ಈ ವರ್ಷದ ಕೊನೆಯಲ್ಲಿ ದರ್ಶನ ನೀಡಲಿದ್ದಾನೆ ಶ್ರೀಮನ್ನಾರಾಯಣ!

ಕಿರಿಕ್ ಪಾರ್ಟಿ ಸೂಪರ್ ಹಿಟ್ ಆದ ನಂತರದಲ್ಲಿ ರಕ್ಷಿತ್ ಶೆಟ್ಟಿಯವರನ್ನು ಈವರೆಗೂ ಪ್ರೇಕ್ಷಕರು ತೆರೆ ಮೇಲೆ ನೋಡಿಲ್ಲ. ಆದರೆ ಅವರು ಆ ನಂತರದಲ್ಲಿ ನಟಿಸುತ್ತಿರೋ ಅವನೇ ಶ್ರೀಮನ್ನಾರಾಯಣ ಚಿತ್ರ ಅಖಂಡ ಮೂರು ವರ್ಷಗಳ ಕಾಲ ರೂಪಿಸಲ್ಪಟ್ಟು ಕಡೆಗೂ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಆದರೆ ಇಷ್ಟು ಸುದೀರ್ಘಾವಧಿಯ ಕಾಲ ಕಾದು ಸುಸ್ತೆದ್ದಿರೋ ರಕ್ಷಿತ್ ಅಭಿಮಾನಿಗಳಲ್ಲಿ ಈ ವರ್ಷವಾದರೂ ಈ ಚಿತ್ರ ತೆರೆಗಾಣಬಹುದಾ ಎಂಬಂಥಾ ಗುಮಾನಿ ಇದ್ದೇ ಇದೆ. ಆದರೆ ಅದೆಲ್ಲದರ ಜೊತೆಗೆ ಶ್ರೀಮನ್ನಾರಾಯಣ ಕನ್ನಡ ಮಾತ್ರವಲ್ಲದೇ ಇತರೇ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಗೆಲ್ಲೋದು ಗ್ಯಾರೆಂಟಿ ಎಂಬ ಭರವಸೆಯೂ ಎಲ್ಲರಲ್ಲಿದೆ.


ಹೆಚ್ಚೂ ಕಮ್ಮಿ ಒಂದು ವರ್ಷಗಳ ಕಾಲ ಆನ್‌ಲೈನ್ ಸನ್ಯಾಸ ಸ್ವೀಕರಿಸಿದಂತಿದ್ದ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದರು. ಇದೂ ಕೂಡಾ ಅವನೇ ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಆಗಾಗ ಅಪ್‌ಡೇಟ್ಸ್ ಸಿಗೋದನ್ನು ತಪ್ಪಿಸಿದಂತಿತ್ತು. ಆದರೆ ಕೆಲ ತಿಂಗಳಿಂದ ರಕ್ಷಿತ್ ಮತ್ತೆ ಫೇಸ್‌ಬುಕ್ ಮುಂತಾದೆಡೆಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇದೀಗ ಗಣೇಶ್ ಹಬ್ಬದ ಸ್ಪೆಷಲ್ ಎಂಬಂತೆ ಫೇಸ್ ಬುಕ್ ಲೈವ್‌ಗೆ ಬಂದಿರೋ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ.


ಈ ಚಿತ್ರ ಆರಂಭವಾಗಿ ಭರ್ತಿ ಮೂರು ವರ್ಷ ಕಳೆದಿದೆ. ಇಷ್ಟು ವರ್ಷಗಳಲ್ಲಿ ಪ್ರತೀ ವರ್ಷವೂ ಪ್ರತೀ ಹಂತದಲ್ಲಿಯೂ ಅಭಿಮಾನಿಗಳೆಲ್ಲ ಕಾಯುತ್ತಲೇ ಬಂದಿದ್ದಾರೆ. ಈಗ ಈ ಚಿತ್ರ ಯಾವ ಹಂತದಲ್ಲಿದೆ, ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗಳ ಸರಮಾಲೆ ಸೃಷ್ಟಿಯಾಗಿರೋ ಈ ಹಂತದಲ್ಲಿ ಫೇಸ್ ಬುಕ್ ಲೈವ್ ಮೂಲಕ ರಕ್ಷಿತ್ ಅದನ್ನು ಪರಿಹರಿಸುವಂಥಾ ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದರನ್ವಯ ಹೇಳೋದಾದರೆ, ಇದೀಗ ಈ ಸಿನಿಮಾದ ಡಬ್ಬಿಂಗ್ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಹಿನ್ನೆಲೆ ಸಂಗೀತಕ್ಕೆ ಅಚಿತಿಮ ಸ್ಪರ್ಶ ನೀಡೋ ಕೆಲಸವೂ ಚಾಲ್ತಿಯಲ್ಲಿದೆ. ಇದರ ಜೊತೆ ಜೊತೆಗೇ ಬೇರೆ ಭಾಷೆಗಳಲ್ಲಿಯೂ ಅವನೇ ಶ್ರೀಮನ್ನಾರಾಯಣನನ್ನು ರೂಪಿಸೋ ಕಾರ್ಯವೂ ಚಾಲ್ತಿಯಲ್ಲಿದೆ.


ಈಗಾಗಲೇ ಅಭಿಮಾನಿಗಳನ್ನು ಕಾಯಿಸಿದ್ದರಿಂದ ಬೇಗನೆ ತೆರೆಗಾಣಿಸುವ ಹಂಬಲದೊಂದಿಗೇ ಇಡೀ ಚಿತ್ರತಂಡ ಕಾರ್ಯ ನಿರ್ವಹಿಸುತ್ತಿದೆ. ಅಕ್ಟೋಬರ್ ಕೊನೇಯ ಹೊತ್ತಿಗೆ ಅಥವಾ ನವೆಂಬರ್ ತಿಂಗಳಲ್ಲಿ ಈ ಚಿತ್ರ ತೆರೆಗಾಣೋದು ಗ್ಯಾರೆಂಟಿ ಎಂಬ ವಿಚಾರವನ್ನೂ ಕೂಡಾ ರಕ್ಷಿತ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವನೇ ಶ್ರೀಮನ್ನಾರಾಯಣ ಇಷ್ಟು ತಡವಾಗಿದ್ದರ ಹಿಂದೆ ಚಿತ್ರೀಕರಣವಲ್ಲದೇ ಬೇರ‍್ಯಾವ ಕಾರಣವೂ ಇಲ್ಲ. ಅತ್ಯಂತ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಿಕೊಂಡ ಚಿತ್ರ ಎಂಬ ದಾಖಲೆಯೂ ಈ ಸಿನಿಮಾ ಪಾಲಾಗಿದೆ. ಈ ಮೂಲಕವೇ ಅಚ್ಚುಕಟ್ಟಾಗಿ ರೂಪಿಸಲ್ಪಟ್ಟಿರೋ ಅವನೇ ಶ್ರೀಮನ್ನಾರಾಯಣ ದೇಶಾದ್ಯಂತ ಬಿಡುಗಡೆಗೊಳ್ಳಲು ತಯಾರಾಗುತ್ತಿದೆ.

LEAVE A REPLY

Please enter your comment!
Please enter your name here