ಪೊಲಿಟಿಕಲ್ ಥ್ರಿಲ್ಲರ್ ಚಿತ್ರದಲ್ಲಿ ರೆಬೆಲ್ ನೀತೂ!

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಾಳಿಪಟ ಚಿತ್ರದ ಪಾತ್ರದ ಮೂಲಕವೇ ಮನೆ ಮಾತಾಗಿರೋ ನಟಿ ನೀತೂ. ಗಾಳಿಪಟದಲ್ಲಿ ತನ್ನ ಹಿಂದಿಬಿದ್ದ ದಿಗಂತನಿಗೆ ಕ್ಯಾಕರಿಸಿ ಉಗಿಯುತ್ತಾ ರೆಬೆಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನೀತೂ ಆ ನಂತರದಲ್ಲಿಯೂ ಹಲವಾರು ಚಿತ್ರಗಳಲ್ಲಿ ಥರ ಥರದ ಪಾತ್ರಗಳನ್ನು ಮಾಡಿದ್ದಾರೆ. ಒಂದಷ್ಟು ಕಾಲ ಮಾಯವಾದಂತಿದ್ದ ಮತ್ತೆ ಬಣ್ಣ ಹಚ್ಚೋ ಮೂಲಕ ಸದ್ದು ಮಾಡಿದ್ದಾರೆ. ಇದೀಗ ವಿಶಿಷ್ಟವಾದ ಪೊಲಿಟಿಕಲ್ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರದ ಪ್ರಧಾನ ಪಾತ್ರದಲ್ಲಿ ನೀತೂ ನಟಿಸುತ್ತಿದ್ದಾರೆ.


ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡುತ್ತಿರೋ ಈ ಚಿತ್ರದ ಶೀರ್ಷಿಕೆ ೧೮೮೮. ಈ ವಿಶೇಷವಾದ ಟೈಟಲ್ಲಿನ ಸಿನಿಮಾವನ್ನು ಸಾಫ್ಟ್‌ವೇರ್ ಉದ್ಯೋಗಿಗಳೇ ಸೇರಿಕೊಂಡು ರೂಪಿಸುತ್ತಿದ್ದಾರೆ. ಸೌರಭ್ ಶುಕ್ಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಸದರಿ ಸಿನಿಮಾದಲ್ಲಿ ನೀತೂ ಕೂಡಾ ಅಷ್ಟೇ ವಿಶೇಷವಾದ ಪಾತ್ರದಲ್ಲಿ ನಟಿಸಿದ್ದಾರಂತೆ. ಇದು ಮುಖ್ಯ ನಟಿಯೊಬ್ಬಳ ಸುತ್ತಾ ನಡೆಯೋ ಕಥೆಯ ಚಿತ್ರ. ಆ ನಟಿಯಾಗಿ ನೀತೂ ನಟಿಸಿದ್ದಾರೆ. ಈಗಾಗಲೇ ೧೮೮೮ ಮುಕ್ಕಾಲು ಭಾಗದಷ್ಟು ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ.


ಸಿನಿಮಾ ಕನಸನ್ನೇ ಧ್ಯಾನಿಸುತ್ತಾ ಸಾಫ್ಟ್‌ವೇರ್ ವಲಯದಲ್ಲಿ ಕೆಲಸ ಮಾಡುವ ಸ್ನೇಹಿತರೇ ತಂಡ ಕಟ್ಟಿಕೊಂಡು ಈ ಚಿತ್ರವನ್ನು ರೂಪಿಸುತ್ತಿದ್ದಾರೆ. ಇದರ ಕಥೆ, ಹೊಸತನ ಮತ್ತು ಈ ತಂಡದ ಉತ್ಸಾಹ ಕಂಡು ನೀತೂ ಇದಕ್ಕೆ ಸಾಥ್ ಕೊಟ್ಟಿದ್ದಾರೆ. ವಿಶೇಷವೆಂದರೆ ಇದುವರೆಗೂ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿರೋ ನೀತೂ ಈ ಚಿತ್ರಕ್ಕಾಗಿ ಒಂದು ಡ್ಯುಯೆಟ್ ಸಾಂಗ್ ಅನ್ನೂ ಬರೆದಿದ್ದಾರಂತೆ. ಈ ಹಾಡಿನಲ್ಲಿ ಪ್ರತಾಪ್ ಮತ್ತು ಅದ್ವಿತಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಗೀತರಚನೆಯ ಹೊಸಾ ಪಾತ್ರವನ್ನೂ ನೀತು ನಿರ್ವಹಿಸಿದ್ದಾರೆ. ಸಾಫ್ಟ್ ವೇರ್ ಉದ್ಯೋಗಿಗಳು ಶ್ರದ್ಧೆಯಿಂದ ರೂಪಿಸಿರೋ ಈ ಚಿತ್ರದ ಮತ್ತಷ್ಟು ವಿವರಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.

LEAVE A REPLY

Please enter your comment!
Please enter your name here