ಮಳೆ ರಚ್ಚೆ ಹಿಡಿದ ರಾತ್ರಿಗಳಿಗೆ ಕರುಣೆಯಿಲ್ಲ!

[adning id="4492"]

ಮಿಂಚಿನಂಥವನೇ…
ಲ್ಲಿ ಜೋರು ಮಳೆ. ಜೂನಿಗಿಂತಲೂ ಮೊದಲೇ ಮಳೆ ಹಿಡೀತಾ ಅಂತೊಂದು ಗುಮಾನಿ ಊರೋರಿಗೆಲ್ಲ. ಅಮ್ಮಂಗೆ ಒಂದಿಡೀ ಮಳೆಗಾಲಕ್ಕಾಗಿ ಮಿಗುವಷ್ಟು ಗರಿಗರಿ ಹಪ್ಪಳ, ಸಂಡಿಗೆ ಪೇರಿಸಿಡುವ ಧಾವಂತ. ಅಪ್ಪಂಗೆ ಯಾವಾಗಿಂದ ಗದ್ದೆ ಉಳುಮೆ ಶುರು ಮಾಡಬೇಕು, ಯಾವ ಭತ್ತ ಬಿತ್ತಬೇಕೆಂಬ ಚಿಂತೆ. ಈ ತಮ್ಮನೆಂಬ ಕೋತಿ ಜನುಮದವನದ್ದು ಬೇರೆಯದ್ದೇ ಲೋಕ. ನಾ ಮಾತ್ರ ಈ ಶೀತ ವಾತಾವರಣದಲ್ಲಿ ಮತ್ತೆ ಮತ್ತೆ ನಿನ್ನ ನೆನಪುಗಳಲ್ಲಿ ಕಳೆದು ಹೋಗುತ್ತಿದ್ದೇನೆ. ಗೆಳೆಯಾ… ಈ ಅಗಲಿಕೆಯ ಕಂದಕದ ಆಚೀಚೆ ನಿಂತು ಹೀಗೆ ಒಬ್ಬರನ್ನೊಬ್ಬರು ಧೇನಿಸಿಕೊಳ್ಳೋದರಲ್ಲಿ, ಪುಳಕಗೊಳ್ಳೋದರಲ್ಲಿ, ಅಸಹಾಯಕರಾಗಿ ಕಣ್ಣೀರಾಗೋದರಲ್ಲಿ ಇಂಥಾ ಸುಖವಿದೆ ಅಂಥ ಈಗಲೇ ಕಣೋ ಗೊತ್ತಾಗಿದ್ದು!


ಸುಖ ಅಂದೆನಲ್ಲಾ? ಅದು ಬರೀ ಸುಖವಲ್ಲ. ಅದು ಸಂಕಟವೂ ಸೇರಿಕೊಂಡ ಕಲೆಸುಮೇಲೋಗರ. ಈ ಥಂಡಿ ವಾತಾವರಣದ ನಡುವೆ ಒಂಟಿಯಾಗಿ ನಿಂತಾಕ್ಷಣ ವಾಸ್ತವದ ಕುಲುಮೆಯಲ್ಲಿ ಭ್ರಮೆಗಳೆಲ್ಲವೂ ಕರಗಿದಂತೆ ಭಾಸವಾಗುತ್ತೆ. ಅದರ ಬೆನ್ನಿಗೇ ವಿಲಕ್ಷಣ ಭಯ. ನಂಗೆ ನಿನ್ನ ಕರಡಿ ಪ್ರೀತಿ, ಸಿಡಸಿಡಾ ಕೋಪ, ಬೇಸರಿಸಿಕೊಂಡರೆ ಮುದ್ದು ಮಾಡೋ ತಾಯ್ತನ- ಇದ್ಯಾವುದೂ ಅಪರಿಚಿತವಲ್ಲ. ಇಂಥವೆಲ್ಲ ಈ ಪರಿಚಯದ ಪುಟ್ಟ ಹಾದಿಯಲ್ಲಿ ಅದೆಷ್ಟು ಸಲ ಆಗಿ ಹೋಗಿವೆಯೋ… ಪ್ರತೀ ಹುಡುಗಿಯೂ ಪ್ರೀತಿಸಿದವನಲ್ಲಿ ಅಪ್ಪನನ್ನ ಹುಡುಕ್ತಾಳೆ ಅಂತ ಸೈಕಾಲಜಿ ಹೇಳುತ್ತೆ. ನಿಂಗೊತ್ತಾ? ನಂಗೆ ನಿನ್ನಲ್ಲಿ ಪ್ರತೀ ಕ್ಷಣವೂ ಅಮ್ಮ ಕಾಣಿಸುತ್ತಿದ್ದಳು.


ಇಂಥಾದ್ದರಲ್ಲಿ ಇದೆಲ್ಲಿಂದ ಸೃಷ್ಟಿಯಾಯ್ತು ಈ ಕಂದಕ? ಅದ್ಯಾವ ಸಂದಿಯಿಂದ ನುಸುಳಿ ಬಂತು ಈ ಅನುಮಾನ ಪಿಶಾಚಿ? ಯಾಕೆ ಆವರಿಸಿಕೊಂಡಿತೋ ಹುಡುಗಾ ಮಾತುಗಳನ್ನೆಲ್ಲ ಶಾಶ್ವತವೆಂಬಂತೆ ಮರಗಟ್ಟಿಸುವ ಈ ಗಾಢ ಮೌನ… ಕೆದಕಲು ನಿಂತರೆ ಬರೀ ಪ್ರಶ್ನೆಗಳೇ ಪಿಶಾಚಿಯಂತೆ ಕಾಡುತ್ತವೆ. ಆ ಕಾಡಿಸೋ ಮಾಯಾನಗರಿಯಲ್ಲಿ ಸಾವಿರಾರು ಜನರ ನಡುವೆಯೂ ನನ್ನನ್ನಾವರಿಸಿದ್ದ ಅನಾಥಪ್ರಜ್ಞೆ ನೀಗಿಸಿದೋನು ನೀನು. ಅದೇನೇ ದುಖಃ, ಧಾವಂತ, ಖುಷಿಯಾದಾಗಲೂ ಹೇಳಿಕೊಳ್ಳಲು ನೀನೇ ಆಗಬೇಕಿತ್ತು. ಕೆಲ ಸಾರ್ತಿ ನೀನ್ಯಾವ ಜನುಮದ ಆತ್ಮಬಂಧುವೋ ಅಂತನ್ನಿಸುತ್ತಿತ್ತು. ನನ್ನೆಲ್ಲ ಪ್ರವರಗಳನ್ನೂ ಮೊದಲಿಂದ ಕಡೇತನಕ ತನ್ಮಯನಾಗಿ ಆಲಿಸುತ್ತಿದ್ದ ನಿನ್ನ ತಾಳ್ಮೆಯ ಬಗ್ಗೆ ಬೆರಗೂ ಹುಟ್ಟುತ್ತಿತ್ತು.


ಅಂಥಾ ತಾಳ್ಮೆ ಅದ್ಯಾಕೆ ಈ ಪರಿ ಹಾಳಾಯ್ತೋ ಕಾಣೆ. ಅದು ನನ್ನ ಮನದಾಳ ಅರ್ಥ ಮಾಡಿಕೊಳ್ಳಲಾರದಷ್ಟು ಕೆಟ್ಟು ಹೋದುದರ ಬಗ್ಗೆ ನಿಜಕ್ಕೂ ಸಿಟ್ಟಿದೆ. ಯಾರೋ ಹೇಳಿದ ಚುಚ್ಚು ಮಾತಿಗೆ ನಿನ್ನ ಮನಸಲ್ಲಿ ಅನುಮಾನದ ಹೆನ್ನಾಗರ ಯಾವ ಕೆಡುಕಿಗೆ ತಲೆ ಎತ್ತಿತೋ ಕಾಣೆ; ತುಸುವೂ ಕರುಣೆಯಿಲ್ಲದೆ ಊರು ಸೇರಿಕೊಂಡಿದ್ದೀಯ. ನೀನಿಲ್ಲದ ಆ ಊರಲ್ಲಿರೋದಕ್ಕೆ ಉಸಿರುಗಟ್ಟಿದಂತಾಗಿ ನಾನೂ ಊರ ಕಡೆ ಬಂದಿದ್ದೇನೆ. ಸುಡು ಸುಡುವ ಯಾತನೆಗೆ ತುಸು ಬೇಗನೆ ಹಿಡಿದಂತಿರೋ ಈ ಮಳೆಗಾಲವೇ ತಂಪು ತೀಡಬಹುದೇನೋ ಅಂತೊಂದು ನಿರೀಕ್ಷೆಯಿತ್ತು. ಆದರೀಗ ಈ ಬಿರುಮಳೆಯ ರಾತ್ರಿಗಳೂ ನಿನ್ನಂತೆಯೇ ಕರುಣೆಯಿಲ್ಲದೆ ಸುಡಲಾರಂಭಿಸಿವೆ.


ಮೊದಲಾದರೆ, ಜೂನ್ ತಿಂಗಳ ಮಧ್ಯಭಾಗದ ನಂತರವಲ್ಲದೆ ಮತ್ಯಾವತ್ತೂ ಬೆಳ್ಳಂಬೆಳಗ್ಗೆಯೇ ಮಳೆ ಹಿಡಿಯುತ್ತಿರಲಿಲ್ಲ. ಆದರೀಗ ಬೆಳಗ್ಗೆಯೇ ಬಿರುಮಳೆ. ಗಂಟೆಗಟ್ಟಲೆ ಹನಿ ಕಡಿಯದ ತುಂತುರು. ಯಾವುದು ಬೆಳಗ್ಗೆ, ಯಾವುದು ಮಧ್ಯಾಹ್ನ ಮತ್ತು ಸಂಜೆ ಯಾವುದೆಂದೇ ಗೊತ್ತಾಗದಂಥಾ ಸ್ಥಿತಿ. ಗಡಿಯಾರದ ಮೇಲೆಯೇ ಗುಮಾನಿ ಹುಟ್ಟೋವಂಥಾ ವಾತಾವರಣ. ಎದೆಯೊಳಗೆ ಧಾವಂತ, ದುಃಖವನ್ನಿಟ್ಟುಕೊಂಡೇ ಇದಿಷ್ಟನ್ನೂ ಮನಸಾರೆ ಅನುಭವಿಸುತ್ತೇನೆ. ಆದರೆ ಸಂಜೆ ತೀರಿದ ನಂತರ ಕಡು ಕಾಡಿಗೆಯಂಥಾ ಕತ್ತಲು ತೀಡಲಾರಂಭಿಸುತ್ತದೆಯಲ್ಲಾ? ಆಗ ನಿಜಕ್ಕೂ ಕಂಗಾಲಾಗುತ್ತೇನೆ.


ಹೀಗೆಯೇ ಹೊತ್ತು ಕಳೆದು ಎಲ್ಲರೂ ಹಾಸಿಗೆಗೊರಗಿ ಗೊರಕೆ ಹೊಡೆದರೂ ನನ್ನೊಂದಿಗೆ ಈ ನಿದಿರೆಯೂ ನಿನ್ನಂತೆಯೇ ಮುನಿಸಿಕೊಳ್ಳುತ್ತೆ. ಹೊರಗೆ ಒಂದೊಂದು ಹನಿಗಳ ಶಬ್ಧವೂ ಸ್ಪಷ್ಟವಾಗಿ ಕೇಳಿಸೊವಂಥಾ ನೀರವ ಮೌನ. ಎಷ್ಟು ಹೊದಿಕೆ ಹೊದ್ದುಕೊಂಡರೂ ನೀಗದಂಥಾ ಭೀಕರ ಛಳಿ. ಇದೆಲ್ಲದರ ನಡುವಲ್ಲಿಯೇ ನೀ ಸತ್ತು ಹೋಗುವಂತೆ ನೆನಪಾಗುತ್ತಿ. ನಿನ್ನ ಕಲ್ಲಿನಂಥಾ ಸಿಟ್ಟು ಕರಗಿ ಬೇಗನೆ ತೆಕ್ಕೆ ಸೇರುವಂತಾಗಲಿ ಅಂತ ಭೋರಿಟ್ಟು ಬೇಡಿಕೊಳ್ಳುತ್ತೇನೆ, ಬಿಕ್ಕಳಿಸಿ ಅಳುತ್ತೇನೆ. ನಿದ್ದೆ ಹತ್ತದೆ ನರಳಾಡುತ್ತೇನೆ. ನಿನ್ನೂರಲ್ಲಿ ಮಳೆಯಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನೀನೂ ಸಹ ಇಂಥಾದ್ದೇ ನರಳಿಕೆಯಲ್ಲಿ ತೊಳಲಾಡುತ್ತಿರುತ್ತಿ ಅಂತ ನಂಬುತ್ತೇನೆ.


ಇನ್ನೇನು ಒಂದೆರಡು ಗಂಟೆ ಕಳೆದರೆ ಅನಾಯಾಸವಾಗಿ ಮತ್ತೊಂದು ಮುಂಜಾವು ಅರಳಿಕೊಳ್ಳುತ್ತದೆ. ಆದರೆ ಈ ನರಳಿಕೆಗಿನ್ನೂ ಅಂತ್ಯ ಕಂಡಿಲ್ಲ. ನೀ ಬೇಕೇ ಬೇಕಂತ ಭೋರಿಡೋದನ್ನು ಮನಸೂ ಬಿಟ್ಟಿಲ್ಲ. ಅದ್ಯಾಕೋ ನಿಒನ್ನಂತೆಯೇ ರಚ್ಚೆ ಹಿಡಿದಂತೆ ಒಂದೇ ಸಮನೆ ಮಳೆ ಸುರಿಯುತ್ತಿದೆ. ಕಿಟಕಿಯನ್ನೇ ಸೀಳಿ ಬರುವಂಥಾ ಮಿಂಚು… ನೀನೂ ಸಹ ಮಿಂಚಿನಂಥವನೇ… ಅದು ಹೇಗೆ ಹೊಳೆದೆಯೋ, ಯಾವ ಮಾಯಕದಲ್ಲಿ ಮಾಯವಾದೆಯೋ ಗೊತ್ತೇ ಆಗಲಿಲ್ಲ. ಈಗ ಮಿಂಚಿನ ಹಿಮ್ಮೇಳವೆಂಬಂತೆ ಗುಡುಗೂ ಶುರುವಾಗಿದೆ. ಆ ಸದ್ದಿಗೆ ಅಮ್ಮಂಗೆ ಎಚ್ಚರಾಗಿ ನಾ ಎದ್ದು ಕೂತಿರೋದನ್ನ ನೋಡಿದರೆ ಗದರುತ್ತಾಳೆ.


ಹೀಗೆ ನಿನ್ನ ನೆನಪುಗಳನ್ನ ಎದೆಗವುಚಿಕೊಂಡು, ಯಾತನೆಯನ್ನ ಒಡಲಲ್ಲಿಟ್ಟುಕೊಂಡೇ ನಿದ್ದೆ ಹೊದ್ದುಕೊಳ್ಳೋ ಸರ್ಕಸ್ಸು ನಡೆಸುತ್ತಿದ್ದೇನೆ. ಇದು ಇನ್ನೆಷ್ಟು ದಿನದ ಪಾಡೋ ಗೊತ್ತಿಲ್ಲ. ಯಾಕೆಂದರೆ ಹುಡುಗಾ… ನಿಜಕ್ಕೂ ಮಳೆ ರಚ್ಚೆ ಹಿಡಿದ ರಾತ್ರಿಗಳಿಗೆ ಕರುಣೆಯಿಲ್ಲ…

                                     ನಿನ್ನವಳು…

[adning id="4492"]

LEAVE A REPLY

Please enter your comment!
Please enter your name here