ಐವತ್ತರಾಚೆಗೆ ಚಿಮ್ಮಿದ ಉತ್ಸಾಹದೊರತೆಯ ಒಡೆಯ ರಮೇಶ್ ಅರವಿಂದ್!

[adning id="4492"]

ಹುಟ್ಟಿದ ದಿನವನ್ನು ಹಬ್ಬವಾಗಿಸಿದ ಶಿವಾಜಿ ಸುರತ್ಕಲ್ ಟೀಸರ್!
ಮೇಶ್ ಅರವಿಂದ್ ಎಂಬ ಹೆಸರು ಕೇಳಿದರೇನೇ ತ್ಯಾಗದ ಛಾಯೆ ಹೊದ್ದ ಥರ ಥರದ ಪಾತ್ರಗಳ ಸುರುಳಿ ಕನ್ನಡಿಗರ ಕಣ್ಮುಂದೆ ಬಿಚ್ಚಿಕೊಳ್ಳಲಾರಂಭಿಸುತ್ತೆ. ತಲೆಮಾರುಗಳಾಚೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾ ನಟನಾಗಿ ಸಾರ್ಥಕತೆ ಪಡೆದುಕೊಂಡಿರೋ ರಮೇಶ್ ನಿರ್ದೇಶಕನಾಗಿಯೂ ಛಾಪು ಮೂಡಿಸಿದ್ದಾರೆ. ಎಲ್ಲರ ಪ್ರೀತಿಗೆ, ವಿರಹಕ್ಕೆ, ಹತಾಶೆಗೆ ಮತ್ತು ಅದೆಲ್ಲವನ್ನು ಮೀರಿನಿಲ್ಲುವ ಅಗಾಧ ಜೀವನಪ್ರೇಮಕ್ಕೆ ಪ್ರಾತಿನಿಧಿಕವೆಂಬಂಥಾ ಪಾತ್ರಗಳ ಮೂಲಕ ಈ ತಲೆಮಾರನ್ನೂ ಆವರಿಸಿಕೊಂಡಿರೋ ಅವರ ಪಾಲಿಗೀಗ ಐವತೈದನೇ ವಸಂತದ ಸಂಭ್ರಮ. ಆದರೆ ರಮೇಶ್ ಅರವಿಂದ್ ಅವರದ್ದು ವಯಸೆಂಬುದು ಬರೀ ಸಂಖ್ಯೆಗಳಾಗಿ ಉತ್ಸಾಹ, ಕ್ರಿಯಾಶೀಲತೆಯ ಒರತೆಯೊಂದಿಗೆ ಐವತ್ತರಾಚೆಗೆ ಚಿಮ್ಮಿದಂಥಾ ಚಿರ ಯೌವನ ಹೊದ್ದುಕೊಂಡ ವ್ಯಕ್ತಿತ್ವ.


ಪ್ರತೀ ಬಾರಿಯೂ ಹೊಸಾ ಆಲೋಚನೆ, ಹೊಸಾ ಸಿನಿಮಾ, ಪ್ರಾಜೆಕ್ಟುಗಳೊಂದಿಗೇ ಹುಟ್ಟುಹಬ್ಬದ ಸಂಭ್ರಮವನ್ನು ಎದುರುಗೊಳ್ಳೋದು ರಮೇಶ್ ಅವರ ಲಾಗಾಯ್ತಿನ ರೂಢಿ. ಬದುಕಿನ ಹೊಸಾ ಸಂವತ್ಸರ ಹೊಸ ಕನಸೇ ಕಣ್ತೆರೆದಂತೆ ಸ್ವಾಗತಿಸೋದನ್ನು ರೂಢಿಸಿಕೊಂಡಿರೋ ರಮೇಶ್‌ರ ಮುಂದೆ ಈ ಬಾರಿಯೂ ಅಂಥಾದ್ದೇ ಬೆರಗುಗಳಿವೆ. ಅದರಲ್ಲಿ ಬಿಡುಗಡೆಯ ಹಾದಿಯಲ್ಲಿರೋ ‘ಶಿವಾಜಿ ಸುರತ್ಕಲ್’ ಚಿತ್ರ ಪ್ರಧಾನವಾದದ್ದು. ಈ ಚಿತ್ರಕ್ಕೆ ದ ಕೇಸ್ ಆಫ್ ರಣಗಿರಿ ರಹಸ್ಯ ಎಂಬ ಟ್ಯಾಗ್ ಲೈನ್ ಇದೆ. ಇದರಲ್ಲಿನ ರಮೇಶ್ ಅರವಿಂದ್ ಅವರ ವಿಭಿನ್ನ ಗೆಟಪ್ಪುಗಳೇ ಪ್ರೇಕ್ಷಕ ವಲಯದಲ್ಲೊಂದು ಸಂಚಲನ ಸೃಷ್ಟಿಸಿವೆ. ರಮೇಶ್ ಅರವಿಂದ್ ಖುದ್ದಾಗಿ ಈ ಸಿನಿಮಾ ತಮ್ಮ ವೃತ್ತಿ ಬದುಕಲ್ಲಿಯೇ ಮೈಲಿಗಲ್ಲಿನಂಥಾ ದಾಖಲೆ ಬರೆಯುತ್ತದೆಂಬ ಭರವಸೆ ಹೊಂದಿದ್ದಾರೆ.


ಶಿವಾಜಿಯ ಅವತಾರಕ್ಕಾಗಿ ಅವರು ಕೇವಲ ದೈಹಿಕ ಬದಲಾವಣೆ ಮಾಡಿಕೊಂಡಿಲ್ಲ, ಎಲ್ಲ ರೀತಿಯಿಂದಲೂ ಶ್ರಮ ವಹಿಸಿ ತಯಾರಾಗಿದ್ದಾರೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾವನ್ನು ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ. ಇದುವರೆಗೆ ಹಲವಾರು ಚಿತ್ರಗಳಲ್ಲಿ, ನಾನಾ ಪಾತ್ರಗಳಿಗೆ ಜೀವ ತುಂಬಿದ್ದಾರಲ್ಲಾ ರಮೇಶ್ ಅರವಿಂದ್? ಆ ಅಷ್ಟೂ ಪಾತ್ರಗಳಲ್ಲಿ ವಿಭಿನ್ನವಾಗಿ ನಿಲ್ಲುವಂಥಾ ಪತ್ತೇದಾರಿಯ ಪಾತ್ರವನ್ನವರು ಈ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಶಿವಾಜಿ ಗೆಟಪ್ಪಿನಲ್ಲಿ ಈಗಾಗಲೇ ಹೊರಬಿದ್ದಿರೋ ಅವರ ಗೆಟಪ್ಪುಗಳೇ ಈ ಮಾತನ್ನು ಸಾಕ್ಷೀಕರಿಸುವಂತಿವೆ. ಅಂದಹಾಗೆ ಶಿವಾಜಿ ಸುರತ್ಕಲ್ ಚಿತ್ರತಂಡ ರಮೇಶ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡೋ ಮೂಲಕ ಗಿಫ್ಟು ಕೊಟ್ಟಿದೆ. ಈ ಟೀಸರ್ ನಿಜಕ್ಕೂ ರಮೇಶ್ ಪಾಲಿಗೆ ಹುಟ್ಟಿದ ದಿನವನ್ನು ಹಬ್ಬವಾಗಿಸುವಂತೆಯೇ ಮೂಡಿ ಬಂದಿದೆ.


ಹೀಗೆ ಆಯಾ ಕಾಲಕ್ಕೆ ಒಗ್ಗಿಕೊಳ್ಳುತ್ತಲೇ ಇಂದಿಗೂ ಪ್ರಸ್ತುತವಾಗುಳಿದಿರೋ ರಮೇಶ್ ನಟನಾಗಿ, ನಿರ್ದೇಶಕನಾಗಿ ಕೀರ್ತಿಯ ಉತ್ತುಂಗಕ್ಕೇರಿದ್ದಾರೆ. ಈ ಹಾದಿಯಲ್ಲಿ ಏಳು ಬೀಳುಗಳನ್ನೂ ಕಂಡಿದ್ದಾರೆ. ಎದುರಿಗೆ ಯಾರೇ ಇದ್ದರೂ ಅನುಭವ ಹೊದ್ದ ತೂಕದ ಮಾತುಗಳಿಂದಲೇ ಆವರಿಸಿಕೊಳ್ಳಬಲ್ಲ ಚಾತುರ್ಯ ಮತ್ತು ಜೀವನಾನುಭವ ಹೊಂದಿರೋ ರಮೇಶ್ ಬದುಕಿನಲ್ಲಿ ಎದುರಾದ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾ ಸಾಗಿ ಬಂದಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ರಮೇಶ್ ಪಾಲಿಗೆ ನಟನೆ ಎಂಬುದು ಬುದ್ಧಿ ಬಲಿಯುತ್ತಲೇ ಸೆಳೆದುಕೊಂಡಿದ್ದ ಮಾಯೆ. ಇಂಜಿನಿಯರಿಂಗ್ ಓದುತ್ತಿದ್ದ ಹೊತ್ತಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿದ್ದ ರಮೇಶ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವತ್ತಲೇ ಹೆಚ್ಚಿನ ಆಸಕ್ತಿ ಹೊಂದಿದ್ದವರು. ಬಹುಶಃ ಹಾಗೆ ಓದಿನ ಕಾಲದಲ್ಲಿಯೇ ನಟನೆಯ ಕನಸು ಕೈ ಹಿಡಿಯದಿದ್ದಿದ್ದರೆ ರಮೇಶ್ ಅರವಿಂದ್ ಎಂಬ ಬಹುಮುಖ ಪ್ರತಿಭೆ ಇಂಜಿನಿಯರ್ ಆಗಿಯಷ್ಟೇ ಕಳೆದು ಹೋಗುತ್ತಿತ್ತೇನೋ…


ಹಾಗೆ ಇಂಜಿನಿಯರಿಂಗ್ ಮುಗಿಸಿಕೊಂಡು ಹೊರಬಂದು ಸಿನಿಮಾ ಕನಸಿನ ತೆಕ್ಕೆಗೆ ಬಿದ್ದಿದ್ದ ಈ ಸೂಜಿಗಣ್ಣಿನ ಹುಡುಗನನ್ನು ಮೊದಲು ಗುರುತಿಸಿದ್ದು ಕೆ. ಬಾಲಚಂದರ್. ಇವರ ಎಂಟ್ರಿಗೆ ತಕ್ಕುದಾದ ಚೆಂದದ ಕಥೆಯೊಂದನ್ನು ರೆಡಿಮಾಡಿದ ಬಾಲಚಂದರ್ ‘ಸುಂದರ ಸ್ವಪ್ನಗಳು’ ಎಂಬ ಚಿತ್ರವನ್ನು ರಮೇಶ್‌ಗಾಗಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಮೂಲಕವೇ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ರಮೇಶ್ ನಾಯಕ ನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದರು. ಆಪ್ತ ಪಾತ್ರಗಳ ಮೂಲಕ ಮನೆ ಮಾತಾದರು. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ಮಿಂಚಿದರು. ಹಾಗೆ ಯಾವ ಭಾಷೆಗೆ ತೆರಳಿದರೂ ತಾಯಿಬೇರಿನಂಥಾ ಕನ್ನಡ ಚಿತ್ರರಂಗವನ್ನೇ ಅವರು ಪ್ರಧಾನವಾಗಿ ಪರಿಗಣಿಸುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ ಕನ್ನಡಿಗರೆಲ್ಲರ ಪ್ರೀತಿಯನ್ನೂ ರಮೇಶ್ ಅರವಿಂದ್ ಸಂಪಾದಿಸಿಕೊಂಡಿದ್ದಾರೆ.


ಸದಾ ಹೊಸತಿನ ಧ್ಯಾನದಲ್ಲಿರೋ ವ್ಯಕ್ತಿತ್ವದ ರಮೇಶ್‌ರ ಆಸಕ್ತಿ ಬಹು ಕಾಲದಿಂದಲೂ ನಿರ್ದೇಶನದತ್ತ ಹೊರಳಿಕೊಂಡಿತ್ತು. ಅದಕ್ಕಾಗಿ ವರ್ಷಾಂತರಗಳಿಂದ ತಯಾರಿ ನಡೆಸುತ್ತಾ ಬಂದು ಕಡೆಗೂ ರಾಮ ಶ್ಯಾಮ ಭಾಮ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಹೊರ ಹೊಮ್ಮಿದ್ದರು. ಏನನ್ನೇ ಮಾಡಿದರೂ ಫಫೆಕ್ಟ್ ಆಗಿಯೇ ಮಾಡೋ ರಮೇಶ್‌ರ ಈ ಮೊದಲ ಕನಸಿಗೆ ಅವರ ಗೆಳೆಯ, ಮೇರು ನಟ ಕಮಲ್ ಹಾಸನ್ ಕೂಡಾ ಸಾಥ್ ಕೊಟ್ಟಿದ್ದರು. ಕಮಲ್ರೊಂದಿಗೆ ತಾವೂ ಮುಖ್ಯ ಪಾತ್ರದಲ್ಲಿ ನಟಿಸಿ ಈ ಸಿನಿಮಾವನ್ನು ಸೂಪರ್ ಹಿಟ್ ಆಗುವಂತೆ ರೂಪಿಸಿದ್ದ ರಮೇಶ್ ಅರವಿಂದ್ ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿಯೂ ಗೆದ್ದಿದ್ದರು. ನಂತರ ತಮಿಳಿನಲ್ಲಿ ಕಮಲ್ ನಟನೆಯ ಉತ್ತಮ ವಿಲನ್ ಚಿತ್ರ ನಿರ್ದೇಶನ ಮಾಡೋ ಮೂಲಕ ಇಡೀ ದೇಶದ ಗಮನ ಸೆಳೆದಿದ್ದವರು ರಮೇಶ್ ಅರವಿಂದ್. ಅವರಿಗೀಗ ಐವತೈದನೇ ಹುಟ್ಟುಹಬ್ಬದ ಸಂಭ್ರಮ. ಇದೇ ಕ್ರಿಯಾಶೀಲತೆ, ಹುಮ್ಮಸ್ಸಿನೊಂದಿಗೆ ಅವರು ಮತ್ತಷ್ಟು ಬೆರಗುಗಳನ್ನು ಸೃಷ್ಟಿಸಲಿ, ಶಿವಾಜಿ ಸುರತ್ಕಲ್ ಚಿತ್ರಕ್ಕೂ ದೊಡ್ಡ ಗೆಲುವು ಸಿಗಲೆಂದು ಹಾರೈಸೋಣ…

[adning id="4492"]

LEAVE A REPLY

Please enter your comment!
Please enter your name here