ಪವರ್ ಸ್ಟಾರ್ ಸಮ್ಮುಖದಲ್ಲಿ ಘೀಳಿಟ್ಟ ಸಲಗ! ಬಿಡುಗಡೆಯಾಯ್ತು ರಗಡ್ ಫಸ್ಟ್ ಲುಕ್ ಪೋಸ್ಟರ್!

ಬಿಡುಗಡೆಯಾಯ್ತು ರಗಡ್ ಫಸ್ಟ್ ಲುಕ್ ಪೋಸ್ಟರ್!
ದುನಿಯಾ ವಿಜಯ್ ಮೊದಲ ಬಾರಿ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಚಿತ್ರ ಸಲಗ. ನಾಯಕನಾಗಿ, ನಿರ್ದೇಶಕನಾಗಿ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರೋ ವಿಜಯ್ ಒಂದು ಸಮರ್ಥವಾದ ತಂಡದೊಂದಿಗೆ, ಸಂಪೂರ್ಣ ತಯಾರಿ ನಡೆಸಿಯೇ ಅಖಾಡಕ್ಕಿಳಿದಿದ್ದಾರೆ. ಅವರಿಗೆ ನಿರ್ಮಾಪಕರಾಗಿ ಕೆ.ಪಿ ಶ್ರೀಕಾಂತ್ ಸಾಥ್ ನೀಡಿದ್ದಾರೆ. ಶುರುವಾತಿನಿಂದಲೂ ಸಾಕಷ್ಟು ಸುದ್ದಿ ಮಾಡುತ್ತಾ ಬಂದಿದ್ದ ಸಲಗ ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮ್ಮುಖದಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೂಲಕ ಘೀಳಿಟ್ಟಿದೆ!


ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ವಿಜಯ್ ಭೇಟಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದು ಒಂದಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಪುನೀತ್ ಸಲಗ ಚಿತ್ರದಲ್ಲಿ ಅತಿಥಿ ಪಾತ್ರವನ್ನೇನಾದರೂ ಮಾಡುತ್ತಿದ್ದಾರಾ ಅನ್ನೋ ಚರ್ಚೆ, ಖಂಡಿತಾ ಅವರು ಈ ಚಿತ್ರದಲ್ಲೊಂದು ಹಾಡು ಹಾಡಿರುತ್ತಾರೆಂಬ ದಿಕ್ಕಿನಲ್ಲಿಯೂ ಹರಿದಾಡಿತ್ತು. ಆದರೀಗ ಖುದ್ದು ಪವರ್ ಸ್ಟಾರ್ ಪವರ್‌ಫುಲ್ಲಾಗಿರೋ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಲಾಂಗ್ ಹಿಡಿದು ಕೂತ ರಗಡ್ ಲುಕ್ಕಿನಲ್ಲಿ ವಿಜಯ್ ಮಿಂಚಿದ್ದಾರೆ.


ದುನಿಯಾ ವಿಜಯ್ ಪಾಲಿಗೆ ಇದು ಹೊಸಾ ಯಾನ. ಇದುವರೆಗೂ ನಾಯಕ ನಟನಾಗಿದ್ದ ಅವರೀಗ ಸಲಗ ಮೂಲಕ ನಿರ್ದೇಶಕನಾಗಿಯೂ ಛಾಪು ಮೂಡಿಸುವ, ಭರಪೂರ ಗೆಲುವು ದಾಖಲಿಸುವ ಆಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿದ್ದಾರೆ. ಹಾಗಂತ ಅವರೇನು ಏಕಾಏಕಿ ನಿರ್ದೇಶಕನಾಗಿ ಅಖಾಡಕ್ಕಿಳಿದಿಲ್ಲ. ಇದರ ಹಿಂದೆ ಅದೆಷ್ಟೋ ತಿಂಗಳ ಪೂರ್ವ ತಯಾರಿಯಿದೆ. ನಿರ್ದೇಶನದ ಬಗ್ಗೆ ಇಂಚಿಂಚು ಅರಿತುಕೊಂಡು, ಕಥೆಯನ್ನು ಒಪ್ಪ ಓರಣ ಮಾಡಿಕೊಂಡು ಸಮರ್ಥವಾದ ತಂಡದೊಂದಿಗೇ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವರೆಗೂ ನಿಚ್ಚಳ ಗೆಲುವನ್ನು, ಸಾಕಷ್ಟು ಏಳುಬೀಳುಗಳನ್ನೂ ಕಂಡಿರುವ ವಿಜಯ್ ಪಾಲಿಗೆ ಸಲಗ ಅದ್ದೂರಿ ಗೆಲುವನ್ನೇ ದಯಪಾಲಿಸುತ್ತದೆ ಎಂಬ ನಂಬಿಕೆ ಸಿನಿಮಾ ಪ್ರೇಮಿಗಳಲ್ಲಿಯೇ ಇದೀಗ ನೆಲೆ ನಿಂತಿದೆ.


ಅಷ್ಟಕ್ಕೂ ಕೆ. ಶ್ರೀಕಾಂತ್‌ರಂಥಾ ಕಲೆಯ ಬಗ್ಗೆ ಕಾಳಜಿಯಿರೋ ಕನಸುಗಾರ ನಿರ್ಮಾಪಕರ ಸಾಥ್ ಸಿಕ್ಕಿದೆ ಎಂದ ಮೇಲೆ ಸಲಗ ಅದ್ದೂರಿಯಾಗಿಯೇ ಮೂಡಿ ಬರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದುಕೊಂಡು ಇದೀಗ ಅದ್ದೂರಿ ಚಿತ್ರಗಳ ನಿರ್ಮಾಪಕರೆಂದೇ ಹೆಸರಾಗಿರುವ ಶ್ರೀಕಾಂತ್ ಸಲಗವನ್ನೂ ಕೂಡಾ ತಮ್ಮ ಎಂದಿನ ಶ್ರದ್ಧೆ ಮತ್ತು ಪ್ರೀತಿಯಿಂದಲೇ ನಿರ್ಮಾಣ ಮಾಡುತ್ತಿದ್ದಾರೆ. ಟಗರು ಎಂಬ ಭಿನ್ನ ಬಗೆಯ ಸೂಪರ್ ಹಿಟ್ಟ್ ಚಿತ್ರವೇ ಶ್ರೀಕಾಂತ್ ಅವರ ಟೇಸ್ಟು ಎಂಥಾದ್ದೆಂಬುದಕ್ಕೆ ಸ್ಪಷ್ಟ ಸಾಕ್ಷಿ. ನಿರ್ಮಾಪಕ ಎಂದರೆ ಕಾಸು ಸುರಿಯೋದು ಮಾತ್ರವೇ ಅಲ್ಲ, ನಿರ್ಮಾಣ ಮಾಡೋ ಚಿತ್ರವನ್ನು ಪ್ರತೀ ಹಂತದಲ್ಲಿಯೂ ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋದೆಂಬುದನ್ನು ನಂಬಿ ಅದಕ್ಕೆ ತಕ್ಕುದಾಗಿ ಸಾಗಿ ಬಂದಿರೋ ಶ್ರೀಕಾಂತ್ ಪಾಲಿಗೆ ಸಲಗ ಹೊಸಾ ಕನಸಿನಂಥಾ ಚಿತ್ರ.


ಈ ಮೂಲಕವೇ ದುನಿಯಾ ವಿಜಯ್ ಮತ್ತು ಶ್ರೀಕಾಂತ್ ಅವರ ಸಮಾಗಮವಾಗಿದೆ. ಟಗರು ಡಾಲಿ ಖ್ಯಾತಿಯ ಧನಂಜಯ್ ಸೇರಿದಂತೆ ಇಲ್ಲಿ ಅತಿರಥ ಮಹಾರಥ ಕಲಾವಿದರ ದಂಡೇ ಇದೆ. ಸಲಗ ಭೂಗತ ಲೋಕದ ವಿಭಿನ್ನ ಕಥೆಯಾಧಾರಿತ ಚಿತ್ರ ಎಂಬ ಸುಳಿವು ಈ ಹಿಂದೆಯೇ ಸಿಕ್ಕಿತ್ತು. ಈಗ ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರಿನಲ್ಲಿ ವಿಜಯ್ ಗೆಟಪ್ಪು ನೋಡಿದರೆ ಅದು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ಅದು ಮಾಮೂಲಿ ಭೂಗತದ ಕಥೆಯಲ್ಲ ಅನ್ನೋದು ಕೂಡಾ ಅಷ್ಟೇ ಸ್ಪಷ್ಟವಾಗಿಯೇ ಪ್ರೇಕ್ಷಕರಿಗೆಲ್ಲ ಗೊತ್ತಾಗಿದೆ. ಪ್ಲಾನಿನ ಪ್ರಕಾರವೇ ವೇಗವಾಗಿ ಚಿತ್ರೀಕರಣ ಮುಗಿಸಿಕೊಳ್ಳುತ್ತಿರೋ ಸಲಗ ಇನ್ನು ಮುಂದೆ ಮತ್ತೊಂದಷ್ಟು ಅಚ್ಚರಿಗಳ ರೂಪದಲ್ಲಿ ಪ್ರೇಕ್ಷಕರ ಮುಂದೆ ಘೀಳಿಡಲು ಅಣಿಯಾಗುತ್ತಿದೆ.

LEAVE A REPLY

Please enter your comment!
Please enter your name here