ಕೋಮಲ್ ಮೇಲಿನ ಹಲ್ಲೆ ಹಿಂದೆ ಹುಡುಗಿ ಶೋಕಿ ಗಾಂಜಾ ನಶೆ! ಇನ್ನೂ ಆಕ್ಟಿವ್ ಆಗಿದೆಯಾ ಶ್ರೀರಾಂಪುರ ಪೊರ್ಕಿ ದುನಿಯಾ?

[adning id="4492"]

ಇನ್ನೂ ಆಕ್ಟಿವ್ ಆಗಿದೆಯಾ ಶ್ರೀರಾಂಪುರ ಪೊರ್ಕಿ ದುನಿಯಾ? 
ಮಂತ್ರಿಮಾಲ್ ಎದುರು ನಟ ಕೋಮಲ್ ಮೇಲೆ ನಡೆದಿರೋ ಹಲ್ಲೆ ಪ್ರಕರಣ ಕಂಡು ಎಲ್ಲರೂ ಕಂಗಾಲಾಗಿದ್ದಾರೆ. ವಿಜಿ ಎಂಬ ಅಪಾಪೋಲಿಯೊಬ್ಬ ಸಾರ್ವಜನಿಕ ಪ್ರದೇಶದಲ್ಲಿಯೇ ಕೋಮಲ್ ಮೇಲೆ ಹಲ್ಲೆ ಮಾಡಿರೋ ಪ್ರಕರಣವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಇಂಥಾ ಹೊಡೆದಾಟ ಬಡಿದಾಟಗಳಿಂದ ಸದಾ ದೂರವಿರೋ ಸಭ್ಯ ನಟ ಕೋಮಲ್. ಇಂಥವರ ಮೇಲೆ ಸಾರ್ವಜನಿಕ ಪ್ರದೇಶದಲ್ಲಿ ಹಲ್ಲೆ ನಡೆಯುತ್ತದೆಯೆಂದರೆ ಯಾರಿಗಾದರೂ ದಿಗಿಲಾಗದಿರಲು ಸಾಧ್ಯವಿಲ್ಲ. ಹಾಗಾದರೆ ಈ ಪ್ರಕರಣದ ಹಿಂದೇನಿದೆ ಎಂಬ ಪ್ರಶ್ನೆಗೆ ಪೊಲೀಸ್ ಅಧಿಕಾರಿಗಳು ಬೆಚ್ಚಿಬೀಳಿಸುವಂಥಾ ಉತ್ತರವನ್ನೇ ರವಾನಿಸಿದ್ದಾರೆ.


ಮಗಳನ್ನು ಸ್ಕೂಲಿಗೆ ಬಿಡಲು ಕಾರಿನಲ್ಲಿ ಹೋಗುತ್ತಿದ್ದಾಗ ವಿಜಿ ಬೈಕಿನಲ್ಲಿ ಬಂದವನೇ ಬೇಕಂತಲೇ ಕೆಣಕಿ ಕೋಮಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಾಗೆ ಹಿಂಬದಿಯಿಂದ ಬಂದು ಎಷ್ಟೋ ದೂರದಿಂದ ರಸ್ತೆಯಲ್ಲಿಯೇ ಚಮಕ್ ಕೊಡುತ್ತಿದ್ದ ವಿಜಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ನಡೆಸಿರೋದಾಗಿಯೂ ಮಲ್ಲೇಶ್ವರ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. ಇದಲ್ಲದೇ ಹಾಗೆ ಹಲ್ಲೆ ನಡೆಸೋ ಸಂದರ್ಭದಲ್ಲಿ ವಿಜಿ ಗಾಂಜಾ ಮತ್ತಿನಲ್ಲಿದ್ದ. ಆತನ ಜೊತೆ ಹುಡುಗಿಯೊಬ್ಬಳೂ ಇದ್ದಳು. ಹೀಗೆ ಗಾಂಜಾ ಮತ್ತಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡೋ ಉಮೇದಿಗೆ ಬಿದ್ದ ವಿಜಿ ಕೋಮಲ್ ಮೇಲೆ ಹಲ್ಲೆ ನಡೆಸಿರಬಹುದೆಂಬ ಅನುಮಾನಗಳೂ ಹರಿದಾಡುತ್ತಿವೆ.


ಅಷ್ಟಕ್ಕೂ ಈ ವಿಜಿ ಯಾರು? ಈತನ ಹಿನ್ನೆಲೆ ಏನೆಂಬುದನ್ನು ಕೆದಕಿದರೆ ಅದೆಲ್ಲವೂ ಒಂದು ಕಾಲಕ್ಕೆ ರೌಡಿಸಂನ ದಾವಾನಲದಂತಿದ್ದ ಶ್ರೀರಾಂಪುರದತ್ತ ಬೆರಳು ತೋರುತ್ತವೆ. ಈ ವಿಜಿ ಶ್ರೀರಾಂಪುರದಲ್ಲಿ ಅಳಿದುಳಿದಿರೋ ಪಾತಕದ ಸಾಹಚರ್ಯದಿಂದಲೇ ಬೆಳೆದಿದ್ದ ಹುಂಬ. ಶ್ರೀರಾಂಪುರದ ಆಸುಪಾಸುಗಳಲ್ಲಿಯೂ ಇವನ ದಾಂಧಲೆಗಳು ಆಗಾಗ ನಡೆಯುತ್ತಿರುತ್ತವೆ. ಈ ಹಿಂದೆ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡುತ್ತಿದ್ದನಂತೆ. ಸದಾ ಗಾಂಜಾ ಮತ್ತಲ್ಲಿ ಮಿಂದೇಳುತ್ತಾ ಹುಚ್ಚನಂತೆ ಇಂಥಾ ಅನಾಹುತಕಾರಿ ಕೆಲಸ ಮಾಡುವ ವಿಜಿ ಮೇಲೆ ಮಲ್ಲೇಶ್ವರ ಪೊಲೀಸರೀಗ ಸರಿಯಾದೊಂದು ಕೇಸು ಜಡಿದಿದ್ದಾರೆ. ಡಿಸಿಪಿ ಶಶಿಕುಮಾರ್ ವಿಜಿಯ ಹಿಂದೆ ಮುಂದೆ ಇರೋ ಅಷ್ಟೂ ಪುಢಾರಿಗಳನ್ನು ಹೆಡೆಮುರಿ ಕಟ್ಟಲೂ ತಯಾರಾಗಿದ್ದಾರೆ.


ಆದರೆ ಈಗ ಪೊಲೀಸರ ಕಡೆಯಿಂದ ಹೊರ ಬಿದ್ದಿರೋದು ಪ್ರಾಥಮಿಕ ತನಿಖೆಯಿಂದ ಜಾಹೀರಾದ ಅಂಶಗಳಷ್ಟೆ. ಆದರೆ ಗಾಂಜಾಗಿರಾಕಿ ವಿಜಿ ಮೂಲಕ ಕೋಮಲ್ ಮೇಲೆ ಯಾರಾದರೂ ಹಲ್ಲೆ ನಡೆಸಿರಬಹುದಾ ಎಂಬಂಥಾ ಅನುಮಾನಗಳೂ ಇದ್ದೇ ಇವೆ. ಹೇಳಿಕೇಳಿ ಇದು ಸಿನಿಮಾ ಲೋಕ. ಸಿನಿಮಾ ನಿರ್ಮಾಣಕ್ಕೆ ಬಡ್ಡಿಗೆ ಕಾಸು ಬಿಡೋ ಪೈನಾನ್ಸ್ ದಂಧೆಯಂತೂ ಗಾಂಧಿನಗರದ ಗುಂಟ ಭೀಕರವಾಗಿಯೇ ಹಬ್ಬಿಕೊಂಡಿದೆ. ಕೋಮಲ್ ಏನಾದರೂ ಇಂಥಾ ಆರ್ಥಿಕ ವ್ಯವಹಾರದಲ್ಲಿ ತಗುಲಿಕೊಂಡಿದ್ದಾರಾ? ಈ ಕಾರಣದಿಂದಲೇ ಶ್ರೀರಾಂಪುರದ ಹುಡುಗರ ಮೂಲಕ ಕೋಮಲ್ ಮೇಲೆ ಹಲ್ಲೆ ನಡೆಸಲಾಗಿದೆಯಾ ಎಂಬಂಥಾ ಅನುಮಾನಗಳೂ ಇವೆ. ಇದೆಲ್ಲದಕ್ಕೂ ಪೊಲೀಸ್ ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಿದೆ.

[adning id="4492"]

LEAVE A REPLY

Please enter your comment!
Please enter your name here