ಬಿಗ್‌ಬಾಸ್ ಪ್ರಥಮ್‌ಗೆ ತೊಡೆಕಚ್ಚೋ ಕಾಯಿಲೆ ವಾಸಿಯಾಯ್ತಂತೆ! ಎರಡೂವರೆ ವರ್ಷದ ಕಿತ್ತಾಟಕ್ಕೆ ಸುಖಾಂತ್ಯ!

ಎರಡೂವರೆ ವರ್ಷದ ಕಿತ್ತಾಟಕ್ಕೆ ಸುಖಾಂತ್ಯ!
ಅಂಡೆಪಿರ್ಕಿಗಳನ್ನೆಲ್ಲ ಸೆಲೆಬ್ರಿಟಿಗಳ ಗೆಟಪ್ಪಿನಲ್ಲಿ ಉತ್ಪಾದಿಸಿ ಕಳಿಸೋ ಬರಗೆಟ್ಟ ಶೋ ಬಿಗ್‌ಬಾಸ್. ಈ ಶೋ ಕನ್ನಡಕ್ಕೆ ಒಗ್ಗುವಂಥಾದ್ದಲ್ಲ ಎಂಬ ಹಳಹಳಿಕೆಯ ನಡುವೆಯೇ ಈಗ ಮತ್ತೊಂದು ಸೀಜನ್ನಿಗೆ ತಯಾರಾಗುತ್ತಿದೆ. ಅತ್ತ ಈ ಶೋನ ದಯೆಯಿಂದ, ಮಾಧ್ಯಮಗಳ ಟಿಆರ್‌ಪಿ ತೆವಲಿನಿಂದ ಹುಚ್ಚಾ ವೆಂಕಟ ಪೂರ್ತಿ ಹುಚ್ಚನಂತೆ ಚೆನ್ನೈನ ಹಾದಿಬೀದಿಗಳಲ್ಲಿ ಅಂಡಲೆಯುತ್ತಿದ್ದಾನೆ. ಇತ್ತ ಆತನ ಖಾಸಾ ಸಹೋದರನಂತಿರೋ ಪ್ರಥಮ್‌ಗೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಹಳೇ ಹುಚ್ಚುಗಳೆಲ್ಲ ಕರಗಿ, ತೊಡೆಕಚ್ಚೋ ಕಾಯಿಲೆಯೂ ವಾಸಿಯಾಗಿರೋ ಸುದ್ದಿಯೊಂದು ಹೊರಬಿದ್ದಿದೆ. ಈ ಮೂಲಕ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಭುವನ್ ಪೊನ್ನಣ್ಣ ಮತ್ತು ಪ್ರಥಮ್ ನಡುವೆ ನಡೆಯುತ್ತಿದ್ದ ಎರಡೂವರೆ ವರ್ಷಗಳ ಕಿತ್ತಾಟ, ಕಾನೂನು ಸಮರಗಳೆಲ್ಲವೂ ಸುಖಾಂತ್ಯಗೊಂಡಂತಿದೆ!


ಈ ಸುಖಾಂತ್ಯದ ಕಥೆ ಹೇಳುವ ಮುಂಚೆ ಆರಂಭದ ಸ್ಟೋರಿ ಹೇಳೋದುತ್ತಮ. ಬಿಗ್‌ಬಾಸ್ ಶೋನಲ್ಲಿ ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ ಬೆನ್ನಿಗೇ ಆ ವಾಹಿನಿ ಸಂಜು ಮತ್ತು ನಾನು ಅಂತೊಂದು ಧಾರಾವಾಹಿ ಶುರು ಮಾಡಿತ್ತು. ಇದರಲ್ಲಿ ಅದೇ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಸಂಜನಾ, ಭುವನ್ ಮತ್ತು ಪ್ರಥಮ್ ನಾಯಕ ನಾಯಕಿಯರಾಗಿದ್ದರು. ಒಂದಷ್ಟು ಕಾಲ ನಡೆದ ಈ ಧಾರಾವಾಹಿಯ ನಡುವೆ ಪ್ರಥಮ್‌ನ ಹರಾಕಿರಿಗಳು ನಡೆದೇ ಇದ್ದವು. ಆದರೆ ಈ ಧಾರಾವಾಹಿಯ ಕಡೇ ದಿನದ ಶೂಟಿಂಗಿನ ವೇಳೆ ನಡೆಯಬಾರದ್ದೊಂದು ಘಟನೆ ನಡೆದು ಹೋಗಿತ್ತು. ಸಂಜನಾ ವಿಚಾರದಲ್ಲಿ ಅದೇನೋ ಖ್ಯಾತೆ ಆರಂಭಿಸಿದ್ದ ಪ್ರಥಮ್ ಮಧ್ಯಪ್ರವೇಶ ಮಾಡಿದ ಭುವನ್‌ರ ತೊಡೆಕಚ್ಚಿ ಬಿಟ್ಟಿದ್ದ!


ಇಂಥಾದ್ದೊಂದು ಆಘಾತದಿಂದ ತತ್ತರಿಸಿದ್ದ ಭುವನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಪ್ರಥಮ್ ವಿರುದ್ಧ ಕೇಸು ದಾಖಲಿಸಿದ್ದರು. ನಂತರ ಪ್ರಥಮ್ ಕೂಡಾ ಭುವನ್ ವಿರುದ್ಧ ನಾನಾ ಆರೋಪಗಳನ್ನು ಮಾಡಿ ಕೇಸು ದಾಖಲಿಸಿದ್ದ. ಇದು ಕೋರ್ಟ್ ಕಟಕಟೆಯನ್ನೂ ಏರಿಕೊಂಡಿತ್ತು. ಪ್ರಥಮ್ ಭುವನ್‌ರ ತೊಡೆಕಚ್ಚಿ ಕಾಟ ಕೊಟ್ಟಿದ್ದಕ್ಕೆ ಪಕ್ಕಾ ಸಾಕ್ಷಾಧಾರಗಳೂ ಇದ್ದವು. ಆದರೆ ಆ ಕ್ಷಣಕ್ಕೆ ಭುವನ್ ವಿರುದ್ಧ ತಲೆಬುಡವಿಲ್ಲದ ಆರೋಪ ಮಾಡಿದ್ದ ಪ್ರಥಮ್ ಬಳಿ ಮಾತ್ರ ಆ ಬಗ್ಗೆ ಸಾಕ್ಷಿಗಳಿಗೆ ತತ್ವಾರವಿತ್ತು. ಇತ್ತ ಹೊರಜಗತ್ತಲ್ಲಿ ಭುವನ್ ವಿರುದ್ಧ ಅಬ್ಬರಿಸುತ್ತಲೇ ಒಳಗೊಳಗೇ ತಾನು ಕೇಸು ಸೋಲಬಹುದೆಂಬ ಭೀತಿಗೆ ಬಿದ್ದಿದ್ದ ಪ್ರಥಮ್ ನೇರವಾಗಿ ಭುವನ್‌ಗೊಂದು ಸಾರಿ ಕೇಳಿ ಕೇಸು ವಾಪಾಸು ತೆಗೆದುಕೊಂಡಿದ್ದರೆ ಈ ವಿವಾದ ಯಾವತ್ತೋ ಇತ್ಯರ್ಥವಾಗಿ ಬಿಡುತ್ತಿತ್ತು. ಆದರೆ ತಾನು ಕೇಸ್ ವಾಪಾಸು ತೆಗೆದುಕೊಂಡರೆ ತನ್ನದೇ ತಪ್ಪೆಂದು ಸಾಬೀತಾಗುತ್ತದೆಂದು ಹೆದರಿದಂತಿದ್ದ ಪ್ರಥಮ್ ತನಗೆ ಗೊತ್ತಿರೋ ರಾಜಕಾರಣಿಗಳು, ಚಿತ್ರರಂಗದ ಗಣ್ಯರ ಬಳಿಯೆಲ್ಲ ಕಾಡಿ ಬೇಡಿ ಭುವನ್‌ರನ್ನು ಥಂಡಾ ಹೊಡೆಸಲು ಇನ್ನಿಲ್ಲದಂಥಾ ಪ್ರಯತ್ನಗಳನ್ನೂ ನಡೆಸಿದ್ದ.


ಕಡೆಗೂ ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು, ಹಂಚಿಕೆದಾರರಾದ ಜಯಣ್ಣ ಮತ್ತು ಭೋಗೇಂದ್ರ ಮುಂದೆ ನಿಂತು ಪ್ರಥಮ್ ಹುಚ್ಚಾಟಗಳಿಗೊಂದು ಸಂಧಾನದ ರೂಪದ ಬ್ರೇಕ್ ಹಾಕಿದ್ದಾರೆ. ಇವರಿಬ್ಬರೂ ಪ್ರಥಮ್‌ಗೆ ತಿಳಿ ಹೇಳಿ ಕೇಸು ವಾಪಾಸ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಇದರನ್ವಯ ಪ್ರಥಮ್ ತಪ್ಪೊಪ್ಪಿಕೊಂಡಿದ್ದಾನೆ. ತೊಡೆಕಚ್ಚಿದ್ದಕ್ಕಾಗಿ ಸಾರಿ ಕೇಳಿದ್ದಾನೆ. ಈ ವಿವಾದದ ಸಂದರ್ಭದಲ್ಲಿ ಭುವನ್ ದನದ ಮಾಂಸ ತಿನ್ನುತ್ತಾರೆಂಬ ಆರೋಪವನ್ನೂ ಪ್ರಥಮ್ ಮಾಡಿದ್ದ. ಅದಕ್ಕೂ ಕೂಡಾ ಆತನೀಗ ಕ್ಷಮೆ ಕೇಳಿದ್ದಾನೆ. ಭುವನ್ ಕೂಡಾ ಪ್ರಥಮ್‌ಗೆ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದರಿಂದ ತಾವು ಆತನ ವಿರುದ್ಧ ನೀಡಿದ್ದ ಕೇಸನ ನು ವಾಪಾಸು ತೆಗೆದುಕೊಳ್ಳೋದಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ವಾರ ಬಿಡುಗಡೆಯಾಗಲಿರೋ ರಾಂಧವ ಚಿತ್ರದ ನಾಯಕ ಭುವನ್ ಕೂಡಾ ಎರಡೂ ವರೆವರ್ಷಗಳ ಮಾನಸಿಕ ಹಿಂಸೆಯಿಂದ ಹೊರ ಬಂದು ನಿರಾಳವಾಗಿದ್ದಾರೆ.


ಹಾಗಂತ ಹೀಗೆ ಕ್ಷಮೆ ಕೇಳಿದ ಪ್ರಥಮ್ ನಿಜಕ್ಕೂ ಬದಲಾಗಿದ್ದಾನಾ ಅಂತ ನೋಡಹೋದರೆ, ಈ ಕ್ಷಮೆಯ ಎಪಿಸೋಡಿನ ಕ್ಲೈಮ್ಯಾಕ್ಸಿನಲ್ಲಿ ಮಾಧ್ಯಮಗಳ ಮುಂದೆಯೇ ಆತ ಪ್ರದರ್ಶಿಸಿದ್ದ ವರ್ತನೆಯೇ ಎಲ್ಲವನ್ನೂ ಹೇಳುತ್ತದೆ. ಈತ ತನ್ನ ಹುಚ್ಚುಚ್ಚು ವರ್ತನೆಯನ್ನೇ ಜನ ಇಷ್ಟಪಡುತ್ತಾರೆಂದು ಭ್ರಮಿಸಿದಂತಿದೆ. ಬಾಯಿಗೆ ಬಂದಂತೆ ಅಪದ್ಧ ಮಾತುಗಳನ್ನು ಒದರಾಡೋದೇ ಈತ ತನ್ನ ಮಹಾ ಟ್ಯಾಲೆಂಟು ಅಂದುಕೊಂಡಂತಿದೆ. ಈಗ ಆತನೂ ನಟ ಭಯಂಕರ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿ ನಟಿಸುತ್ತಿದ್ದಾನೆ. ಇಂಥಾ ಮಂಗಾಟಗಳಿಂದ ಸುದ್ದಿಯಲ್ಲಿರೋ ಗೋಜಿಗೆ ಹೋಗದೆ ತನ್ನ ಕೆಲಸ ಕಾರ್ಯಗಳತ್ತ ಗಮನ ಹರಿಸಿದರೆ ಪ್ರಥಮ್ ಒಂದು ಮಟ್ಟಿಗಾದರೂ ಗೆದ್ದಾನು. ಅದು ಬಿಟ್ಟು ಇನ್ನೂ ಹುಚ್ಚಾಟಗಳನ್ನೇ ಅಪ್ಪಿಕೊಂಡರೆ ಏನಾಗುತ್ತದೆ ಅನ್ನೋದಕ್ಕೆ ಚೆನ್ನೈ ಬೀದಿಯಲ್ಲಿ ಬೀಡಾಡಿಯಂತೆ ಓಡಾಡಿಕೊಂಡಿರೋ ಅಣ್ಣ ಹುಚ್ಚ ವೆಂಕಟನೇ ಜೀವಂತ ಸಾಕ್ಷಿಯಂತಿದ್ದಾನೆ. ಆಯ್ಕೆ ಪ್ರಥಮ್ ಮುಂದಿದೆ!

LEAVE A REPLY

Please enter your comment!
Please enter your name here