ನಿರ್ಮಾಪಕನಾಗಿ ಹೆಡೆಯೆತ್ತಲು ರೆಡಿಯಾದರೇ ಅನರ್ಹ ಶಾಸಕ ಎಂಟಿಬಿ ನಾಗ?

ಪುಂಡ ಫಟಿಂಗರ ಕಟ್ಟ ಕಡೆಯ ಆಟ ರಾಜಕೀಯ ಎಂಬರ್ಥದ್ದೊಂದು ಲೋಕರೂಢಿಯ ಮಾತಿದೆ. ಇದೀಗ ರಾಜಕೀಯ ಸೇರಿ ತಿಜೋರಿ ತುಂಬಿಸಿಕೊಂಡು ದುಂಡಗಾದ ಮಂದಿಗೆ ಮತ್ತೊಂದಷ್ಟು ಆಟಕಟ್ಟಲು ಸಿನಿಮಾರಂಗದ ಮೈದಾನವೂ ಸೃಷ್ಟಿಯಾಗಿದೆ. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಚಮ್ಕಾಯಿಸಿ ಅನರ್ತಗೊಂಡು ಅತಂತ್ರ ರಾಜಕೀಯವಾಗಿ ಅತಂತ್ರ ಪರಿಸ್ಥಿತಿಯಲ್ಲಿರುವ ಹೊಸಕೋಟೆ ಮಾಜೀ ಶಾಸಕ ಎಂಟಿಬಿ ನಾಗರಾಜ್ ಕೂಡಾ ಆ ಸನ್ನಾಹದಲ್ಲಿದ್ದಾರೆ. ಆಪರೇಷನ್ ಕಮಲದ ಮರ್ಜಿಗೆ ಬಿದ್ದು ಶಾಸಕ ಸ್ಥಾನವನ್ನೂ ಕಳೆದುಕೊಂಡಿರೋ ನಾಗರಾಜ್ ಸಿನಿಮಾ ನಿರ್ಮಾಪಕನಾಗಲು ಮನಸು ಮಾಡಿದಂತಿದೆ!


ಕಾಂಗ್ರೆಸ್ ಪಕ್ಷಕ್ಕೆ ರೆಬೆಲ್ ಆಗಿ ಮುಂಬೈ ಮುಂತಾದೆಡೆಗಳಲ್ಲಿ ಸುತ್ತಾಡಿದ್ದವರು ಎಂಟಿಬಿ ನಾಗರಾಜ್. ಹೊಸಕೋಟೆ ಶಾಸಕರಾಗಿದ್ದ ನಾಗರಾಜ್ ಅಭಿವೃದ್ಧಿ ಕಾರ್ಯಗಳಿಂದ ಅದೆಷ್ಟು ಸದ್ದು ಮಾಡಿದರೋ ದೇವರೇ ಬಲ್ಲ. ಆದರೆ ರೆಬೆಲ್ ಆಗೋ ಮೂಲಕ ಒಂದಷ್ಟು ಪ್ರಚಾರ ಗಿಟ್ಟಿಸಿಕೊಂಡು, ಈ ರಾಜಕೀಯ ಪಲ್ಲಟಗಳ ನಡುವೆಯೇ ಹನ್ನೆರಡು ಕೋಟಿಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸೋ ಮೂಲಕ ಎಲ್ಲರೂ ಕಂಗಾಲಾಗುವಂತೆ ಮಾಡಿದ್ದರು. ಜೊತೆಗೆ ದೇಶದ ಹಣವಂತ ರಾಜಕಾರಣಿಯಾಗಿಯೂ ಸದ್ದು ಮಾಡಿದ್ದರು. ಇಂಥಾ ಸಾವಿರಾರು ಕೋಟಿಗಳ ಕುಳದ ನೆತ್ತಿ ಸವರಿ ಸಿನಿಮಾ ನಿರ್ಮಾಪಕನಾಗುವಂತೆ ಮಾಡಿದ್ದು ಎಂಟಿಬಿ ನಾಗರಾಜ್ ಗೆಣೆಕಾರ. ಕೌರವ ಬಿ ಸಿ ಪಾಟೀಲ್ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ!


ಬಿಸಿ ಪಾಟೀಲ್ ಮತ್ತು ಎಂಟಿಬಿ ನಾಗರಾಜ್ ಒಂದೇ ದೋಣಿಯ ಪಯಣಿಗರು. ರಾಜಕೀಯವಾಗಿ ದೂರ ಪಯಣದ ಕನಸು ಕಂಡಿದ್ದ ಇವರಿಬ್ಬರು ಕುಕ್ಕರಿಸಿದ್ದ ದೋಣಿಯೂ ತೂತುಬಿದ್ದಿದೆ. ರೆಬೆಲ್ ಆಗಿದ್ದಕ್ಕೆ ಬಿಜೆಪಿ ಕಡೆಯಿಂದ ಅದೆಷ್ಟು ಇಡುಗಂಟು ಸಿಕ್ಕಿತೋ ಗೊತ್ತಿಲ್ಲ. ಆದರೆ ಇಬ್ಬರೂ ಶಾಸಕ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಸದ್ಯ ಅತ್ತ ಅಧಿಕಾರವೂ ಇಲ್ಲದೇ ಇತ್ತ ಮಾಡಲು ಬೇರೆ ಕ್ಯಾಮೆಯೂ ಇಲ್ಲದೆ ಖಾಲಿ ಕೂತಿರೋ ಬಿ ಸಿ ಪಾಟೀಲರು ಎಚಿಟಿಬಿಗೆ ಸಿನಿಮಾ ನಿರ್ಮಾಣ ಮಾಡೋ ಅಮೂಲ್ಯ ಸಲಹೆ ಕೊಟ್ಟಿದ್ದಾರಂತೆ.


ಇದರ ಜೊತೆಗೇ ಕಾಸು ಹಾಕಿ ವಾಪಾಸು ತೆಗೆಯೋ ಒಂದಷು ಮಾರ್ಗಗಳನ್ನು ಗೆಳೆಯ ಎಚಿಟಿಬಿಗೆ ಪಾಟೀಲರು ಪರಿಚಯಿಸಿದ್ದಾರಂತೆ. ಇದೆಲ್ಲವನ್ನು ಕೇಳಿದ ವ್ಯವಹಾರ ಚತುರ ನಾಗರಾಜ್ ಆನಂದತುಂದಿಲರಾಗಿ ಒಪ್ಪಿಗೆ ಸೂಚಿಸಿದ್ದಾರಂತೆ. ಈಗಾಗಲೇ ನಾಗರಾಜ್ ಒಂದಷ್ಟು ಕಥೆಗಳನ್ನೂ ಕೇಳಿಯಾಗಿದೆಯಂತೆ. ಇಷ್ಟರಲ್ಲಿಯೇ ಎಂಟಿಬಿ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರಲಿರೋ ಬಿಗ್ ಬಜೆಟ್ ಚಿತ್ರ ಯಾವುದೆಂಬ ವಿಚಾರ ಜಾಹೀರಾಗಲಿದೆ.

LEAVE A REPLY

Please enter your comment!
Please enter your name here