ರಾಂಧವನಿಗಾಗಿ ಅರಸಿ ಬಂದಳು ಟೈಟಾನಿಕ್ ಚೆಲುವೆ!

ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ರಾಂಧವ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಮೂಲಕ ಎರಡು ವರ್ಷಕ್ಕೂ ಹೆಚ್ಚು ಕಾಲದ ಪರಿಶ್ರಮಗಳೆಲ್ಲವೂ ಫಲ ನೀಡೋ ಘಳಿಗೆಗಾಗಿ ಕ್ಷಣಗಣನೆ ಆರಂಭವಾಗಿದೆ. ಆರಂಭ ಕಾಲದಿಂದಲೂ ಥರ ಥರದಲ್ಲಿ ಸೆಳೆಯುತ್ತಾ ಬಂದು, ತಡವಾದಷ್ಟೂ ಕುತೂಹಲ ಕೊತಗುಡುವಂತೆ ಮಾಡುತ್ತಾ ಸಾಗಿ ಬಂದಿರೋದು ರಾಂಧವನ ಅಸಲೀ ಶಕ್ತಿ. ಬಿಡುಗಡೆಯ ಈ ಕ್ಷಣಗಳನ್ನೆಲ್ಲ ಭರವಸೆಯ ಭಾವಗಳೇ ಶೃಂಗರಿಸಿವೆ ಎಂದರೆ ಅದು ಖಂಡಿತಾ ರಾಂಧವನ ಕಂಟೆಂಟಿನದ್ದೇ ಮಹಾತ್ಮೆ. ಈ ಚಿತ್ರದ ಕಥೆ ಸೇರಿದಂತೆ ಎಲ್ಲವೂ ವಿಶೇಷ ಅನ್ನೋದನ್ನು ಈಗಾಗಲೇ ಚಿತ್ರತಂಡ ಕಾರ್ಯರೂಪದಲ್ಲಿಯೇ ಸಾಬೀತು ಮಾಡಿದೆ. ಅದರ ನಿಜವಾದ ಸವಿಯೆಂಥಾದ್ದೆಂಬುದು ಪ್ರೇಕ್ಷಕರ ಅನುಭವಕ್ಕೆ ದಕ್ಕೋದಷ್ಟೇ ಈಗ ಬಾಕಿ ಉಳಿದುಕೊಂಡಿದೆಯಷ್ಟೆ!


ಇದು ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಭುವನ್ ನಾಯಕನಾಗಿ ನಟಿಸಿರೋ ಮೊದಲ ಚಿತ್ರ. ನಿರ್ದೇಶಕ ಸುನೀಲ್ ಆಚಾರ್ಯ ಇಲ್ಲಿ ಕೇವಲ ನಾಯಕನ ಪಾತ್ರವನ್ನು ಮಾತ್ರವಲ್ಲದೇ ಇಡೀ ಚಿತ್ರದ ಸಣ್ಣ ಸಣ್ಣ ವಿಚಾರವನ್ನೂ ಕೂಡಾ ಕಣ್ಣಲ್ಲಿ ಕಣ್ಣಿಟ್ಟು ರೂಪಿಸಿದ್ದಾರೆ. ಈ ಸಿನಿಮಾದ ಕಥೆ ಬರೆದು ಅದಕ್ಕೆ ಸಿನಿಮಾ ರೂಪ ನೀಡಲು ಸುನೀಲ್ ಆಚಾರ್ಯ ಎಷ್ಟು ಸಮಯ ತೆಗೆದುಕೊಂಡಿದ್ದರೋ, ಅಷ್ಟೇ ಸಮಯವನ್ನು ತಾರಾಗಣದ ಆಯ್ಕೆಗೂ ತೆಗೆದುಕೊಂಡಿದ್ದರಂತೆ. ಆಯಾ ಪಾತ್ರಕ್ಕೆ ಯಾವ ನಟನಟಿಯರು ಒಗ್ಗಿಕೊಳ್ಳಬಹುದೆಂದು ಚರ್ಚೆ ನಡೆಸಿ ಅಳೆದೂ ತೂಗಿಯೇ ಇದರ ತಾರಾಗಣವನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಆದರೆ ಈ ಕಥೆಯಲ್ಲಿ ಪ್ರಧಾನ್ಯತೆ ಹೊಂದಿರೋ ಪಾತ್ರವೊಂದು ಮಾತ್ರ ಕಡೇ ಘಳಿಗೆಯವರೆಗೂ ಕಗ್ಗಂಟಾಗಿ ಉಳಿದು ಹೋಗಿತ್ತು. ಅದು ಬ್ರಿಟಿಷ್ ಮಹಿಳೆಯ ಪಾತ್ರ!


ಈ ಪಾತ್ರಕ್ಕೆ ಯಾವ ನಟಿಯನ್ನು ಆಯ್ಕೆ ಮಾಡಿಕೊಳ್ಳೋದೆಂಬ ಬಗ್ಗೆ ಚಿತ್ರತಂಡದೊಳಗೆ ನಡೆದಿದ್ದ ಚರ್ಚೆಗಳು ಒಂದೆರಡಲ್ಲ. ಕಡೆಗೂ ಈ ಪಾತ್ರಕ್ಕೆ ಹಾಲಿವುಡ್‌ನ ಪ್ರಖ್ಯಾತ ಚಿತ್ರ ಟೈಟಾನಿಕ್ ಹೀರೋಯಿನ್ ಆಗಿದ್ದ ಕೇಟ್ ವಿನ್ಸ್‌ಲೆಟ್ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆ ನಂತರ ಶುರುವಾಗಿದ್ದು ಅವರನ್ನು ಪತ್ತೆ ಹಚ್ಚಿ ಒಪ್ಪಿಸೋ ಸಾಹಸ. ಅಂತೂ ಬೇಗನೆ ಕೇಟ್‌ರನ್ನು ಒಪ್ಪಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದರು. ಅದರಂತೆ ಕೇಟ್ ಕೂಡಾ ಈ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರಂತೆ. ಅಂದಹಾಗೆ ಕೇಟ್ ನಿರ್ವಹಿಸಿರೋ ಬ್ರಿಟಿಶ್ ಮಹಿಳೆಯ ಪಾತ್ರದ ಕಾಲಾವಧಿ ಚಿಕ್ಕದಿದ್ದರೂ ಅದು ಉಂಟುಮಾಡೋ ಪರಿಣಾಮ ಮಾತ್ರ ದೊಡ್ಡದು. ಅದೇನನ್ನೋದು ಈ ವಾರವೇ ಎಲ್ಲರೆದುರು ಅನಾವರಣಗೊಳ್ಳಲಿದೆ.

LEAVE A REPLY

Please enter your comment!
Please enter your name here