ಮೊದಲ ಹೆಜ್ಜೆ ಮರೆಯದ ಸೋನಲ್ ಮೊಂತೆರೋ ಮಾಡಿದ್ದೇನು? ತಾಯಿಬೇರಿನ ಋಣ ಮರೆಯದ ಶೃಂಗಾರದ ಹೊಂಗೇಮರ!

ತಾಯಿಬೇರಿನ ಋಣ ಮರೆಯದ ಶೃಂಗಾರದ ಹೊಂಗೇಮರ!
ಒಂದು ಕಾಲದಲ್ಲಿ ಅವಕಾಶಕ್ಕಾಗಿ ಅಂಡಲೆದು ತಳ ಭದ್ರವಾಗುತ್ತಲೇ ನಿಂತ ನೆಲವನ್ನೂ ಮರೆತು ಹಾರಾಡುವವರೇ ಅಧಿಕ. ಅದರಲ್ಲಿಯೂ ಸಿನಿಮಾ ಜಗತ್ತಿನಲ್ಲಿ ಇಂಥಾ ಹಾರಾಟಗಳ ಪ್ರವರಗಳ ತುಸು ಹೆಚ್ಚೇ ಇದೆ. ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಲೇ ತಾವು ಮೊದಲು ನಟಿಸಿದ ಸಣ್ಣಪುಟ್ಟ ಸಿನಿಮಾಗಳ ಹೆಸರು ಹೇಳಲೂ ಹಿಂದೇಟು ಹಾಕುವವರಿದ್ದಾರೆ. ಇಂಥವರ ನಡುವೆ ಮೊದಲ ಅವಕಾಶ ಸಿಕ್ಕ ಕ್ಷಣಗಳನ್ನು ಮನಸಲ್ಲಿ ಹಸಿರಾಗಿಟ್ಟುಕೊಂಡು ಎಷ್ಟೇ ಎತ್ತರಕ್ಕೇರಿದರೂ ಆ ನಂಟು ಮರೆಯದ ಸೂಕ್ಷ್ಮ ಮನಸ್ಥಿತಿಗಳೂ ಇಲ್ಲಿರೋದು ಸಹನೀಯ ಸಂಗತಿ. ಯೋಗರಾಜ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಮೂಲಕವೇ ಕನ್ನಡಕ್ಕೆ ಆಗಮಿಸಿ ಇದೀಗ ದಂಡಿ ದಂಡಿ ಅವಕಾಶಗಳನ್ನು ತನ್ನದಾಗಿಸಿಕೊಂಡಿರೋ ಸೋನಲ್ ಮೊಂತೆರೋ ಕೂಡಾ ಆ ವಿರಳರ ಗುಂಪಿಗೆ ಸೇರೋ ನಟಿ.


ಪಂಚತಂತ್ರದ ನಾಯಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿರೋ ಸೋನಲ್ ಮಂಗಳೂರಿನ ಹುಡುಗಿ. ತಾನು ನಟಿಯಾಗಬೇಕೆಂಬ ಹೆಬ್ಬಯಕೆಯನ್ನಿಟ್ಟುಕೊಂಡು ಮುಂದುವರೆಯುತ್ತಿದ್ದ ಅವರ ಪಾಲಿಗೆ ಮೊದಲ ಅವಕಾಶ ಸಿಕ್ಕಿದ್ದೂ ಕೂಡಾ ತುಳು ಚಿತ್ರರಂಗದಲ್ಲಿಯೇ. ತುಳುವಿನಲ್ಲೊಂದು ಚಿತ್ರದಲ್ಲಿ ನಾಯಕಿಯಾಗಿಯೂ ಅಭಿನಯಿಸಿದ್ದ ಸೋನಲ್ ಪಾಲಿಗೆ ಆ ನಂತರದಲ್ಲಿ ಅವಕಾಶಗಳು ಸಿಗೋದರಲ್ಲಿ ಸಂದೇಹವೇನೂ ಇರಲಿಲ್ಲ. ಆದರೆ ತುಳು ಚಿತ್ರಗಳಲ್ಲಿ ನಟಿಸುತ್ತಲೇ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಬೇಕೆಂಬ ಕನಸನ್ನು ಸಾಕಿಕೊಂಡಿದ್ದ ಅವರ ಪಾಲಿಗೆ ಪಂಚತಂತ್ರ ಮೊದಲ ಅವಕಾಶ ಕರುಣಿಸಿದೆ. ಆ ಚಿತ್ರ ಯಶ ಕಂಡ ನಂತರವೀಗ ಸೋನಲ್ ಎಂಥವರೂ ಬೆರಗಾಗುವಂತೆ ನಾಯಕಿಯಾಗಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.


ಇದನ್ನೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಇದೀಗ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಸೋನಲ್ ಅದರ ನಡುವೆಯೇ ತುಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ೨ ಎಕರೆ ಎಂಬ ಸಿನಿಮಾದಲ್ಲಿ ಸೋನಲ್ ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಬಹುಮುಖ್ಯವಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರಂತೆ. ಸಾಮಾನ್ಯವಾಗಿ ಹಮ್ಮುಬಿಮ್ಮಿನ ನಟಿಯರಾಗಿದ್ದರೆ ತಾವು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರೋ ಹೊತ್ತಿನಲ್ಲಿ ಇಂಥಾ ಆಫರ್ ಬಂದಿದ್ದರೆ ಕಡೆಗಣಿಸಿ ಬಿಟ್ಟಿರುತ್ತಿದ್ದರೇನೋ. ಆದರೆ ಸೋನಲ್ ಮಾತ್ರ ಈ ಆಫರ್ ಅನ್ನು ಮರು ಮಾತಿಲ್ಲದೆ ಒಪ್ಪಿಕೊಂಡು ನಟಿಸೋ ಮೂಲಕ ತುಳುನಾಡಿನ ಮಂದಿ ಮಾತ್ರವಲ್ಲದೆ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.


೨ ಎಕರೆ ಎಂಬ ತುಳು ಸಿನಿಮಾ ತಂಡದಲ್ಲಿರುವವರೆಲ್ಲ ಸೋನಲ್ ಸ್ನೇಹಿತರಂತೆ. ಒಂದು ಕಾಲದಲ್ಲಿ ಇವರೆಲ್ಲರೂ ಬಣ್ಣದ ಲೋಕದ ಬಗ್ಗೆ ಒಟ್ಟಾಗಿ ಕನಸು ಕಂಡಿದ್ದವರು. ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ನಾನಾ ಪಡಿಪಾಟಲುಗಳನ್ನೂ ಪಟ್ಟಿದ್ದರು. ಅಂಥಾ ದಿನಗಳಲ್ಲಿ ಒಟ್ಟಿಗೆ ಇದ್ದ ಇವರೆಲ್ಲ ಈಗ ಒಂದೊಂದು ದಿಕ್ಕಿನತ್ತ ಸಾಗಿದರೂ ಮತ್ತೆ ಒಂದಾಗಿದ್ದಾರೆ. ಸೋನಲ್ ಅಂತೂ ಕನ್ನಡ ಚಿತ್ರರಂಗದ ಮುಖ್ಯ ನಾಯಕಿಯಾಗುವತ್ತ ಪಯಣ ಆರಂಭಿಸಿದ್ದಾರೆ. ಆದರೆ ಈ ತಂಡ ೨ ಎಕರೆ ಚಿತ್ರದ ಕಥೆ ಸಿದ್ಧಪಡಿಸುವಾಗಲೇ ಅತಿಥಿ ಪಾತ್ರವೊಂದನ್ನು ಸೋನಲ್‌ಗಾಗಿ ಮೀಸಲಿಟ್ಟಿದ್ದರಂತೆ. ಸ್ನೇಹಿತರ ಕಡೆಯಿಂದ ಈ ಬಗ್ಗೆ ತಿಳಿಯುತ್ತಲೇ ಬ್ಯುಸಿಯಾಗಿದ್ದರೂ ಹೋಗಿ ಚಿತ್ರೀಕರಣ ಮುಗಿಸಿಕೊಟ್ಟು ತನ್ನ ಸ್ನೇಹಿತರಿಗೆ ಸೋನಲ್ ಬೆಂಬಲ ಕೊಟ್ಟಿದ್ದಾರೆ. ತನಗೆ ದೊಡ್ಡ ಬ್ರೇಕ್ ನೀಡಿದ ಕನ್ನಡವನ್ನೇ ಕಡೆಗಣಿಸುವಂಥಾ ದೊಡ್ಡಸ್ತಿಕೆ ತೋರಿಸುವ ರಶ್ಮಿಕಾ ಮಂದಣ್ಣಳಂಥಾ ನಟಿಯರ ನಡುವೆ ಸೋನಲ್ ನಿಜಕ್ಕೂ ಭಿನ್ನವಾಗಿ ಕಾಣಿಸುತ್ತಾರೆ.

LEAVE A REPLY

Please enter your comment!
Please enter your name here