ಪೈಲ್ವಾನ್‌ಗೆ ಸಾಥ್ ನೀಡಲಿರೋ ತೆಲುಗು ನಟ ಯಾರು?

ಕಿಚ್ಚ ಸುದೀಪ್ ದೇಹ ಹುರಿಗೊಳಿಸಿಕೊಂಡು ಕುಸ್ತಿ ಅಖಾಡಕ್ಕಿಳಿದು ಅಬ್ಬರಿಸಿರೋ ಚಿತ್ರ ಪೈಲ್ವಾನ್. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಪೈಲ್ವಾನ್ ಬಿಡುಗಡೆಗೀಗ ಕ್ಷಣಗಣನೆ ಆರಂಭವಾಗಿದೆ. ಕನ್ನಡದಲ್ಲಿಯಂತೂ ಈ ಸಿನಿಮಾ ಬಗ್ಗೆ ಮೂಡಿಕೊಂಡಿರೋ ಕ್ರೇಜ್ ರೋಮಾಂಚಕವಾಗಿದೆ. ದೇಶಾದ್ಯಂತ ಇಂಥಾದ್ದೇ ಕ್ರೇಜ್ ಪೈಲ್ವಾನ್ ಬಗ್ಗೆ ಹರಡಿಕೊಂಡಿದೆ. ಇನ್ನೇನು ಬಿಡುಗಡೆಗೆ ಒಂದು ವಾರವಷ್ಟೇ ಬಾಕಿ ಉಳಿದಿರೋ ಈ ಹೊತ್ತಿನಲ್ಲಿ ಬೇರೆ ಭಾಷೆಗಳ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಇಂದು ಸಂಜೆ ಹೈದ್ರಾಬಾದಿನಲ್ಲಿ ಪ್ರಿ-ರಿಲೀಸ್‌ಗೆ ವೇದಿಕೆ ರೆಡಿಯಾಗಿದೆ.


ತೆಲುಗು ಭಾಷೆಯ ಈ ಪ್ರಚಾರ ಕಾರ್ಯಕ್ಕಾಗಿ ಇಡೀ ಚಿತ್ರತಂಡವೇ ಹೈದ್ರಾಬಾದಿನಲ್ಲಿ ಬೀಡು ಬಿಟ್ಟಿದೆ. ಇಂದು ಸಂಜೆ ನಡೆಯಲಿರೋ ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಕೃಷ್ಣ, ಸುದೀಪ್, ಸುನೀಲ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡವೇ ಪಾಲ್ಗೊಳ್ಳುತ್ತಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರೋ ತೆಲುಗು ಸ್ಟಾರ್ ನಟ ಯಾರೆಂಬುದನ್ನು ಮಾತ್ರ ಚಿತ್ರ ತಂಡ ಗೌಪ್ಯವಾಗಿಟ್ಟಿತ್ತು. ಇದೀಗ ಆ ನಟ ಯಾರೆಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಸಂಗತಿಗಳು ಹರಿದಾಡುತ್ತಿವೆ. ನಾನಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.


ಅಷ್ಟಕ್ಕೂ ನಾನಿ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಸೂಪರ್ ಹಿಟ್ ಚಿತ್ರ ಈಗದಲ್ಲಿ ನಾನಿ ಮತ್ತು ಸುದೀಪ್ ಜೊತೆಯಾಗಿ ನಟಿಸಿದ್ದರು. ಇವರಿಬ್ಬರ ನಡುವೆ ಆ ಕಾಲದಿಂದಲೂ ಸ್ನೇಹ ಇರೋದರಿಂದ ನಾನಿಯೇ ಅತಿಥಿಯಾಗಿ ಆಗಮಿಸಲಿದ್ದಾರೆಂದು ಹೇಳಲಾಗುತ್ತಿದೆ. ಅಂತೂ ಇಂದು ನಡೆಯಲಿರೋ ಪೈಲ್ವಾನ್ ಪ್ರಿ-ರಿಲೀಸ್ ಕಾರ್ಯಕ್ರಮಕ್ಕಾಗಿ ತೆಲುಗು ನಾಡಿನಲ್ಲಿರುವ ಸಮಸ್ತ ಸುದೀಪ್ ಅಭಿಮಾನಿಗಳೂ ಕಾತರದಿಂದ ಕಾಯುತ್ತಿದ್ದಾರೆ. ಈ ಮೂಲಕವೇ ಪೈಲ್ವಾನ್ ಕಡೇ ಘಳಿಗೆಯಲ್ಲಿ  ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸೋ ನಿರೀಕ್ಷೆಗಳಿವೆ.

LEAVE A REPLY

Please enter your comment!
Please enter your name here