ರಿಷಬ್ ರುದ್ರಪ್ರಯಾಗದಲ್ಲೂ ಅನಂತ್ ನಾಗ್ ಪಾತ್ರ ಭದ್ರ!

[adning id="4492"]

ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್ ನಾಗ್ ನಿರ್ವಹಿಸಿದ್ದ ಅನಂತಪದ್ಮನಾಭ ಪಿ ಎಂಬ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸೂಪರ್ ಹಿಟ್ ಆಗಿದ್ದ ಈ ಚಿತ್ರದ ನಂತರದಲ್ಲಿ ರಿಷಬ್ ಮತ್ಯಾವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆಂಬ ಬಗ್ಗೆ ಪ್ರೇಕ್ಷಕರು ಕಾಯುತ್ತಿರುವಾಗಲೇ ಅವರು ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಚಿತ್ರ ತೆರೆ ಕಂಡು ವರ್ಷದ ಸೂಪರ್ ಹಿಟ್ ಆಗಿ ದಾಖಲಾಗುತ್ತಲೇ ರಿಷಬ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಆ ಚಿತ್ರಕ್ಕೆ ರುದ್ರಪ್ರಯಾಗವೆಂಬ ನಾಮಕರಣವೂ ಆಗಿದೆ. ಹೋಸಾ ವಿಚಾರವೆಂದರೆ ಈ ಚಿತ್ರದಲ್ಲಿಯೂ ಅನಂತ್ ನಾಗ್ ಮತ್ತು ರಿಷಬ್‌ರ ಯಶಸ್ವೀ ಕಾಂಬಿನೇಷನ್ ಮುಂದುವರೆಯಲಿದೆ.


‘ಈ ಮಹಾನಟನ ಬಗ್ಗೆ ಹೆಚ್ಚು ಹೇಳುವುದು ಬೇಕಿಲ್ಲ. ಇವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ನನಗೆ ಸ.ಹಿ.ಪ್ರಾ.ಶಾಲೆ ಕಾಸರಗೋಡಿನಲ್ಲಿ ಇವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅನಂತಪದ್ಮನಾಭ ಪಿ ಪಾತ್ರಕ್ಕೆ ಜೀವತುಂಬಿ ಮಕ್ಕಳೊಡನೆ ಮಕ್ಕಳಾಗಿ ಆ ಚಿತ್ರದ ನೆನಪುಗಳಿನ್ನು ಹಸಿರಾಗಿರುವಾಗಲೇ ನನ್ನ ಮುಂದಿನ ಸಿನಿಮಾ ‘ರುದ್ರಪ್ರಯಾಗ’ದಲ್ಲೂ ಅನಂತ್ ಸರ್‌ಗೆ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದೇನೆ’ ಅಂತ ರಿಷಬ್ ಶೆಟ್ಟಿಯವರೆ ಫೇಸ್‌ಬುಕ್ ಮೂಲಕ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ರುದ್ರಪ್ರಯಾಗದಲ್ಲಿಯೂ ಅನಂತ್ ನಾಗ್ ಮತ್ತೊಂದು ತೆರನಾದ ಪಾತ್ರದೊಂದಿಗೆ ಪ್ರೇಕ್ಷಕರೆದುರು ಬರಲಿರೋದು ಪಕ್ಕಾ ಆದಂತಾಗಿದೆ.


ರುದ್ರಪ್ರಯಾಗ ಚಿತ್ರದ ಫಸ್ಟ್ ಲುಕ್ ಈ ಹಿಂದೆಯೇ ಬಿಡುಗಡೆಯಾಗಿದೆ. ಇದರಿಂದಾಗಿಯೇ ರಿಷಬ್ ಮತ್ತೆ ನಿರ್ದೇಶಕನಾಗಿ ಸೆನ್ಸೇಷನ್ ಕ್ರಿಯೇಟ್ ಮಾಡೋದು ಗ್ಯಾರೆಂಟಿ ಎಂಬ ನಂಬಿಕೆಯೂ ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ. ಈ ಸಿನಿಮಾದ ತಾರಾಗಣದ ಬಗ್ಗೆ ಇದುವರೆಗೂ ರಿಷಬ್ ನಿಖರವಾದ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಅನಂತ್ ನಾಗ್ ಪ್ರಮುಖ ಪಾತ್ರ ಮಾಡಲಿರೋದರ ಬಗ್ಗೆ ಅವರ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅನಂತ್ ನಾಗ್ ನಿರ್ವಹಿಸಿದ್ದ ಅನಂತಪದ್ಮನಾಭ ಪಿ ಎಂಬ ಪಾತ್ರ ಮೆಚ್ಚುಗೆ ಗಳಿಸಿಕೊಂಡಿತ್ತು. ರುದ್ರಪ್ರಯಾಗದಲ್ಲಿಯೂ ರಿಷಬ್ ಅನಂತ್ ನಾಗ್‌ರಿಗಾಗಿ ಅದಕ್ಕಿಂತಲೂ ವಿಶೇಷ ಪಾತ್ರವನ್ನೇ ಸೃಷ್ಟಿಸಿದ್ದಾರಂತೆ.

[adning id="4492"]

LEAVE A REPLY

Please enter your comment!
Please enter your name here