ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಲು ನೆರವಾದ ಯುವರತ್ನ!

ತ್ತಕರ್ನಾಟಕದಲ್ಲಿಂದು ಪ್ರವಾಹದಿಂದ ಉಂಟಾಗಿರೋ ಸ್ಮಶಾಣದಂಥಾ ವಾತಾವರಣ ನೋಡಿದರೆ ಎಂಥಾ ಕಲ್ಲು ಮನಸುಗಳಲ್ಲೂ ಮನುಷ್ಯತ್ವದ ಪಸೆ ಮೂಡಿಕೊಳ್ಳುತ್ತದೆ. ಹೆಚ್ಚಿನದಾಗಿ ಬರದ ಛಾಯೆ ಹೊದ್ದುಕೊಂಡಿರೋ ಈ ಪ್ರದೇಶದ ಭೂ ಭಾಗಗಳು ಮಾತ್ರವಲ್ಲ, ಜನರ ಬದುಕೂ ಕೂಡಾ ಜಲಕಂಟಕದಿಂದ ತತ್ತರಿಸಿ ಹೋಗಿವೆ. ದಿನಗಳ ಹಿಂದಷ್ಟೇ ಒಟ್ಟಿಗೆ ಕಲೆತಿದ್ದವರನೇಕರು ಸುಳಿವೂ ಸಿಗದಂತೆ ನಾಪತ್ತೆಯಾಗಿದ್ದಾರೆ. ರಣಪ್ರವಾಹದಿಂದ ಹೇಗೋ ಬದುಕುಳಿದವರ ಪಾಲಿಗೆ ತಲೆ ಮೇಲಿನ ಸೂರು, ಆಹಾರ, ಉಡಲು ಬಟ್ಟೆ ಸೇರಿದಂತೆ ಯಾವುದೆಂದರೆ ಯಾವುದಕ್ಕೂ ದಿಕ್ಕಿಲ್ಲದ ಸ್ಥಿತಿ.


ಆಳೋ ಮಂದಿ ರಾಜಕೀಯ ಹಳವಂಡಗಳಿಂದ ನರಸತ್ತ ಸ್ಥಿತಿಯಲ್ಲಿದ್ದರೂ, ಸಿಎಂ ಯಡಿಯೂರಪ್ಪನೇ ಕೇಳಿದಷ್ಟು ಪರಿಹಾರ ಕೊಡಲು ನೋಟು ಪ್ರಿಂಟ್ ಹಾಕೋಕಾಗುತ್ತಾ ಎಂಬಂಥಾ ದುರಹಂಕಾರದ ಮಾತುಗಳನ್ನಾಡುತ್ತಿದ್ದರೂ ಮಾನವೀಯ ಮನಸುಗಳು ಉತ್ತರ ಕರ್ನಾಟಕದ ಜನರತ್ತ ಮಿಡಿಯುತ್ತಿವೆ. ವಿವಿಧ ಕ್ರೇತ್ರಗಳ ಜನರು ಕೈಲಾದ ಸಹಾಯ ಮಾಡುತ್ತಿದ್ದಾರೆ. ಸಿನಿಮಾ ತಾರೆಗಳೂ ಕೂಡಾ ಕೈಯೆತ್ತಿ ದಾನ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ಉತ್ತರಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ದೊಡ್ಡ ಮೊತ್ತದ ಸಹಾಯವನ್ನೇ ಮಾಡಿದ್ದಾರೆ.


ಉತ್ತರ ಕರ್ನಾಟಕದಲ್ಲಿ ಉಕ್ಕಿಹರಿದ ಕೃಷ್ಣೆಯ ದೆಸೆಯಿಂದ ಜನ ಕಂಗಾಲಾದಾಗಲೇ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹಾಯ ಮಾಡೋ ಸುಳಿವು ಕೊಟ್ಟಿದ್ದರು. ಇದೀಗ ಅವರ ಈ ಹಣದ ಚೆಕ್ ಅನ್ನು ಯಡಿಯೂರಪ್ಪನವರಿಗೆ ತಲುಪಿಸೋ ಮೂಲಕ ಕೊಟ್ಟ ಮಾತುಳಿಸಿಕೊಂಡಿದ್ದಾರೆ. ಈ ಮೂಲಕ ಯುವರತ್ನ ಮಾದರಿಯಾದ, ಸ್ಫೂರ್ತಿದಾಯಕವಾದ ಹೆಜ್ಜೆಯಿಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ದರ್ಶನ್, ಸುದೀಪ್ ಮುಂತಾದ ನಟರೂ ಕೂಡಾ ಇಂಥಾ ಸಹಾಯಹಸ್ತ ಚಾಚಿದ್ದಾರೆ. ಈ ಮೂಲಕವೇ ತಮ್ಮ ಕಷ್ಟ ಕೋಟಲೆಗಳು ಏನೇ ಇದ್ದರೂ ಪ್ರೀತಿಯಿಂದ ತಮ್ಮ ಸಿನಿಮಾ ನೋಡುತ್ತಾ ಗೆಲ್ಲಿಸೋ ಜನರ ಋಣ ಸಂದಾಯವನ್ನೂ ಮಾಡಿದ್ದಾರೆ.


ಯಾವುದೇ ಸಿನಿಮಾಗಳಿದ್ದರೂ, ಯಾವ ನಟರೇ ಇದ್ದರೂ ಉತ್ತರಕರ್ನಾಟಕದ ಮಂದಿ ಪ್ರೀತಿ ತೋರಿಸುತ್ತಾ ಬಂದಿದ್ದಾರೆ. ಅಲ್ಲಿನ ಜನ ಬಿಸಿಲ ಜೊತೆ ಬೆರೆತ ನಾನಾ ಬಾಧೆಗಳಿಗೆ ಒಡ್ಡಿಕೊಳ್ಳುತ್ತಲೇ ಅದಮ್ಯ ಸಿನಿಮಾ ಪ್ರೇಮ ಹೊಂದಿರುವವರು. ಹಾಸಿ ಹೊದ್ದುಕೊಳ್ಳುವಷ್ಟು ಕಷ್ಟಗಳಿದ್ದರೂ ಸಿನಿಮಾಗಳನ್ನೇ ನಿರಾಳವಾಗೋ ಮನಸ್ಥಿತಿಯ ಜನರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಜನರೇ ಇಂದು ಬದುಕು ಕಳೆದುಕೊಂಡಿರುವಾಗ ಅಂಥವರಿಗೆ ಕೈಲಾದ ಸಹಾಯ ಮಾಡೋದು ಚಿತ್ರರಂಗದ ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ಯುವರತ್ನ ಪುನೀತ್ ರಾಜ್ ಕುಮಾರ್ ಅವರದ್ದು ಪ್ರಶಂಸಾರ್ಹ ಹೆಜ್ಜೆ. ಅವರು ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟುವ ಕಾಯಕಕ್ಕೆ ಕೈ ಜೋಡಿಸಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕಿದೆ.

LEAVE A REPLY

Please enter your comment!
Please enter your name here