ಸಿ.ಟಿ ರವಿ ರಾಜೀನಾಮೆ ಮೂಲಕ ಸಿಡಿದೆದ್ದ ಭಿನ್ನಮತ! ಒಳಗೊಳಗೇ ಒಂದಾಗಿದೆ ಬಿಜೆಪಿಯ ಯಡ್ಡಿ ವಿರೋಧಿ ಪಾಳೆಯ!

[adning id="4492"]

ಒಳಗೊಳಗೇ ಒಂದಾಗಿದೆ ಬಿಬೆಪಿಯ ಯಡ್ಡಿ ವಿರೋಧಿ ಪಾಳೆಯ!
ರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಹಕ್ಯಾಟಗಳನ್ನು ನೋಡುತ್ತಾ ರೋಸತ್ತಿದ್ದ ಕರ್ನಾಟಕದ ಜನತೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರುತ್ತಲೇ ಇನ್ನಾದರೂ ಎಲ್ಲ ಸರಾಗವಾಗಬಹುದೆಂಬ ನಿರೀಕ್ಷೆ ಹೊಂದಿದ್ದರು. ಬಿಜೆಪಿ ಆಪರೇಷನ್ ಕಮಲ ನಡೆಸಿ ಅಧಿಕಾರ ಹಿಡಿದಿದ್ದರಾಚೆಗೆ ಬಹುಮತದಿಂದ ಪಕ್ಷವೊಂದು ಅಧಿಕಾರ ಹಿಡಿದರೆ ಈ ಅಸಮಾಧಾನ, ಭಿನ್ನಮತದಂಥಾ ದರಿದ್ರ ವಿದ್ಯಮಾನಗಳಿಂದ ಮುಕ್ತಿ ಸಿಗುತ್ತದೆಂಬ ಆಸೆ ಹೊಂದಿದ್ದರು. ಆದರೆ ಯಡಿಯೂರಪ್ಪನವರ ಸಾರಥ್ಯದಲ್ಲಿ ಜನಸಾಮಾನ್ಯರಲ್ಲಿದ್ದ ಅಂಥಾ ಆಸೆಗಳಿಗೆಲ್ಲ ಸಮರ್ಥವಾಗಿ ಎಳ್ಳು ನೀರು ಬಿಡಲಾಗಿದೆ!


ಯಡಿಯೂರಪ್ಪನವರು ಅಪರಿಮಿತ ಉತ್ಸಾಹದಿಂದ ಸಿಎಂ ಆಗಿ ಪ್ರಮಾಣವಚನ ಪಡೆದ ಘಳಿಗೆಯಿಂದಲೇ ಬಿಜೆಪಿಯೊಳಗೆ ಅಸಮಾಧಾನ, ಅಸಹನೆಗಳು ಕೊತಗುಡಲಾರಂಭಿಸಿದ್ದವು. ಆದರೂ ಮೋದಿ, ಶಾ ಅದೇನೀಓ ಮಾಡಿ ಬಿಡುತ್ತಾರೆಂಬ ನಿರೀಕ್ಷೆ ಒಂದಷ್ಟು ಕಾಲ ಎಲ್ಲವನ್ನೂ ತಣ್ಣಗಿರಿಸಿತ್ತು. ಆದರೀಗ ಸಚಿವ ಸಂಪುಟ ರಚನೆಯಾಗುತ್ತಲೇ ಬಂಡಾಯದ ಬೇಗುದಿ ಕಮಲದ ಪಕಳೆಗಳನ್ನೇ ಬಾಡಿಸಿ ಬಿಡುವಷ್ಟು ತೀವ್ರಗೊಂಡಿದೆ. ಲಾಗಾಯ್ತಿನಿಂದಲೂ ಬಿಜೆಪಿಯೊಳಗೇ ಯಡಿಯೂರಪ್ಪ ವಿರುದ್ಧ ಒಂದುಗೂಡಿದ್ದ ಯಡ್ಡಿ ವಿರೋಧಿ ಸಿಂಡಿಕೇಟ್ ಈಗ ಸಮರ್ಥವಾಗಿಯೇ ಒಂದಾಗಿದೆ. ಅದಕ್ಕೆ ಪೂರಕವಾದ ಸನ್ನಿವೇಶಗಳೂ ಕೂಡಾ ಸಾಂಗವಾಗಿಯೇ ನಡೆಯುತ್ತಿದೆ.


ಇದೀಗ ಇಂಥಾ ಅಸಹನೆಗಳೆಲ್ಲವೂ ಸಿಟಿ ರವಿ ಸಚಿವನಾಗಿ ಅಧಿಕಾರ ವಹಿಸಿಕೊಂಡು ಗಂಟೆ ಕಳೆಯೋದರೊಳಗೆ ರಾಜೀನಾಮೆ ನೀಡೋ ಮೂಲಕ ಆಸ್ಫೋಟಗೊಂಡಿದೆ. ರಾಜೀನಾಮೆ ಪತ್ರವನ್ನು ಯಡಿಯೂರಪ್ಪನವರಿಗೆ ತಲುಪಿಸಿರೋ ರವಿ, ತಮ್ಮ ಈ ಸ್ಥಾನವನ್ನು ಅತೃಪ್ತರಿಗೆ ಕೊಟ್ಟು ಸುಸೂತ್ರವಾಗಿ ಅಧಿಕಾರ ನಡೆಸುವಂತೆ ಸಲಹೆಯನ್ನೂ ನೀಡಿದ್ದಾರೆನ್ನಲಾಗಿದೆ. ಹಾಗಂತ ಯಡಿಯೂರಪ್ಪನವರಿಗಾಗಿ ರವಿ ಮಹಾ ತ್ಯಾಗ ಮಾಡಿಬಿಟ್ಟರು ಅಂದುಕೊಳ್ಳುವಂತಿಲ್ಲ. ಇದು ಯಡಿಯೂರಪ್ಪನ ವಿರುದ್ಧ ಕುದಿಯುತ್ತಿರೋ ವಿರೋಧಿ ಪಟಾಲಮ್ಮಿನ ಕಡೆಯಿಂದ ಸಿಎಂ ಯಡ್ಡಿಗೆ ಬಿದ್ದ ಚೊಚ್ಚಲ ಭಹಿರಂಗ ಗುನ್ನ!


ಅಷ್ಟಕ್ಕೂ ಸಿಎಂ ಯಡಿಯೂರಪ್ಪ ತನ್ನ ಸುತ್ತಲೇ ಇರುವ ಪಾರಂಪರಿಕ ಸ್ವಪಕ್ಷೀಯರೇ ಆದ ವಿರೋಧಿ ಪಾಳೆಯವನ್ನು ಅಧಿಕಾರ ಕೊಟ್ಟೂ ಮೂಲೆಗೆ ಗದುಮುವ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಈ ನಿಟ್ಟಿನಲ್ಲಿ ಪದ್ಮನಾಭನಗರದ ಸಾಮ್ರಾಟ್ ಅಶೋಕ್‌ರ ರಥದ ಗಾಲಿಯನ್ನೂ ಯಡ್ಡಿ ಬುದ್ದಿವಂತಿಕೆಯಿಂದಲೇ ಮುರಿದಿದ್ದಾರೆ. ಅಶೋಕ್‌ಗೆ ಕೂಡಾ ಸಚಿವ ಸ್ಥಾನ ಕೊಟ್ಟಿದ್ದಾರೆ. ಆದರೆ ಆ ಸಚಿವಗಿರಿಯ ಬಗ್ಗೆ ಖುದ್ದು ಅಶೋಕ್‌ರಿಗೆ ಅಸಮಾಧಾನವಿದೆ. ಇದನ್ನು ನೇರವಾಗಿ ಯಡ್ಡಿ ಮುಂದೆಯೇ ಹೇಳಿಕೊಳ್ಳಲಾಗಿದೆ. ಹೇಳಿಕೇಳಿ ಅಶೋಕ್ ಬಿಜೆಪಿಯ ಏಕೈಕ ಒಕ್ಕಲಿಗ ನಾಯಕರೆಂಬಂತೆ ಗುರುತಿಸಿಕೊಂಡಿದ್ದವರು. ಅವರಿಗೆ ಬೆಂಗಳೂರು ನಗರದಲ್ಲಿಯೇ ಮತ್ತೋರ್ವ ಒಕ್ಕಲಿಗ ನಾಯಕ ಬಿಜೆಪಿಯಲ್ಲಿ ಹುಟ್ಟಿಕೊಳ್ಳೋದು ಇಷ್ಟವಿಲ್ಲ. ಆದರೆ ಯಡ್ಡಿ ಅಶ್ವತ್ ನಾರಾಯಣ್‌ಗೆ ಪ್ರಧಾನವಾಗಿ ಮಣೆ ಹಾಕೋ ಮೂಲಕ ಅಶೋಕ್‌ಗೆ ಟಾಂಗ್ ನೀಡಿದ್ದಾರೆ. ಇದುವೇ ಯಡ್ಡಿ ವಿರೋಧಿ ಪಟಾಲಮ್ಮು ಒಗ್ಗಟ್ಟಾಗಿ ಅಖಾಡಕ್ಕಿಳಿಯುವಂತಾಗಿದೆ. ಆ ಪಡೆಯ ನೇರ ಸಮರದ ಮುನ್ಸೂಚನೆ ಎಂಬಂತೆ ಸಿ.ಟಿ ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.


ಅಷ್ಟಕ್ಕೂ ಈ ಸಿ.ಟಿ ರವಿಗೂ ಯಡಿಯೂರಪ್ಪಗೂ ಎಣ್ಣೆ ಸೀಗೇಕಾಯಿಯಂಥಾ ಸಂಬಂಧವಿದೆ. ದಶಕಗಳ ಹಿಂದೆ ಜೈಲಿಗೆ ಹೋಗಿ ಬಂದು ಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡು ದೈನೇಸಿ ಸ್ಥಿತಿಯಲ್ಲಿದ್ದರಲ್ಲಾ ಯಡಿಯೂರಪ್ಪ? ಆ ಕಾಲದಲ್ಲಿ ಬಿಜೆಪಿಯದ್ದೊಂದು ಪಟಾಲಮ್ಮು ಯಡ್ಡಿ ವಿರುದ್ಧ ನಿಂತಿತ್ತು. ಅದರಲ್ಲಿ ದಿವಂಗತ ಅನಂತ್ ಕುಮಾರ್ ಅವರಿದ್ದರು. ಅವರ ಹಿಂದೆ ಅಶೋಕ್ ಮತ್ತು ಸಿ.ಟಿ ರವಿ ಕೂಡಾ ಇದ್ದದ್ದು ಸುಳ್ಳೇನಲ್ಲ. ಯಡಿಯೂರಪ್ಪ ಬಿಜೆಪಿಯಿಂದ ಹೊರ ಹೋಗಿ ಸ್ವತಂತ್ರ ಪಕ್ಷ ಕಟ್ಟುವ ಸೂಚನೆ ಸಿಗುತ್ತಲೇ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ನಿಂತು ‘ಯಡಿಯೂರಪ್ಪ ಹೊರ ಹೋದರೆ ಬಿಜೆಪಿಗೆ ಕವಿದ ಗ್ರಹಣ ಕಳೆಯುತ್ತೆ’ ಎಂಬರ್ಥದ ಬಾಂಬು ಸಿಡಿಸಿ ಬಿಟ್ಟಿದ್ದರು. ಇದನ್ನು ಕೇಳಿ ಯಡ್ಡಿಯ ಮೀಸೆಯ ಮೊನೆಯಲ್ಲಿ ಕಡುಕೋಪ ಹಣಕಿ ಹಾಕಿತ್ತು.


ಇದೆಲ್ಲ ಆಂತರಿಕ ವಿದ್ಯಮಾನಗಳು ಸಚಿವ ಸಂಪುಟದಲ್ಲಿಯೂ ಪ್ರತಿಫಲಿಸುತ್ತಿವೆ. ಒಂದು ಕಾಲದಲ್ಲಿ ತನ್ನಿಂದಲೇ ಅಧಿಕಾರ ಹಿಡಿದು ತನಗೇ ತಿರುಮಂತ್ರ ಹೇಳಿದ್ದ ಮಂದಿಯನ್ನೆಲ್ಲ ಮಸಾಜು ಮಾಡಿದಷ್ಟೇ ನಯವಾಗಿ ತುಳಿದು ಮೂಲೆಗೆ ಗದುಮುವ ಬುದ್ಧಿವಂತಿಕೆಯನ್ನೂ ಯಡಿಯೂರಪ್ಪ ಪ್ರಯೋಗಿಸುತ್ತಿರುವಂತಿದೆ. ಆದರೆ ಸಿ.ಟೆ ರವಿ ರೆಬೆಲ್ ಆಗೋ ಮೂಲಕ ಅದೆಲ್ಲವೂ ಮತ್ತೆ ಯಡ್ಡಿಗೇ ಸುತ್ತಿಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿವೆ. ಅದು ರಾಜ್ಯದ ಜನತೆಗೆ ಮತ್ತೆ ರಾಜಕೀಯ ಮೇಲಾಟದ ಅಸಹ್ಯ ನೋಡಬೇಕಾದ ದುರ್ದಿನಗಳ ಲಕ್ಷಣವೂ ಹೌದು!

[adning id="4492"]

LEAVE A REPLY

Please enter your comment!
Please enter your name here