ನಾನು ನಿನ್ನ ನೆನಪಿನ ಮಡುವಲ್ಲಿಯೇ ಪತರುಗುಟ್ಟುವ ನಿರಂತರ ದೈನ್ಯ!

ಭಾರೀ ಗಟ್ಟಿ ಆಸಾಮಿಗಳಿಗೆ ಈ ದೈನ್ಯವೆಂಬೋ ಪದ ಅಲರ್ಜಿ. ಜೀವದ್ರವ್ಯವನ್ನೆಲ್ಲ ಒಂದು ವ್ಯಕ್ತಿತ್ವದ ಮುಂದೆ ಬಸಿದು ಕುಸಿದಂಥಾ ಸ್ಥಿತಿಯದು. ಬಹುಶಃ ಈ ಬದುಕಿನ ಪ್ರತೀ ಹಂತದಲ್ಲಿಯೂ, ಹೀನಾಯ ಸೋಲು ಆವರಿಸಿ ಬೋರಲು ಬಿದ್ದು ಅವಮಾನದ ಮುಳ್ಳು ಗೀರಿ ರಕ್ತ ಒಸರಿದಾಗಲೂ ನಾ ದೈನ್ಯನಾಗಲಿಲ್ಲ. ದಿನದ ಮೂರೂ ಹೊತ್ತು ತುತ್ತು ಅನ್ನಕ್ಕೆ ದಿಕ್ಕಿಲ್ಲದ ಅದೆಷ್ಟು ದಿವಸಗಳು ಸರಿದು ಹೋಗಿದ್ದಾವೋ… ಆ ಹೊತ್ತಲ್ಲಿಯೂ ಎದೆ ನಿಗುರಿಸಿಕೊಂಡೇ ಓಡಾಡಿ ಅಭ್ಯಾಸ ನಂಗೆ. ಕ್ಷಣ ಕ್ಷಣವೂ ಕಾಡಿಸಿ ಪೀಡಿಸೋ ಬದುಕಿನ ಮುಂದೆಯೂ ನಾ ಮಂಡಿಯೂರಲಿಲ್ಲ. ಆದರೆ ಜೀವದೊಳಗೆ ಯಾವ ಚೈತನ್ಯವೂ ಇಲ್ಲದಂತೆ, ದೈನ್ಯವೇ ನಾನೆಂಬಂತೆ ಶರಣಾದದ್ದು ಕೇವಲ ನಿನ್ನ ಮುಂದೆ, ನಿನ್ನ ನೆನಪುಗಳ ಮುಂದೆ ಮಾತ್ರ…


ನನ್ನ ಇಂಥಾ ಅವಸ್ಥೆಗಳನ್ನು ತೀರಾ ಹತ್ತಿರದ ಗೆಳೆಯರ ಮುಂದೆ ಹೇಳಿಕೊಂಡರೂ ಇದರಿಂದ ಪಾರಾಗುವ ಸುಲಭೋಪಾಯ ಹೇಳಿಯಾರೇನೋ. ಒಬ್ಬಳು ಹುಡುಗಿಗೋಸ್ಕ ಯಾಕಿಂಗೆ ಗೋಳಾಡ್ತಿ. ಹುಡುಗೀರಿಗೇನು ಬರವಾ ಅಂತ ಉಡಾಫೆಯ ಮಾತುಗಳನ್ನೂ ಆಡಬಹುದು. ಆದುದರಿಂದಲೇ ನನ್ನೊಳಗೆ ಇಂಥಾದ್ದೊಂದು ಬೆಂಕಿ ಸದಾ ನಿಗಿ ನಿಗಿಸುತ್ತಿದೆಯೆಂಬೋ ಸಣ್ಣ ಸುಳಿವೂ ಬಿಟ್ಟುಕೊಡದಂತೆ ಬದುಕುತ್ತೇನೆ. ಒಳಗೊಳಗೇ ಪ್ರತೀ ಕ್ಷಣವೂ ಸತ್ತುಹೋಗುತ್ತೇನೆ. ನಿನ್ನ ನೆನಪಿನ ಬಲದಿಂದಲೇ ಮತ್ತೆ ಹುಟ್ಟುತ್ತೇನೆ.


ಯಾಕೆಂದರೆ, ಯಾವತ್ತೂ ಕಾಣಿಸದ ದೇವರೆಡೆಗೂ ತೀರಾ ಆಳದ ಭಕ್ತಿಯಿಂದ ನಡೆದುಕೊಳ್ತಾರಲ್ಲಾ ಜನ? ಅದಕ್ಕಿಂತಲೂ ಆಪ್ತವಾದ, ಗಾಢವಾದ ಪ್ರೀತಿ ನನ್ನದು. ಭಕ್ತಿ ಅಂದರೇನೇ ಸಮರ್ಪಣೆ. ಎಲ್ಲವೂ ನಿನ್ನದೇ ಎಂಬಂತೆ ಯಾವುದೋ ಶಕ್ತಿಯೆದಿರು ಬಸಿದು ನಿಂತಂಥಾ ಸ್ಥಿತಿ. ನಿನ್ನೆಡೆಗೆ ನನ್ನದೂ ಅಂಥಾದ್ದೇ ಪ್ರೀತಿ. ಅಷ್ಟಕ್ಕೂ ಈ ಭಕ್ತಿಯ ಭಾವಗಳೂ ದೈನ್ಯವೇ ತಾನೇ? ಹಾಗೆಂದಮೇಲೆ ನನ್ನ ಪ್ರೀತಿಯೂ ದೈನ್ಯವಾದರೆ ತಪ್ಪೇನು? ದೇವರೆದಿರು ನಿತ್ಯ ಪೂಜೆ ಮಾಡುವ, ಅದೇನೋ ಬೇಡಿಕೊಳ್ಳುವ ಸಹಸ್ರಾರು ಜೀವಗಳಿಗೂ ದೇವರೆಂಬಾತ ಈವತ್ತು ಈ ಕ್ಷಣವೇ ಒಲಿಯುತ್ತಾನೆಂಬ ಭ್ರಮೆಯಿರೋದಿಲ್ಲ. ಆದರೆ ಒಲಿದಾನೆಂಬ ನಿರೀಕ್ಷೆ, ಒಲಿಯಲಿ ಎಂಬ ಹಂಬಲವಿರುತ್ತೆ. ಈ ಪ್ರೀತಿಯದ್ದೂ ಅದೇ ಭಾವ.


ವಿನಾಕಾರಣ ಬಂದು ಮುತ್ತಿಕೊಳ್ಳುವ ಖುಷಿಯಂಥವಳೇ… ನನ್ನ ದುಖಃದ ದಿನಗಳಲ್ಲಿ, ಸಂಕಟದ ಕ್ಷಣಗಳಲ್ಲಿ ನಿನ್ನ ಪಾಲಿಲ್ಲ. ಅದಕ್ಕೆಲ್ಲ ನಿನ್ನನ್ನು ಹೊಣೆ ಮಾಡುವುದೂ ಇಲ್ಲ. ಅಂಥಾ ಸಂಕಟದ ಪಾತಾಳಕ್ಕೆ ಬಿದ್ದಾಗೆಲ್ಲ ಅದ್ಯಾವುದೋ ಮಾತಕದಲ್ಲ ಮೇಲಕ್ಕೆತ್ತುವ ಅಗೋಚರ ಶಕ್ತಿ ನೀನು. ನಿಂಗೊತ್ತಾ, ಇನ್ನೇನು ಭೋರಿಟ್ಟು ಅತ್ತೇ ಬಿಡಬೇಕೆಂಬಂಥ ಸಂಕಟ ಆವರಿಸಿದಾಗಲೂ ಮೊದಲು ನೆನಪಾಗುವವಳು ನೀನು. ಅಪರೂಪಕ್ಕೊಮ್ಮೆ ಖುಷಿಯಾದಾಗ ಅಂದೆನಲ್ಲಾ? ನನ್ನ ಯಾವ ಖುಷಿಗಳೂ ನಿನ್ನ ಹೊರತಾಗಿ ಹೊಟ್ಟೋದಿಲ್ಲ. ನಿನ್ನನ್ನ ನನ್ನಿಂದ ಅರೆಕ್ಷಣ ಹೊರತಾಗಿಸಿ ನೋಡಿದರೂ ಈ ರಾಕ್ಷಸ ಬದುಕು ನನ್ನ ನಿಲುಕಿಗೆ ಗಿಟ್ಟುವುದೂ ಇಲ್ಲ!


ಈ ರಾಕ್ಷಸ ನಗರಿಯ ಇಕ್ಕೆಲಗಳಲ್ಲಿ ಅನಾಡಿಯಂತೆ ನಿಂತು ತಬ್ಬಲಿತನ ಆವರಿಸಿದಾಗೆಲ್ಲ ಆ ಮಡುವಿನಿಂದ ಹೊರತರುವವಳು ನೀನೇ. ಮತ್ತೆ ಅನಿಶ್ಚಿತತೆಯ ಕಮರಿಗೆ ನೂಕಿ ಹೊರಡುವಾಕೆಯೂ ನೀನೇ. ಆದುದರಿಂದಲೇ ನೀನೆಂದರೆ ನನ್ನ ಬದುಕಿನ ಶಾಶ್ವತ ಇಷಾರೆ. ಅದರ ಲಯದಂತೆಯೇ ಈ ನಿತ್ರಾಣ ಹೆಜ್ಜೆಗಳು ಕದಲುತ್ತವೆ.


ಜೀವಾ… ಹೌದು ನಾನು ಈ ಜೀವಿತದ ಪ್ರತೀ ತಿರುವಿನಲ್ಲಿಯೂ ತಬ್ಬಿಬ್ಬುಗೊಳ್ಳುತ್ತೇನೆ. ಯಾವ ದಿಕ್ಕೆಂಬ ಗೊಂದಲಕ್ಕೆ ಬಿದ್ದು ಕಂಗಾಲಾಗುತ್ತೇನೆ. ನೀನೊಬ್ಬಳು ಜೊತೆಗಿದ್ದರೆ ಇಂಥಾ ಯಾವ ಯಾತನೆಯೂ ಇರುತ್ತಿರಲಿಲ್ಲ ಅಂತ ನಂಗೆ ನಾನೇ ಹಲುಬಾಡುತ್ತೇನೆ. ನಿನ್ನ ನೆರಳು ಸೋಕದ ಊರಲ್ಲಿಯೂ ನಿನಗಾಗಿಯೇ ಹುಡುಕಾಡುತ್ತೇನೆ. ಇದು ಎಷ್ಟು ದಿನದ ಪಡಿಪಾಟಲು ಅಂತ ಲೆಕ್ಕವಿಟ್ಟಿಲ್ಲ. ಮುಂದೇನು ಅಂತ ಲೆಕ್ಕ ಹಾಕಿಲ್ಲ. ಯಾಕೆಂದರೆ ಹೀಗೆ ಈ ಭ್ರಮೆ, ನಂಬಿಕೆ ಮತ್ತು ಮುದ್ದಾದ ಮುಠ್ಠಾಳತನದಲ್ಲಿಯೇ ಅನೂಹ್ಯ ಖುಷಿಯೊಂದನ್ನು ಕಂಡುಕೊಂಡಿದ್ದೇನೆ.


ಜೀವದೊಳಗೆ ಚೈತನ್ಯದ ಕುರುಹೇ ನಾಶವಾದಂತಾಗಿ ಅದ್ಯಾವುದೋ ಆಸ್ಪತ್ರೆಯ ಬೆಡ್ಡಿನ ಮೇಲೆ ಡ್ರಿಪ್ಪು ಹೆಟ್ಟಿಸಿಕೊಂಡು ಮಲಗಿದ್ದಾಗ, ಈ ಬದುಕು ಸುಳ್ಳು ಅಪವಾದಗಳ ಇನಾಮು ಕೊಟ್ಟಾಗ, ಅವಮಾನದ ಮುಳ್ಳು ನಡು ನೆತ್ತಿಗೆ ಗೀರಿ ನೆತ್ತರು ಒಸರಿದಂತಾದಾಗ ಮತ್ತು ನನ್ನ ಮೇಲೆ ನನಗೇ ಹೇವರಿಕೆ ಉಂಟಾದಾಗಲೆಲ್ಲ ನಿನ್ನ ಮುಂದೆ ಮಂಡಿಯೂರಿದ್ದೇನೆ. ಮತ್ತೆ ಎದ್ದು ನಡೆದಿದ್ದೇನೆ.
ಒಟ್ರಾಶಿ ಹೇಳೋದಾದರೆ ನಾನು ನಿಜವಾಗಿಯೂ ನಿನ್ನ ನೆನಪಿನ ಮಡುವಲ್ಲಿಯೇ ಪತರುಗುಟ್ಟುವ ನಿರಂತರ ದೈನ್ಯ; ನೀ ನನ್ನ ಈ ಮಡುವಿಂದ ಮಡಿಲಿಗೆಳೆದುಕೊಂಡು ಮುದ್ದು ಮಾಡುವವರೆಗೂ…
-ಪರ್ಮನೆಂಟ್ಲೀ ನಿನ್ನವನೇ…

LEAVE A REPLY

Please enter your comment!
Please enter your name here