ಬುದ್ಧನ ಉತ್ಸವದಲ್ಲಿ ಬಡಕಲು ಆನೆಯ ಮೂಕ ರೋಧನೆ! ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ!

[adning id="4492"]

ಬುದ್ಧನೇ ಎದ್ದು ಎದೆಗೊದ್ದರೂ ಈ ಜನರಿಗೆ ಬುದ್ಧಿ ಬರುವುದಿಲ್ಲ!
ಧುನಿಕ ಜಗತ್ತಿನ ಜನರಲ್ಲಿರೋ ತೋರಿಕೆ, ಆಡಂಬರಗಳ ಅಬ್ಬರದ ಮುಂದೆ ದೇವರೂ ಮಂಕಾಗಿ ಮೂಲೆ ಸೇರಿದಂತಿದೆ. ಗೌಜು ಗದ್ದಲದಲ್ಲಿಯೇ ದೇವರನ್ನು ತಲುಪುವ ತೆವಲಿನಿಂದಾಗಿ ಧಾರ್ಮಿಕ ಪರಂಪರೆಯೆಂಬುದು ಸರಿಪಡಿಸಲಾರದಷ್ಟು ಊನಗೊಂಡಿದೆ. ಮನದೊಳಗಿನ ಪ್ರಾರ್ಥನೆಯನ್ನು ಡಿಜೆ ಸೌಂಡಿನ ಮೂಲಕವೇ ಪರಮಾತ್ಮನಿಗೆ ತಲುಪಿಸೋ ಮೂರ್ಖತನಕ್ಕೆ ಬಹುತೇಕರು ಶರಣಾಗಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚುಗಳ ವಾತಾವರಣವೆಲ್ಲವೂ ಈ ಮಾತಿಗೆ ಪೂರಕವಾದ ವಾತಾವರಣವನ್ನೇ ಸೃಷ್ಟಿಸಿಕೊಂಡಿದೆ. ಭಕ್ತಿಯ ತೆಕ್ಕೆಗೆ ಬಿದ್ದ ಮನುಷ್ಯ ದೈವತ್ವ ಪಡೆದುಕೊಳ್ಳಬೇಕು, ಸಕಲ ಜೀವರಾಶಿಗಳನ್ನೂ ಮಾತೃತ್ವ ಧರಿಸಿಕೊಂಡು ಸೋಕಬೇಕೆಂಬ ಸೂಕ್ಷ್ಮತೆ ಮರೆಯಾಗಿ ಭಕ್ತಿಯ ಹೆಸರಲ್ಲಿ ಕ್ರೌರ್ಯ ಮೆರೆಯೋ ಮತಿಹೀನ ಮನಸ್ಥಿತಿಗಳೇ ವಿಜೃಂಭಿಸುತ್ತಿವೆ.


ಇಂಥಾ ಮನುಷ್ಯನ ವಿಕೃತಿ, ರಕ್ಕಸ ಪ್ರವೃತ್ತಿ ಎಂಥಾದ್ದಿರುತ್ತದೆ ಎಂಬುದಕ್ಕೆ ಶ್ರೀಲಂಕಾದಲ್ಲಿ ಧರಾಶಾಯಿಯಾದ ಆನೆಯೊಂದರ ಮೂಕ ರೋಧನೆಗಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ… ಇಲ್ಲಿ ಪ್ರತೀ ವರ್ಷವೂ ಪೆರೆಹಾರ ಎಂಬೊಂದು ಉತ್ಸವ ನಡೆಯುತ್ತದೆ. ಅದು ಬೌದ್ಧ ಪರಂಪರೆಯದ್ದೊಂದು ಹಬ್ಬ. ಈ ಹಬ್ಬದಲ್ಲಿ ಅದ್ದೂರಿಯಾದ ಉತ್ಸವ ನಡೆಯುತ್ತೆ. ಇದು ಹತ್ತು ದಿನಗಳ ಕಾಲ ಮುಂದುವರೆಯುತ್ತದೆ. ಇದರನ್ವರ ಅರವತ್ತು ಆನೆಗಳ ಮೆರವಣಿಗೆಯೂ ನಡೆಯುತ್ತೆ. ಆ ಅರವತ್ತೂ ಆನೆಗಳನ್ನೂ ಕೂಡಾ ನಮ್ಮ ಮೈಸೂರು ದಸರಾ ಮಾದರಿಯಲ್ಲಿಯೇ ಸಂಭಾಳಿಸಲಾಗುತ್ತದೆ. ಈ ಅರವತ್ತು ಆನೆಗಳ ಪೈಕಿ ತಿಕಿರಿ ಎಂಬ ಎಪ್ಪತ್ತು ವರ್ಷದ ಆನೆಯೂ ಸೇರಿಕೊಂಡಿದೆ.


ಈ ಉತ್ಸವದಲ್ಲಿ ಹತ್ತು ದಿನಗಳ ಕಾಲ ಅದೆಷ್ಟೋ ಕಿಲೋಮೀಟರುಗಳಷ್ಟು ಹಾದಿಯನ್ನು ಈ ಅರವತ್ತು ಆನೆಗಳು ಕ್ರಮಿಸಬೇಕಾಗುತ್ತದೆ. ಹೇಳಿಕೇಳಿ ಇದು ಬೌದ್ಧ ಧರ್ಮದ ಉತ್ಸವ. ಯಾರಿಗೂ ಕೆಡುಕು, ನೋವುಂಟುಮಾಡಬಾರದೆಂಬ ಬುದ್ಧನ ಈ ಉತ್ಸವದಲ್ಲಿ ಈ ಬಾರಿ ನಡೆದದ್ದು ಮನುಷ್ಯತ್ವವೇ ಸತ್ತಂಥಾ ಘಟನೆ. ಈ ತಿಕಿರಿ ಎಂಬ ಎಪ್ಪತ್ತು ವರ್ಷದ ಆನೆಯಿದೆಯಲ್ಲಾ? ಅದೇನು ಉಳಿಕೆ ಆನೆಗಳಂತೆ ಮೈ ಕೈ ತುಂಬಿಕೊಂಡು ತೊನೆಯುತ್ತಿರಲಿಲ್ಲ. ತೀರಾ ಆನೆ ಎಂಬ ಕಲ್ಪನೆಯೆ ತದ್ವಿರುದ್ಧವಾಗಿ ಅಸ್ಥಿಪಂಜರದ ಮೂಳೆಗಳ್ನ್ನು ಸಲೀಸಾಗಿ ಲೆಕ್ಕ ಹಾಕುವಷ್ಟರ ಮಟ್ಟಿಗೆ ಬಡಕಲಾಗಿತ್ತು. ಮಲಗಿದರೆ ಎದ್ದು ನಿಲ್ಲಲು ಮಾವುತನ ಸಹಾಯ ಪಡೆಯುವಂಥಾ ನಿಸ್ತೇಜ ಸ್ಥಿತಿಯಲ್ಲಿದ್ದ ಈ ಆನೆಯನ್ನು ಈ ಬಾರಿಯ ಉತ್ಸವದಲ್ಲಿ ಮೆರವಣಿಗೆಗೆ ಬಳಸಿಕೊಳ್ಳಲಾಗಿತ್ತು!


ಈ ಬಡಕಲು ಆನೆಗೆ ರಂಗಾದ ಡಿಸೈನುಗಳ ಶಾಮಿಯಾನ ಹೊದ್ದಿಸಿ, ಅದರ ಮೇಲೊಬ್ಬ ಅವಿವೇಕಿಯನ್ನು ಕೂರಿಸಿ ಈ ಉತ್ಸವವನ್ನು ಚಾಲೂ ಮಾಡಲಾಗಿತ್ತು. ಆದರೆ ಕಾಯಿಲೆಯಿಂದ ಬಸವಳಿದಿದ್ದ ಆ ಆನೆ ಮೆರವಣಿಗೆಯ ಮಧ್ಯೆಯೇ ಕುಸಿದು ಬಿದ್ದಿತ್ತು. ಈ ಗಾಬರಿಯಲ್ಲಿ ಆ ಆನೆಗೆ ಹೊದ್ದಿಸಿದ್ದ ಪೋಶಾಕು ಕಳಚುತ್ತಲೇ ಅದರ ಕರಣಾಜನಕ ಸ್ಥಿತಿ ಜನಸಾಮಾನ್ಯರೆದುರು ಅನಾವರಣಗೊಂಡಿತ್ತು. ಈ ಅನಾರೋಗ್ಯಪೀಡಿತ ಆನೆಗಳನ್ನು ಮೆರವಣಿಗೆಗೆ ಬಳಸಿಕೊಂಡು ಹಿಂಸೆ ನೀಡಿದ ರಕ್ಕಸ ಮನಸ್ಥಿತಿಯವರ ವಿರುದ್ಧ ಶ್ರೀಲಂಕೆಯ ಪ್ರಜ್ಞಾವಂತರು ಸಾಮಾಜಿಕ ಜಾಲತಾಣಗಳ ಮೂಲಕ ಕಿಡಿ ಕಾರಿದ್ದಾರೆ. ಆ ಆನೆಯ ಶೋಚನೀಯ ಸ್ಥಿತಿ ಕಂಡು ಮರುಗುತ್ತಲೇ ಜನ ರೊಚ್ಚಿಗೆದ್ದಿದ್ದಾರೆ.


ಯಾರಿಗೂ ಯಾವ ತೊಂದರೆಯನ್ನೂ ಕೊಡಬಾರದೆಂಬುದು ಬುದ್ಧವಾಣಿ. ಇಂಥಾ ಬುದ್ಧನ ಉತ್ಸವದಲ್ಲಿ ಅನಾರೋಗ್ಯಪೀಡಿತ ಆನೆಗೆ ನೀಡಿರೋ ತೊಂದರೆ ಮನಷ್ಯತ್ವ ಇರುವ ಯಾರನ್ನೋ ಆದರೂ ಕಂಗಾಲು ಮಾಡಿ ಹಾಕುತ್ತದೆ. ಆ ಜನರಿಗೆ ಕೊಂಚ ಮನುಷ್ಯತ್ವ ಇದ್ದಿದ್ದರೂ ತಿಕಿರಿ ಆನೆಗೆ ಚಿಕಿತ್ಸೆ ಕೊಡಿಸುವತ್ತ ಗಮನ ಹರಿಸುತ್ತಿದ್ದರು. ಆದರೆ ಅವರು ಮೆರವಣಿಗೆಗೆ ತಂದು ನಿಲ್ಲಿಸಿ ಹಿಂಸಿಸಿದ್ದಾರೆ. ಆ ಮೆರವಣಿಗೆಯಲ್ಲಿಯೇ ಕುಸಿದು ಬಿದ್ದ ತಿಕಿರಿ ಇನ್ನೂ ಮೇಲಕ್ಕೆದ್ದಿಲ್ಲ. ಅದಿರುವ ಸ್ಥಿತಿ ನೋಡಿದರೆ ಮತ್ತೆ ಮೇಲೇಳಬಹುದೆಂಬ ನಂಬಿಕೆಯೂ ಉಳಿದಿಲ್ಲ. ಅಂತೂ ಭಕ್ತಿಯ ಹೆಸರಲ್ಲಿ ಬೂಟಾಟಿಕೆ ಪ್ರದರ್ಶಿಸೋ ಈ ಜನರಿಗೆ ಬುದ್ಧನೇ ಎದ್ದು ಬಂದು ಎದೆಗೊದ್ದರೂ ಬಿದ್ಧಿ ಬರುವುದು ಕಷ್ಟವಿದೆ!

[adning id="4492"]

LEAVE A REPLY

Please enter your comment!
Please enter your name here