ಕರುನಾಡ ಗಯ್ಯಾಳಿ ತೆಲುಗಿನಲ್ಲಿ ಸೀತೆಯಾದ ಸುದ್ದಿ!

ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಕಾದಂಬರಿ ಕಿರಗೂರಿನ ಗಯ್ಯಾಳಿಗಳು ಅದೇ ಹೆಸರಿನಲ್ಲಿ ಸಿನಿಮಾವಾಗಿ ವರ್ಷಗಳ ಹಿಂದೆ ತೆರೆ ಕಂಡಿತ್ತಲ್ಲಾ? ಅದರಲ್ಲಿ ಗಯ್ಯಾಳಿಗಳಲ್ಲೊಬ್ಬಳಾಗಿ ಕನ್ನಡಿಗರ ಮನ ಗೆದ್ದಿದ್ದ ಹುಡುಗಿ ಸುಕೃತಾ ವಾಗ್ಳೆ. ಹಳ್ಳಿಗಾಡಿನ ಹೆಂಗಸಾಗಿ ನಟಿಸಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದ ಸುಕೃತಾ ಆ ನಂತರ ಮತ್ಯಾವ ಸಿನಿಮಾಗಳಲ್ಲಿಯೂ ಸದ್ದು ಮಾಡಿರಲಿಲ್ಲ. ಆ ಬಳಿಕ ಸುದೀರ್ಘಾವಧಿಯ ಕಾಲ ಕನ್ನಡದಿಂದ ಕಣ್ಮರೆಯಾದಂತಿದ್ದ ಆಕೆಯೂಗ ನೆರೆಯ ತೆಲುಗು ಭಾಷೆಯಲ್ಲಿ ಸೀತೆಯ ಅವತಾರದಲ್ಲಿ ಪತ್ತೆಯಾಗಿದ್ದಾರೆ!


ಸುಕೃತಾ ವಾಗ್ಳೆ ಎಲ್ಲಿ ಹೋದರು ಅಂತ ಒಂದಷ್ಟು ಮಂದಿಯಾದರೂ ಆಗಾಗ ತಲಾಶು ನಡೆಸಿರಬಹುದು. ಹೀಗೆ ಕನ್ನಡದ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿರುವಾಗಲೇ ಇತ್ತೀಚೆಗೆ ಬಿಡುಗಡೆಯಾಗಿರೋ ತೆಲುಗು ಚಿತ್ರದ ಟ್ರೇಲರ್ ಒಂದರ ಮೂಲಕ ಸುಕೃತಾ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ರಾಮ ಚೆಕ್ಕನಿ ಸೀತಾ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರೋ ವಿಚಾರ ಜಾಹೀರಾಗಿದೆ. ಈ ಸಿನಿಮಾದ ಟ್ರೇಲರ್ ಈಗ ಒಂದಷ್ಟು ಜನಪ್ರಿಯತೆ ಗಳಸಿಕೊಂಡಿದೆ. ಇದರಲ್ಲಿ ನಾಯಕಿಯಾಗಿ ರೊಮ್ಯಾಂಟಿಕ್ ಪಾತ್ರದಲ್ಲಿ ಸುಕೃತಾ ನಟಿಸಿದ್ದಾರಂತೆ.


ಶ್ರೀ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಸುಕೃತಾ ಇಂದ್ರಗೆ ಜೋಡಿಯಾಗಿ ನಟಿಸಿದ್ದಾರೆ. ರೊಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರೋ ರಾಮ ಚೆಕ್ಕನಿ ಸೀತಾ ಸದ್ಯ ತೆಲುಗು ಭಾಷೆಯಲ್ಲಿ ಒಂದಷ್ಟು ಸುದ್ದಿಯಲ್ಲಿದೆ. ಇದೆಣಾದರೂ ಗೆದ್ದರೆ ಸುಕೃತಾ ಇನ್ನು ಮುಂದೆ ತೆಲುಗಿನಲ್ಲಿಯೇ ಬ್ಯುಸಿಯಾಗಬಹುದು. ಈಕೆ ಬಿ ಎಂ ಗಿರಿರಾಜ್ ನಿರ್ದೇಶನದ ಜಟ್ಟ ಎಂಬ ಚಿತ್ರದ ಮೂಲಕವೇ ಬೆಳಕು ಕಂಡಿದ್ದ ನಟಿ. ಸುಮನ್ ಕಿತ್ತೂರು ನಿರ್ದೇಶನದ ಕಿರಗೂರಿನ ಗಯ್ಯಾಳಿಗಳು ಚಿತ್ರದ ಮೂಲಕ ಹೆಸರು ಮಾಡಿದ್ದ ಸುಕೃತಾ ಕನ್ನಡಕ್ಕೆ ಮತ್ತೆ ಮರಳೋ ಲಕ್ಷಣಗಳು ಸದ್ಯಕ್ಕಂತೂ ಕಾಣಿಸುತ್ತಿಲ್ಲ.

LEAVE A REPLY

Please enter your comment!
Please enter your name here