ನನ್ನಪ್ರಕಾರ: ಭಿನ್ನ ಕಥೆಯೊಂದಿಗೆ ಕಾಡುವ ಸೂಪರ್ ಸಸ್ಪೆನ್ಸ್ ಥ್ರಿಲ್ಲರ್!

[adning id="4492"]

ಚಿತ್ರತಂಡ ಪ್ರದರ್ಶಿಸುತ್ತಾ ಬಂದಿದ್ದ ಕ್ರಿಯೇಟಿವ್ ಅಂಶಗಳಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿತ್ರ ನನ್ನಪ್ರಕಾರ. ಭಿನ್ನ ಜಾಡಿ ಸಸ್ಪೆನ್ಸ್ ಥ್ರಿಲ್ಲರ್ ಎಂಬ ಸುಳಿವಿನೊಂದಿಗೆ ಸಾಗಿ ಬಂದಿದ್ದ ಈ ಚಿತ್ರವೀಗ ಪ್ರೇಕ್ಷಕರ ಮುಂದೆ ಬಂದಿದೆ. ಒಂದು ಸತ್ಯಕ್ಕೆ ಬರಿಗಣ್ಣಿಗೆ ಕಾಣಿಸೋದು ಒಂದು ಮುಖ. ಆದರೆ ಆಂತರ್ಯದಲ್ಲಿ ಅದಕ್ಕೆ ನಾನಾ ಮುಖಗಳಿರುತ್ತವೆ. ಒಂದು ಕೊಲೆಯ ಸುತ್ತಾ ಅಂಥಾ ಸತ್ಯದ ನಾನಾ ಮುಖಗಳ ದರ್ಶನ ಮಾಡಿಸುತ್ತಲೇ ಮಜವಾದ ಅನುಭವವನ್ನು ನೋಡುಗರಿಗೆ ನೀಡುವಲ್ಲಿ ನನ್ನಪ್ರಕಾರ ಚಿತ್ರ ಗೆದ್ದಿದೆ.


ಒಂದು ಕೊಲೆ ಮತ್ತು ಅದರ ತನಿಖೆಯ ಸುತ್ತಾ ಸಾಗುವ ಸಸ್ಪೆನ್ಸ್ ಥ್ರಿಲ್ಲರ್ ಜಾಡಿನ ಕಥೆಯನ್ನೊಳಗೊಂಡಿರೋ ಚಿತ್ರ ನನ್ನಪ್ರಕಾರವೆಂಬ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅದರಂತೆಯೇ ಇಡೀ ಸಿನಿಮಾ ಮೂಡಿ ಬಂದಿದೆ. ಆದರೆ ಅದರ ಥ್ರಿಲ್ಲಿಂಗ್ ಅನುಭವ ಮಾತ್ರ ನೋಡಿದರೆ ಮಾತ್ರವೇ ದಕ್ಕುವಂಥಾದ್ದು. ನಿರ್ದೇಶಕ ವಿನಯ್ ಬಾಲಾಜಿ ಮೊದಲ ಪ್ರಯತ್ನದಲ್ಲಿಯೇ ವಿಭಿನ್ನ ಹಾದಿಯಲ್ಲಿ ಗುರುತು ಮೂಡಿಸಿದ್ದಾರೆ. ಜಾನರರ್ ಸಸ್ಪೆನ್ಸ್ ಥ್ರಿಲ್ಲರ್‌ನದ್ದೇ ಆದರೂ ಇದು ಮೂಡಿ ಬಂದಿರೋ ರೀತಿ ಮಾತ್ರ ಎಲ್ಲ ಚೌಕಟ್ಟುಗಳನ್ನೂ ಮೀರಿದಂಥಾದ್ದು.


ಅದೊಂದು ಭೀಕರ ಅಪಘಾತ. ಅದರ ತೀವ್ರತೆ ಸಾರುವಂತೆ ಅರ್ಧಂಬರ್ಧ ಉರಿದು ಬಿದ್ದಿರೋ ಕಾರು. ಅದರ ಬಾಜಿನಲ್ಲಿಯೇ ಒಂದು ಶವ. ಅಲ್ಲಿ ಬಂದು ನಿಂತ ಸಾಮಾನ್ಯರಿರಲಿ, ಪೊಲೀಸ್ ಅಧಿಕಾರಿಗಳ ಪಾಲಿಗೂ ಇದು ಅಪಘಾತವೋ ಅಥವಾ ಕೊಲೆಯೋ ಎಂಬಂಥಾ ಗೊಂದಲ ಕಾಡುವಂತಾ ವಾತಾವರಣ ಅಲ್ಲಿನದ್ದು. ಇದನ್ನು ಭೇದಿಸಲು ಅಖಾಡಕ್ಕಿಳಿಯೋ ಖಡಕ್ ಪೊಲೀಸ್ ಅಧಿಕಾರಿ ಅಶೋಕ್ ಎಂಬ ಪಾತ್ರಕ್ಕೆ ಕಿಶೋರ್ ಜೀವ ನೀಡಿದ್ದಾರೆ. ಹಾಗೆ ಶುರುವಾಗೋ ತನಿಖೆಯ ಹಾದಿಗೆ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕುತೂಹಲಗಳು ಪೋಣಿಸಿಕೊಳ್ಳುತ್ತಾ ಸಾಗುತ್ತವೆ.


ಇನ್ನೇನು ಈ ಕೊಲೆ ತನಿಖೆ ಬಗ್ಗೆ ಸತ್ಯವೊಂದು ಗೋಚರವಾಗಿ ತಾರ್ಕಿಕ ಅಂತ್ಯ ಸಿಕ್ಕಿತೆಂಬಷ್ಟರಲ್ಲಿ ಮತ್ತೊಂದು ಸತ್ಯ ಎದುರು ನಿಂತು ಗೊಂದಲವಾಗಿ ಕಾಡುತ್ತದೆ. ಹೀಗೆ ಚಮ್ಕಾಯಿಸುತ್ತಾ ಸಾಗೋ ಕಥೆ ಪ್ರೇಕ್ಷಕರನ್ನೂ ಕೂಡಾ ತನ್ನೊಳಗೊಂದಾಗಿಸಿಕೊಂಡು ಕರೆದೊಯ್ಯುತ್ತದೆ. ಆದರೆ ಇದೇ ರಹಸ್ಯ ಅಂತ ನೋಡುಗರು ನಿಡುಸುಯ್ಯುವ ಮುನ್ನವೇ ಮತ್ತೊಂದು ರೋಚಕ ತಿರುವುಗಳೊಂದಿಗೆ ತೆರೆದುಕೊಳ್ಳುತ್ತಾ ಸಾಗೋ ಈ ಕಥೆ ಕೂಡಾ ಮೈ ಕೈ ತುಂಬಿಕೊಂಡಿರುವಂಥಾದ್ದು. ಚೂರೇ ಚೂರು ಎಚ್ಚರ ತಪ್ಪಿದರೂ ಕಥೆಯ ಬಿಂದುವಿಗಾಗಿಯೇ ಹುಡುಕಾಟ ನಡೆಸಬೇಕಾಗುವಂಥಾ ಸಂಕೀರ್ಣ ಕಥೆಯನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಆದರೂ ಎಲ್ಲಿಯೂ ಸೂತ್ರ ತಪ್ಪದಂತೆ, ಕುತೂಹಲ ಕಡಿಮೆಯಾಗದಂತೆ ಕಟ್ಟಿ ಕೊಡುವಲ್ಲಿಯೂ ಯಶ ಕಂಡಿದ್ದಾರೆ.


ಎಣಿಕೆಯಂತೆಯೇ ವಿನಯ್ ಬಾಲಾಗಿ ಸ್ಕ್ರೀನ್ ಪ್ಲೇನಲ್ಲಿ ಕಮಾಲ್ ಮಾಡಿದ್ದಾರೆ. ಒಂದೊಳ್ಳೆ ಕಂಟೆಂಟಿನ ಮೂಲಕವೇ ದೃಷ್ಯ ಕಟ್ಟಿದ್ದಾರೆ. ಅದನ್ನು ಕಿಶೋರ್, ಪ್ರಿಯಾಮಣಿ ಮತ್ತು ಮೊಯೂರಿ ಚೆಂದದ ನಟನೆಯ ಮೂಲಕ ಶೃಂಗರಿಸಿದ್ದಾರೆ. ಇವರಿಗೆ ನಿರಂಜನ್, ಗಿರಿಜಾ ಲೋಕೇಶ್ ಮುಂತಾದವರೂ ಸಾಥ್ ಕೊಟ್ಟಿದ್ದಾರೆ. ಪ್ರಿಯಾಮಣಿ, ಕಿಶೋರ್ ಇಡೀ ಪಾತ್ರವನ್ನು ಆವರಿಸಿಕೊಂಡು ನಟಿಸಿದ್ದರೆ ಮಯೂರಿ ಕೂಡಾ ತಮ್ಮ ಎರಡು ಶೇಡುಗಳ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ವಿನಯ್ ಬಾಲಾಜಿ ಈ ಚಿತ್ರದ ಮೂಲಕ ಹೊಸಾ ಅಲೆಯನ್ನೇ ಸೃಷ್ಟಿಸಿದ್ದಾರೆ. ಇದು ಯಾವ ವರ್ಗದ ಪ್ರೇಕ್ಷಕರೇ ನೋಡಿದರೂ ತೃಪ್ತ ಭಾವ ಮೂಡಿಸುವಂಥಾ ಸೂಪರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ.

ರೇಟಿಂಗ್: 4/5

[adning id="4492"]

LEAVE A REPLY

Please enter your comment!
Please enter your name here