ಕಡೆಗೂ ರಾಬರ್ಟ್ ಜೋಡಿಯಾಗಿದ್ದು ಶಿವಮೊಗ್ಗೆಯ ಚೆಲುವೆ!

ಅಂತೂ ಇಂತು ಕಡೆಗೂ ರಾಬರ್ಟ್‌ಗೊಬ್ಬಳು ಹುಡುಗಿ ಸಿಕ್ಕಿದ್ದಾಳೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನೆಲ್ಲ ಗೌಪ್ಯವಾಗಿಡಲಾಗಿದೆ. ಈ ಸಿನಿಮಾ ಬಗ್ಗೆ ಯಾವ ಅಪ್‌ಡೇಟ್ಸ್‌ಗಳೂ ಸಿಗುತ್ತಿಲ್ಲವೆಂಬ ಕೊರಗು ದರ್ಶನ್ ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ ಅದೆಲ್ಲದರಾಚೆಗೆ ರಾಬರ್ಟ್ ಮೂಲಕ ದರ್ಶನ್ ಜೋಡಿ ಯಾರಾಗಲಿದ್ದಾರೆಂಬ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇತ್ತು. ಈ ಸಾಲಿನಲ್ಲಿ ಹಲವಾರು ನಟಿಯರ ಹೆಸರು ಕೇಳಿ ಬಂದು ಇನ್ನೇನು ಇವರೇ ಫಿಕ್ಸು ಎಂಬಂತೆಯೂ ಸುದ್ದಿಯಾಗುತ್ತಾ ಬಂದಿತ್ತು. ಈ ಬಗ್ಗೆ ಮೌನ ಮುರಿಯದಿದ್ದ ನಿರ್ದೇಶಕ ತರುಣ್ ಸುಧೀರ್ ಈಗ ರಾಬರ್ಟ್ ನಾಯಕಿ ಯಾರೆಂಬುದನ್ನು ಅಧಿಕೃತವಾಗಿಯೇ ಜಾಹೀರು ಮಾಡಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲಕ ಅಪ್ಪಟ ಕನ್ನಡದ ಹುಡುಗಿ ಆಶಾ ಭಟ್ ರಾಬರ್ಟ್ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಜಾಹೀರು ಮಾಡಿದ್ದಾರೆ. ಪರಭಾಷಾ ನಾಯಕಿಯ ಬದಲು ನನ್ನದೇ ಕರುನಾಡಿನ ಹುಡುಗಿ ರಾಬರ್ಟ್ ಸಖಿಯಾದ ಸುದ್ದಿ ಕೇಳಿ ಪ್ರೇಕ್ಷಕರು, ದರ್ಶನ್ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಫ್ಯಾಷನ್ ಲೋಕದಲ್ಲಿ ದೊಡ್ಡ ಹೆಸರು ಮಾಡಿರೋ ಆಶಾ ಭಟ್ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನೂ ಮುಡಿಗೇರಿಸಿಕೊಂಡಿರುವವರು. ನಟಿಯಾಗಬೇಕೆಂಬ ಕನಸು ಹೊಂದಿದ್ದ ಆಶಾ ಅದನ್ನು ಬಾಲಿವುಡ್ ಚಿತ್ರರಂಗದ ಮೂಲಕ ಈಗಾಗಲೇ ನನಸು ಮಾಡಿಕೊಂಡಿದ್ದಾರೆ. ಅವರೀಗ ರಾಬರ್ಟ್ ಚಿತ್ರದ ಮೂಲಕ ತವರು ನೆಲಕ್ಕೂ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.


ಆಶಾ ಭಟ್ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು. ಅವರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ. ಆಳ್ವಾಸ್‌ನಲ್ಲಿಯೇ ವ್ಯಾಸಂಗ ಮುಗಿಸೋ ಹೊತ್ತಿಗೆಲ್ಲ ಪ್ಯಾಷನ್ ಲೋಕದತ್ತ ಆಕರ್ಷಿತರಾಗಿದ್ದ ಅವರು ಆ ಕ್ಷೇತ್ರಕ್ಕೇ ಅಡಿಯಿರಿಸಿದ್ದರು. ಮಿಸ್ ಸುಪ್ರಿಂಟರ್‌ನ್ಯಾಷನಲ್ ಕಿರೀಟವನ್ನೂ ಮುಡಿಗೇರಿಸಿಕೊಂಡಿದ್ದರು. ಆ ನಂತರದಲ್ಲಿ ಪ್ಯಾಷನ್ ಲೋಕದಲ್ಲಿಯೇ ಸಕ್ರಿಯರಾಗಿದ್ದರಾದರೂ ನಟಿಯಾಗಬೇಕೆಂಬ ಹಂಬಲದಿಂದ ಬಾಲಿವುಡ್‌ನತ್ತ ಗಮನ ಹರಿಸಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಜಂಗ್ಲಿ ಎಂಬ ಚಿತ್ರದಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ಅದಾದ ನಂತರದಲ್ಲಿ ಬಾಲಿವುಡ್‌ನ ಮತ್ತೊಂದಷ್ಟು ಅವಕಾಶಗಳನ್ನು ಬಾಚಿಕೊಂಡಿದ್ದ ಆಶಾ ಭಟ್ ಪಾಲಿಗೆ ರಾಬರ್ಟ್ ನಾಯಕಿಯಾಗಿ ತವರು ನೆಲಕ್ಕೆ ಆಗಮಿಸೋ ಅವಕಾಶ ಕೂಡಿ ಬಂದಿದೆ.


ಆಶಾ ಭಟ್ ರಾಬರ್ಟ್ ನಾಯಕಿ ಎಂಬ ವಿಚಾರ ಅಧಿಕೃತವಾಗಿ ಘೋಷಣೆಯಾಗೋ ಮೂಲಕ ನಾಯಕಿಯ ಆಯ್ಕೆಯ ಸುತ್ತಾ ಹರಡಿಕೊಳ್ಳುತ್ತಿದ್ದ ಅಂತೆಕಂತೆಗಳಿಗೆ ತೆರೆ ಬಿದ್ದಂತಾಗಿದೆ. ಅಷ್ಟಕ್ಕೂ ಈವರೆಗೆ ರಾಬರ್ಟ್ ನಾಯಕಿಯ ವಿಚಾರವಾಗಿ ಹರಡಿಕೊಂಡಿದ್ದ ರೂಮರ್‌ಗಳು ಒಂದೆರಡಲ್ಲ. ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳ ನಟಿಯರ ಹೆಸರು ಈ ಸಾಲಿನಲ್ಲಿ ಕೇಳಿ ಬಂದಿತ್ತು. ಕಡೆಗೆ ಪರಭಾಷಾ ಹುಡುಗಿಯೇ ನಾಯಕಿಯಾಗೋದು ಪಕ್ಕ ಎಂಬಂತೆಯೂ ಸುದ್ದಿಗಳು ಹರಡಿಕೊಂಡು ಪಂಜಾಬಿ ಹುಡುಗಿ ಮೆಹ್ರೀನ್ ಫಿರ್ಜಾದ ಹೆಸರೇ ಅಂತಿಮವೆಂಬಂತೆ ತೇಲಿ ಬಂದಿತ್ತು. ಆದರೆ ನಿರ್ದೇಶಕ ತರುಣ್ ಸುಧೀರ್ ಮಾತ್ರ ಈ ವರೆಗೂ ತುಟಿ ಬಿಚ್ಚಿರಲಿಲ್ಲ. ಇದೀಗ ಕಡೆಗೂ ಕನ್ನಡತಿ ಆಶಾ ಭಟ್ ಹೆಸರು ಅಂತಿಮಗೊಂಡಿದೆ.

LEAVE A REPLY

Please enter your comment!
Please enter your name here