ಡಿಕೆಶಿ ಪುತ್ರಿ ಐಶ್ವರ್ಯಾಗೂ ತಟ್ಟಿದ ವಿಚಾರಣೆಯ ಬಿಸಿ!

ಡಿ.ಕೆ ಶಿವಕುಮಾರ್‌ರನ್ನು ಇಡಿ ಅಧಿಕಾರಿಗಳು ಒಂದೇ ಸಮನೆ ವಿಚಾರಣೆಗೊಳಪಡಿಸುತ್ತಿದ್ದಾರೆ. ಆರಂಭದಲ್ಲಿ ಇಡಿ ಸಮನ್ಸ್ ಬಂದಿದ್ದಾಗ ಎಲ್ಲ ಕಂಟಕಗಳಿಂದಲೂ ಸಲೀಸಾಗಿ ಪಾರಾಗಿ ಬಿಡುವ ಆತ್ಮವಿಶ್ವಾಸದಿಂದಿದ್ದ ಡಿಕೆಶಿ ಪಾಲಿಗೀಗ ಇಡಿ ಕಡೆಯಿಂದ ಸರಣಿ ಶಾಕ್ ಹೊಡೆಯಲಾರಂಭಿಸಿದೆ. ಇಡಿ ವಿಚಾರಣೆಯ ವ್ಯೂಹದಿಂದ ಹೊರಬರಲು ಯಾವ ದಾರಿಯೂ ಕಾಣದೆ ಅತ್ತ ಡಿಕೆಶಿ ಒದ್ದಾಡುತ್ತಿರುವಾಗಲೇ ಇತ್ತ ಅವರ ಪುತ್ರಿ ಐಶ್ವರ್ಯಾಗೂ ಇಡಿ ಕಡೆಯಿಂದ ಸಮನ್ಸ್ ಜಾರಿಯಾಗಿದೆ. ಈ ಮೂಲಕ ಖಡ್ಡಾಯವಾಗಿ ವಿಚಾರಣೆಗೆ ಹಾಜರಾಗಲೇ ಬೇಕೆಂದು ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.


ಈಗಾಗಲೇ ಡಿಕೆಶಿ ಆಪ್ತರಿಗೂ ಸಮನ್ಸ್ ಜಾರಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದ ಎಲ್ಲರಿಗೂ ಈಗ ಒಂದು ಕಡೆಯಿಂದ ನಡುಕ ಶುರುವಾಗಿದೆ. ಹೀಗಿರುವಾಗಲೇ ಮಗಳು ಐಶ್ವರ್ಯಾಗೆ ಸಮನ್ಸ್ ಜಾರಿ ಮಾಡೋ ಮೂಲಕ ಇಡಿ ಅಧಿಕಾರಿಗಳು ಡಿಕೆಶಿಗೆ ಆಘಾತ ನೀಡಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಶಿವಕುಮಾರ್ ಮನೆಗೇ ತೆರಳಿ ಇಡಿ ಅಧಿಕಾರಿಗಳು ಈ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.


ಡಿಕೆಶಿ ಮಗಳ ಹೆಸರಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆಂಬ ಆರೋಪಗಳು ಆರಂಭದಿಂದಲೂ ಕೇಳಿ ಬರುತ್ತಿದ್ದವು. ಇದೀಗ ಇಡಿ ತನಿಖೆಗೆ ಅದುವೇ ಮಹಾ ಅಸ್ತ್ರವಾಗಿ ಬಿಟ್ಟಿದೆ. ಮಗಳ ಹೆಸರಲ್ಲಿ ಡಿಕೆಶಿ ಹೂಡಿಕೆ ಮಾಡಿರೋ ಕೋಟಿ ಕೋಟಿ ಹಣದ ಮೂಲ ಯಾವುದೆಂಬುದರಿಂದ ಹಿಡಿದೂ ಪ್ರತಿಯೊಂದು ವಿಚಾರವನ್ನೂ ಕೂಡಾ ಇಡಿ ಅಧಿಕಾರಿಗಳು ಎಳೆ ಎಳೆಯಾಗಿ ತನಿಖೆ ನಡೆಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಕೂಡಾ ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯಲ್ಲಿಯೇ ವಿಚಾರಣೆ ಎದುರಿಸಿದ್ದರು. ಈಗ ಪುತ್ರಿ ಐಶ್ವರ್ಯಾ ಸರದಿ ಬಂದಿದೆ.

LEAVE A REPLY

Please enter your comment!
Please enter your name here