ಗೀತಾ ಟ್ರೇಲರ್: ಕನ್ನಡಾಭಿಮಾನ-ನವಿರು ಪ್ರೇಮದ ಜುಗಲ್ಬಂಧಿ!

ಸಾಮಾಜಿಕ ಬದಲಾವಣೆಗಳಿಗೆ ಪ್ರೇರೇಪಣೆ ನೀಡುವ, ಹೋರಾಟಗಳ ಕಿಚ್ಚುಹಚ್ಚುವಂಥಾ ಒಂದಷ್ಟು ಸಿನಿಮಾಗಳು ಕನ್ನಡದಲ್ಲಿ ಅಪರೂಪಕ್ಕೆ ತೆರೆ ಕಂಡಿದ್ದಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ’ ಚಿತ್ರವೂ ಅಂಥಾದ್ದೊಂದು ಇತಿಹಾಸವನ್ನು ಮತ್ತೆ ಸೃಷ್ಟಿಸುವ ಎಲ್ಲ ಲಕ್ಷಣಗ ಈಗ ಬಿಡುಗಡೆಯಾಗಿರೋ ಟ್ರೇಲರ್‌ನಲ್ಲಿ ಕಾಣಿಸಿವೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕು ಬಿಡುಗಡೆಯಾಗಲಿರೋ ಗೀತಾ ಸದರಿ ಟ್ರೇಲರ್ ಮೂಲಕ ಮತ್ತಷ್ಟು ಜನರನ್ನು ಸೆಳೆದುಕೊಂಡಿದೆ.


ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಗೀತಾ ವಿಶೇಷವಾದ ಚಿತ್ರ. ಸೈಯದ್ ಸಲಾಮ್ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರೋ ಈ ಸಿನಿಮಾ ಗಣೇಶ್ ಹೋಂ ಬ್ಯಾನರಿನ ಚೊಚ್ಚಲ ಕಾಣಿಕೆ. ಇದಿಷ್ಟು ವಿಚಾರಕ್ಕೆ ಮಾತ್ರವೇ ಗೀತಾ ಸುದ್ದಿಯಾಗುತ್ತಿಲ್ಲ. ಆರಂಭದಿಂದಲೇ ಕ್ರಿಯೇಟಿವ್ ಪೋಸ್ಟರ್, ಹಾಡುಗಳ ಮೂಲಕವೇ ಸುದ್ದಿ ಕೇಂದ್ರದಲ್ಲಿರೋ ಗೀತಾ ಪ್ರೇಮ ಕಥೆಯೊಂದಿಗೆ ಕನ್ನಡಪರ ಹೋರಾಟದ ಕಥನವೂ ಬ್ಲೆಂಡ್ ಆಗಿರುವಂಥಾ ಚಿತ್ರ. ಅದರ ಸ್ಪಷ್ಟ ಚಹರೆಗಳು ಈ ಟ್ರೇಲರ್‌ನಲ್ಲಿ ಅನಾವರಣಗೊಂಡಿವೆ.


ಗಣೇಶ್ ಇಲ್ಲಿ ಪ್ರೇಮಿಯಾಗಿ, ಕನ್ನಡಪರ ಹೋರಾಟಗಾರನಾಗಿ ಆಕ್ಷನ್ ಲುಕ್ಕಿನಲ್ಲಿಯೂ ಮಿಂಚಿದ್ದಾರೆ. ಈ ಹಿಂದೆಯೇ ಗಣೇಶ್ ಈ ಸಿನಿಮಾ ತಮ್ಮ ವೃತ್ತಿ ಬದುಕಿನಲ್ಲಿ ವಿಶೇಷವಾದದ್ದೆಂದು ಹೇಳಿಕೊಂಡಟಿದ್ದರು. ಅದು ಎಷ್ಟು ಸತ್ಯವಾದ ಮಾತೆಂಬುದಕ್ಕೂ ಈ ಟ್ರೇಲರ್‌ನಲ್ಲಿ ಸಾಕ್ಷಿಗಳು ಸಿಕ್ಕಿವೆ. ಇದರಲ್ಲಿ ಕನ್ನಡಪರ ಹೋರಾಟಗಾರನಾಗಿ ಗಣೇಶ್‌ರ ಕೆಚ್ಚಿನ ಡೈಲಾಗುಗಳು ಕನ್ನಡಾಭಿಮಾನದ ಕಿಚ್ಚು ಹಚ್ಚುವಂತಿವೆ. ಭಾಷಾಭಿಮಾನವನ್ನು ಬಡಿದೆಬ್ಬಿಸುವಂತಿವೆ. ಈ ಹಿಂದೆ ಲಾಂಚ್ ಆಗಿದ್ದ ಲಿರಿಕಲ್ ವೀಡಿಯೋ ಸಾಂಗ್‌ನಲ್ಲಿ ಗೋಕಾಕ್ ಚಳವಳಿಯನ್ನು ಮರುಸೃಷ್ಟಿಸಿರೋದನ್ನು ಜಾಹೀರು ಮಾಡಿತ್ತು. ಈ ಟ್ರೇಲರ್ ಅದರ ಒಟ್ಟಂದ ಏನೆಂಬುದರ ಸುಳಿವು ನೀಡಿದೆ.


ಕೇವಲ ಕನ್ನಡಪರ ಹೋರಾಟ ಮಾತ್ರವಲ್ಲದೇ ವಿಭಿನ್ನವಾದ ಪ್ರೇಮ ಕಥೆಯನ್ನೂ ಕೂಡಾ ಗೀತಾ ಚಿತ್ರ ಒಳಗೊಂಡಿದೆ. ಅಷ್ಟಕ್ಕೂ ಗಣೇಶ್ ಚಿತ್ರಗಳಲ್ಲಿ ಪ್ರೇಮಕಥನಗಳೇ ಪ್ರಧಾನವಾಗಿರುತ್ತವೆ. ಆದರೆ ಗೀತಾದಲ್ಲಿ ಈವರೆಗಿನದ್ದಕ್ಕಿಂತಲೂ ವಿಶೇಷವಾದ ಪ್ರೇಮ ಕಥೆಯಿದೆ. ಇಲ್ಲಿ ಗಣೇಶ್ ಜೊತೆಗೆ ಮೂವರು ನಾಯಕಿಯರು ನಟಿಸಿದ್ದಾರೆ. ಅದುವೇ ಭಿನ್ನ ಪ್ರೇಮ ಕಥನದ ಸೂಚನೆಯಂತಿದೆ. ಇದೆಲ್ಲದರ ಅಸಲೀ ಸ್ವರೂಪ ಈ ತಿಂಗಳ ೨೭ರಂದು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

LEAVE A REPLY

Please enter your comment!
Please enter your name here