರಿಂದ ಖುಷಿಗೊಂಡಿರುವ ಚಿತ್ರತಂಡ ಈ ವಾರವೇ ಮುಂಬೈನಲ್ಲಿ ಸ್ಪೆಷಲ್ ಶೋ ಆಯೋಜಿಸಿ ಪೈಲ್ವಾನನನ್ನು ಸಲ್ಮಾನ್‌ಗೆ ತೋರಿಸಲು ನಿರ್ಧರಿಸಿದೆ.


ಇದು ಕೃಷ್ಣ ನಿರ್ದೇಶನ ಮಾಡಿರೋ ಪೈಲ್ವಾನ್ ದೇಶ ಮಟ್ಟದಲ್ಲಿ ಅದ್ಯಾವ ಪರಿ ಅಲೆಯೆಬ್ಬಿಸಿದೆ ಅನ್ನೋದಕ್ಕೆ ಸಣ್ಣ ಸ್ಯಾಂಪಲ್ ಅಷ್ಟೆ. ಸಲ್ಮಾನ್ ಖಾನ್ ಮಾತ್ರವಲ್ಲದೇ ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳ ಸ್ಟಾರ್ ನಟರೂ ಕೂಡಾ ಕಿಚ್ಚ ಪೈಲ್ವಾನನಾಗಿ ಅಬ್ಬರಿಸಿರೋ ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ನಾಳೆ ದೇಶಾದ್ಯಂತ ಪೈಲ್ವಾನನ ದರ್ಶನವಾಗಲಿದೆ. ಕನ್ನಡ ಚಿತ್ರ ಈ ಥರದಲ್ಲಿ ದೇಶವ್ಯಾಪಿ ಸಂಚಲನಕ್ಕೆ ಕಾರಣವಾಗಿರೋದು ನಿಜಕ್ಕೂ ಖುಷಿಯ ಸಂಗತಿ. ವಿಶೇಷವಾದ ಕಥೆ, ಅದ್ದೂರಿ ಮೇಕಿಂಗ್, ಅದಕ್ಕೆ ತಕ್ಕುದಾದ ತಾರಾಗಣದೊಂದಿಗೆ ಸನ್ನದ್ಧವಾಗಿರೋ ಪೈಲ್ವಾನ್ ನಾಳೆ ಹತ್ತತ್ತಿರ ನಾಲಕ್ಕು ಸಾವಿರ ಚಿತ್ರಮಂದಿರಗಳಲ್ಲಿ ತೆರೆಗಾಣಲಿದೆ.

LEAVE A REPLY

Please enter your comment!
Please enter your name here