ನಿಗೂಢದ ನಾನಾಮುಖ ಬಚ್ಚಿಟ್ಟುಕೊಂಡಿರೋ ನಾಕುಮುಖ ಟ್ರೇಲರ್!

[adning id="4492"]

ಹಾರರ್ ಥ್ರಿಲ್ಲರ್ ಕಥೆಗಳಿಗಾಗಿ ರೋಮಾಂಚನದಿಂದಲೇ ಎದುರು ನೋಡುವ ಅಗಾಧ ಪ್ರಮಾಣದ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಹಾಗಿರುವಾಗ ಹೊಸ ತಂಡವೊಂದು ಪ್ರಯೋಗಾತ್ಮಕ ಅಂಶಗಳೊಂದಿಗೆ ಈ ಜಾನರಿನದ್ದೊಂದು ಚಿತ್ರ ಮಾಡಿದೆಯೆಂದರೆ ಆ ಪ್ರೇಕ್ಷಕ ವರ್ಗದ ಚಿತ್ರ ಅದರತ್ತ ಆಕರ್ಶಿತವಾಗುತ್ತೆ. ಸದ್ಯ ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಬಿಡುಗಡೆಯ ಹಾದಿಯಲ್ಲಿರೋ ನಾಕುಮುಖ ಎಂಬ ಚಿತ್ರ ಕೂಡಾ ಅದೇ ಜಾಡಿನದ್ದು. ಹೊಸಬರ ತಂಡ ಹುರುಪಿನಿಂದ ರೂಪಿಸಿರೋ ನಾಕುಮುಖದ ಟ್ರೇಲರ್ ಬಿಡುಗಡೆಯಾಗಿದೆ. ನಿಗೂಢದ ನಾನಾ ಮುಖಗಳನ್ನು ಬಚ್ಚಿಟ್ಟುಕೊಂಡಿರೋ ಈ ಟ್ರೈಲರ್ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಪಡೆಯೋ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.


ಖುಷನ್  ಗೌಡ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಶೀರ್ಷಿಕೆಯಲ್ಲಿಯೇ ಸೆಳೆತ ಹೊಂದಿರುವ ನಾಕುಮುಖ ಅವರ ಪಾಲಿಗೆ ಮೊದಲ ಚಿತ್ರ. ಈ ಮೂಲಕವೆ ದರ್ಶನ್ ರಾಘವಯ್ಯ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಅಮೃತಾ ಅಯ್ಯಂಗಾರ್, ಪದ್ಮಾ ಶಿವಮೊಗ್ಗ, ಶಂಕರ್ ಭಟ್, ಅವಿಶ್ ಮುಂತಾದವರ ತಾರಾಗಣ ಮತ್ತು ಬೆರಗಾಗಿಸುವಂಥಾ ಥರ ಥರದ ಪಾತ್ರಗಳೂ ಈ ಚಿತ್ರದಲ್ಲಿವೆ. ಈಗ ಬಿಡುಗಡೆಯಾಗಿರೋ ಟ್ರೇಲರ್ ಒಟ್ಟಾರೆ ಚಿತ್ರದ ನಿಗೂಢ ಕಥೆಗೆ ಕನ್ನಡಿಯಾಗುತ್ತಲೇ ಈ ಹಾರರ್ ಥ್ರಿಲ್ಲರ್ ಕಥನದತ್ತ ಕಣ್ಣಿಡುವಂತೆ ಮಾಡುವಲ್ಲಿ ಯಶ ಕಂಡಿದೆ.


ಧ್ವನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ದರ್ಶನ್ ರಾಘವಯ್ಯ ಅವರೇ ನಿರ್ಮಾಣ ಮಾಡಿರೋ ನಾಕುಮುಖ ಚಿತ್ರಕ್ಕೆ ಈ ಶೀರ್ಷಿಕೆಯನ್ನು ಯಾಕಿಡಲಾಗಿದೆ ಎಂಬ ಪ್ರಶ್ನೆಗೆ ನಿರ್ದೇಶಕರ ಕಡೆಯಿಂದ ಸ್ಪಷ್ಟ ಕ್ಲಾರಿಫಿಕೇಷನ್ನು ಸಿಗುತ್ತದೆ. ಈ ಕಥೆಯಲ್ಲಿ ಪ್ರೆಸ್, ಪೊಲೀಸ್, ರಾಜಕಾರಣ ಮತ್ತು ಫ್ಯಾಮಿಲಿ ಅಂಶಗಳಿವೆಯಂತೆ. ಇಲ್ಲಿನ ಒಂದು ಕಥೆ ಇಂಥಾ ನಾಕು ಮುಖಗಳೊಂದಿಗೆ ರೋಚಕ ಸಂಚಾರ ಮಾಡೋದರಿಂದ ಅದಕ್ಕೆ ಪೂರಕವಾಗಿ ಈ ಟೈಟಲ್ ಅನ್ನು ನಿಗಧಿ ಪಡಿಸಲಾಗಿದೆಯಂತೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಗೆ ಒಂದು ನಿಗೂಢ ಕ್ರೈಂನ ಸಾಥ್ ಕೂಡಾ ಇದೆ. ಅದನ್ನು ಪತ್ತೆಹಚ್ಚೋ ಹಾದಿಯಲ್ಲಿ ಹಾರರ್ ಜಾಡಿನಲ್ಲಿ ಸಾಗೋ ಈ ಕಥೆ ಮಧ್ಯರಾತ್ರಿಯಲ್ಲಿಯೇ ಜೀವ ಪಡೆದಿದ್ದೆಂಬುದು ವಿಶೇಷ.


ನಾಕುಮುಖದಲ್ಲಿ ಪ್ರತಿಯೊಂದನ್ನೂ ವಿಶೇಷವಾದ ಗಮನಕೊಟ್ಟೇ ರೂಪಿಸಲಾಗಿದೆ. ಅದಕ್ಕೆ ತಕ್ಕುದಾಗಿ ಮೂರು ಹಾಡುಗಳೂ ರೂಪಿಸಲ್ಪಟ್ಟಿವೆ. ಅವುಗಳಿಗೆ ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ತಾಮತ್ರಿಕವಾಗಿಯೂ ಹಲವಾರು ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿರೋ ನಾಕುಮುಖದ ಹಾರರ್ ದೃಷ್ಯಾವಳಿಗಳು ನವೀನ ತಂತ್ರಜ್ಞಾನದೊಂದಿಗೆ ಕಳೆಗಟ್ಟಿಕೊಂಡಿವೆಯಂತೆ. ಈ ಚಿತ್ರಕ್ಕೆ ಪಿ ಮರಿಸ್ವಾಮಿ ಸಂಕಲನ, ರಂಗಸ್ವಾಮಿ ಎಸ್ ಛಾಯಾಗ್ರಹಣ, ಹಲಗೂರು ವೆಂಕಟೇಶ್ ಸಂಭಾಷಣೆ, ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನವಿದೆ. ವಿರಳವಾದ ಮನಸೆಳೆಯೋ ಲೊಕೇಷನ್ನುಗಳಲ್ಲಿ ಚಿತ್ರೀಕರಣಗೊಂಡಿರೋ ಈ ಚಿತ್ರದ ಬಿಡುಗಡೆ ದಿನಾಂಕ ಇಷ್ಟರಲ್ಲಿಯೇ ಜಾಹೀರಾಗಲಿದೆ.

[adning id="4492"]

LEAVE A REPLY

Please enter your comment!
Please enter your name here